ಗಾನಕೋಗಿಲೆ ಎಸ್. ಜಾನಕಿ ಅವರ ಅಗಲಿಕೆ ಕನ್ನಡ ಸಂಗೀತ ಲೋಕಕ್ಕೆ ತುಂಬಲಾರದ ನಷ್ಟವಾಗಿದ್ದು, ಅವರ ಸುಮಧುರ ಕಂಠ ಮತ್ತು ಸಂಗೀತ ಸಾಧನೆ ಸದಾ ಕನ್ನಡಿಗರ ಮನಸ್ಸಿನಲ್ಲಿ ಜೀವಂತವಾಗಿರಲಿದೆ ಎಂದು ವಿವಿಧ ಗಣ್ಯರು ಅಭಿಪ್ರಾಯಪಟ್ಟರು.
ನಗರದ ಕೊಡಗು ಪತ್ರಿಕಾ ಭವನದ ಸಭಾಂಗಣದಲ್ಲಿ ಗುರುವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ), ಜಿಲ್ಲಾ ಲೇಖಕರ ಮತ್ತು ಕಲಾವಿದರ ಬಳಗ, ಕೊಡಗು ಪತ್ರಿಕಾ ಭವನ ಟ್ರಸ್ಟ್, ಕೊಡಗು ಜಿಲ್ಲಾ ಮಹಿಳಾ ಬರಹಗಾರರ ಸಂಘ, ಮಡಿಕೇರಿ ತಾಲ್ಲೂಕು ಕಸಾಪ ಘಟಕ ಹಾಗೂ ಸಮರ್ಥ ಕನ್ನಡಿಗರ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಗಾನಕೋಗಿಲೆ ಎಸ್. ಜಾನಕಿ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಎಸ್. ಜಾನಕಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಅವರು ಹಾಡಿದ ಜನಪ್ರಿಯ ಕನ್ನಡ ಗೀತೆಗಳನ್ನು ಹಾಡುವ ಮೂಲಕ ಭಾವನಮನ ಅರ್ಪಿಸಲಾಯಿತು. ಬಳಿಕ ಒಂದು ನಿಮಿಷ ಮೌನಾಚರಣೆ ನಡೆಸಿ ಅಗಲಿದ ಗಾಯಕಿಗೆ ಗೌರವ ಸಲ್ಲಿಸಲಾಯಿತು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ಮಾತನಾಡಿ, ಎಸ್. ಜಾನಕಿ ಅವರ ಆರು ದಶಕಗಳ ಸುದೀರ್ಘ ಸಂಗೀತ ಪಯಣ ಭಾರತೀಯ ಸಂಗೀತ ಇತಿಹಾಸದಲ್ಲಿ ಅಳಿಸಲಾಗದ ಅಧ್ಯಾಯವಾಗಿದೆ. ತಮ್ಮ ಸುಮಧುರ ಕಂಠದ ಮೂಲಕ ಕೋಟ್ಯಂತರ ಕನ್ನಡಿಗರ ಹೃದಯದಲ್ಲಿ ಅವರು ಶಾಶ್ವತ ಸ್ಥಾನ ಗಳಿಸಿದ್ದು, ಅವರ ಅಗಲಿಕೆಯಿಂದ ಕನ್ನಡ ಸಂಗೀತ ಕ್ಷೇತ್ರಕ್ಕೆ ಅಪಾರ ನಷ್ಟವಾಗಿದೆ ಎಂದು ಹೇಳಿದರು.
ಜಿಲ್ಲಾ ಕಸಾಪದ ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್ ಮಾತನಾಡಿ, ಭಾರತೀಯ ಚಿತ್ರರಂಗದಲ್ಲಿ ತಮ್ಮ ವಿಶಿಷ್ಟ ಗಾಯನ ಶೈಲಿಯಿಂದ ಕೋಟ್ಯಂತರ ಅಭಿಮಾನಿಗಳ ಮನ ಗೆದ್ದ ಎಸ್. ಜಾನಕಿ ಸಂಗೀತ ಲೋಕದ ಧ್ರುವತಾರೆ ಎಂದರು. ಇತರ ಭಾಷೆಗಳಿಗಿಂತಲೂ ಕನ್ನಡದಲ್ಲಿ ಹೆಚ್ಚು ಹಾಡುಗಳನ್ನು ಹಾಡಿರುವ ಅವರು, ಡಾ. ರಾಜ್ಕುಮಾರ್, ಪಿ.ಬಿ. ಶ್ರೀನಿವಾಸ್ ಹಾಗೂ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರೊಂದಿಗೆ ಹಾಡಿರುವ ಯುಗಳಗೀತೆಗಳು ಇಂದಿಗೂ ಸದಾ ಹಸಿರಾಗಿವೆ ಎಂದು ಸ್ಮರಿಸಿದರು.
ಲೇಖಕರ ಬಳಗದ ಅಧ್ಯಕ್ಷ ಟಿ.ಜಿ. ಪ್ರೇಮಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಗೀತವನ್ನು ಕೇವಲ ವೃತ್ತಿಯಾಗಿ ಅಲ್ಲ, ತಪಸ್ಸಾಗಿ ಸ್ವೀಕರಿಸಿದ ಎಸ್. ಜಾನಕಿ ತಮ್ಮ ಕಂಠಸಿರಿಯ ಮೂಲಕ ಕೋಟ್ಯಂತರ ಸಂಗೀತಾಭಿಮಾನಿಗಳ ಹೃದಯ ಗೆದ್ದಿದ್ದಾರೆ ಎಂದು ಹೇಳಿದರು.
ಲೇಖಕರ ಬಳಗದ ಮಾಜಿ ಅಧ್ಯಕ್ಷ ಲೋಕನಾಥ್ ಅಮೆಚೂರ್ ಮಾತನಾಡಿ, ಮಕ್ಕಳ ಧ್ವನಿಯಿಂದ ಹಿಡಿದು ವೃದ್ಧರ ಧ್ವನಿಯವರೆಗೆ ಯಾವುದೇ ಪಾತ್ರಕ್ಕೆ ಜೀವ ತುಂಬುವ ಅಪರೂಪದ ಗಾಯನ ಸಾಮರ್ಥ್ಯ ಎಸ್. ಜಾನಕಿ ಅವರ ವಿಶೇಷತೆಯಾಗಿತ್ತು ಎಂದು ಹೇಳಿದರು.
ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಪ್ರಧಾನ ಆಯುಕ್ತ ಕೆ.ಟಿ. ಬೇಬಿ ಮ್ಯಾಥ್ಯೂ ಮಾತನಾಡಿ, ಎಸ್. ಜಾನಕಿ ಅವರ ಸಂಗೀತ ಭಾರತದ ಸಾಂಸ್ಕೃತಿಕ ಪರಂಪರೆಯ ಹೆಮ್ಮೆಯ ಪ್ರತೀಕವಾಗಿದೆ ಎಂದು ಅಭಿಪ್ರಾಯಪಟ್ಟರು.
ಲೇಖಕಿ ಜಲಜಾ ಶೇಖರ್ ಮಾತನಾಡಿ, ಜಾನಕಿ ಅವರ ಧ್ವನಿಗೆ ಸಾವಿಲ್ಲ. ಅವರ ಹಾಡುಗಳು ಮುಂದಿನ ಹಲವು ತಲೆಮಾರುಗಳಿಗೂ ಸಂಗೀತಾಭಿಮಾನಿಗಳನ್ನು ರಂಜಿಸುತ್ತಲೇ ಇರುತ್ತವೆ ಎಂದು ಹೇಳಿದರು.
ಜಿಲ್ಲಾ ಮಹಿಳಾ ಬರಹಗಾರರ ಸಂಘದ ಅಧ್ಯಕ್ಷೆ ಪುದಿಯನೆರವನ ರೇವತಿ ರಮೇಶ್ ಮಾತನಾಡಿ, ಸುಮಾರು 48 ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿ ಅಪರೂಪದ ದಾಖಲೆಯನ್ನು ನಿರ್ಮಿಸಿರುವ ಎಸ್. ಜಾನಕಿ ಅವರ ಸಂಗೀತ ಪಯಣ ಭಾರತೀಯ ಸಂಗೀತ ಲೋಕದ ಅಮೂಲ್ಯ ಸಂಪತ್ತಾಗಿದೆ ಎಂದು ಹೇಳಿದರು.
ಮಡಿಕೇರಿ ತಾಲ್ಲೂಕು ಕಸಾಪದ ಮಾಜಿ ಅಧ್ಯಕ್ಷ ಅಂಬೇಕಲ್ ನವೀನ್ ಮಾತನಾಡಿ, ಅಪಾರ ಜನಪ್ರಿಯತೆಯ ನಡುವೆಯೂ ಎಸ್. ಜಾನಕಿ ಅಹಂಕಾರದಿಂದ ದೂರವಿದ್ದು, ಸರಳತೆಯ ಸಾಕಾರಮೂರ್ತಿಯಾಗಿ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು ಎಂದು ಸ್ಮರಿಸಿದರು.
ಈ ವಿಶೇಷ ಸುದ್ದಿ ಓದಿದ್ದೀರಾ?ರಾಜ್ಯದ ಟಾಪ್-5 ಗುರಿಯತ್ತ ಚಾಮರಾಜನಗರ: ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಳಕ್ಕೆ ಶಿಕ್ಷಣ ಇಲಾಖೆಯ ಮಹತ್ವದ ಯೋಜನೆ
ಕಾರ್ಯಕ್ರಮದಲ್ಲಿ ಲೇಖಕರ ಬಳಗದ ಪ್ರಧಾನ ಕಾರ್ಯದರ್ಶಿ ಭಾರತಿ ರಮೇಶ್, ಜಿಲ್ಲಾ ಕಸಾಪ ಸಮಿತಿಯ ಕೋಶಾಧಿಕಾರಿ ಎಸ್.ಎಸ್. ಸಂಪತ್ ಕುಮಾರ್, ಮಡಿಕೇರಿ ತಾಲ್ಲೂಕು ಕಸಾಪ ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್, ಕುಶಾಲನಗರ ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಸಿ. ದಿನೇಶ್, ಸಮರ್ಥ ಕನ್ನಡಿಗರ ಸಂಸ್ಥೆಯ ಜಿಲ್ಲಾ ಪ್ರಧಾನ ಸಂಚಾಲಕಿ ಕೆ. ಜಯಲಕ್ಷ್ಮಿ, ಉಪನ್ಯಾಸಕಿ ಪ್ರತಿಮಾ ರೈ, ಲೇಖಕರ ಬಳಗದ ಸಹ ಕಾರ್ಯದರ್ಶಿ ಕೆ.ವಿ. ಉಮೇಶ್, ಸಮಿತಿಯ ಸದಸ್ಯ ನೆರವಂಡ ಉಮೇಶ್, ಕಸಾಪ ಸದಸ್ಯ ಬಿ.ಎಂ.ಕೆ. ವಾಸು ರೈ, ಮಹಿಳಾ ಬರಹಗಾರರ ಸಂಘದ ಪ್ರಮುಖರಾದ ಬೈತಡ್ಕ ಜಾನಕಿ ಬೆಳ್ಳಿಯಪ್ಪ, ಕೂಪದೀರ ಸುಂದರಿ ಮಾಚಯ್ಯ, ಕಟ್ರತನ ಲಲಿತಾ ಅಯ್ಯಣ್ಣ, ಚೊಕ್ಕಾಡಿ ಪ್ರೇಮ ರಾಘವಯ್ಯ, ತೆನ್ನಿರಾ ರಾಧಾ ಪೊನ್ನಪ್ಪ ಸೇರಿದಂತೆ ಹಲವರು ಇದ್ದರು.




