ಪತ್ರಕರ್ತರನ್ನು ರಾಜಕಾರಣಿಗಳು ಪ್ರಚಾರಕ್ಕೆ ಬಳಸಿಕೊಳ್ಳುತ್ತಾರೆ. ಆದರೆ, ಅವರ ಶ್ರೇಯೋಭಿವೃದ್ಧಿಗೆ ಚಿಂತನೆ ಮಾಡುವುದಿಲ್ಲ. ಪತ್ರಕರ್ತರ ಮೇಲೆ ಜವಾಬ್ದಾರಿ ಹಾಗೂ ಒತ್ತಡವಿದೆ ಎಂದು ವಿರಾಜಪೇಟೆ ಶಾಸಕ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಹೇಳಿದರು.
ಕೊಡಗು ಜಿಲ್ಲಯ ಮಡಿಕೇರಿಯಲ್ಲಿ ನಡೆದ ಪ್ರೆಸ್‌ಕ್ಲಬ್ ಬೆಳ್ಳಿ ಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. “ಸಂವಿಧಾನ ನೀಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯದ ಹಿಂದೆ ಮಾಧ್ಯಮದ ಅಭಿವ್ಯಕ್ತಿ ಸ್ವಾತಂತ್ರ್ಯ ಅಡಗಿದೆ. ಪತ್ರಿಕಾ ಸ್ವಾತಂತ್ರ್ಯದಿಂದ ಆಡಳಿತದಲ್ಲಾಗುವ ಲೋಪದೋಷಗಳನ್ನು ಪತ್ತೆ ಮಾಡಿ ಸರಿದಾರಿಗೆ ಕೊಂಡೊಯ್ಯುವ ಕೆಲಸವನ್ನು ಪತ್ರಕರ್ತರು ಮಾಡುತ್ತಿರುವುದು ಶ್ಲಾಘನೀಯ” ಎಂದರು.
“ರಾಜಕಾರಣಿಗಳು ಹಾಗೂ ಪತ್ರಕರ್ತರು ಒತ್ತಡದಲ್ಲಿ ಕೆಲಸ ಮಾಡುತ್ತ ವೈಯಕ್ತಿಕ ಜೀವನ ಕಳೆದುಕೊಳ್ಳುತ್ತಿದ್ದೇವೆ. ಹಲವು ಪತ್ರಕರ್ತರು ಇಂದಿಗೂ ಸಂಕಷ್ಟದಲ್ಲಿ ಜೀವನ ನಡೆಸುತ್ತಿದ್ದಾರೆ. ಈ ಹಿನ್ನೆಲೆ ಜಿಲ್ಲಾ ಪತ್ರಕರ್ತರು ಹಲವು ವರ್ಷಗಳಿಂದ ನಿವೇಶನಕ್ಕಾಗಿ ಬೇಡಿಕೆ ಇಡುತ್ತಿದ್ದಾರೆ. ಆದರೆ, ಜಾಗದ ಕೊರತೆ, ಆಡಳಿತಾತ್ಮಕ ಸಮಸ್ಯೆಯಿಂದ ಇದು ಸಾಧ್ಯವಾಗುತ್ತಿಲ್ಲ. ಪತ್ರಕರ್ತರ ಸಹಕಾರಿ ಸಂಘದ ಮೂಲಕ ಖಾಸಗಿ ಅಥವಾ ಸರ್ಕಾರಿ ಜಾಗವನ್ನು ಖರೀದಿಗೆ ಮುಂದಾಗಬೇಕೆಂದು ಸಲಹೆ ನೀಡಿದರು. ಇದಕ್ಕೆ ಅಗತ್ಯ ಸಹಕಾರ ನೀಡುತ್ತೇನೆ” ಎಂದು ಶಾಸಕರು ಭರವಸೆ ನೀಡಿದರು.
ಈ ಸುದ್ದಿ ಓದಿದ್ದೀರಾ?: ಕಲಬುರಗಿ | ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವ; ಹೈಕ ಅಭಿವೃದ್ಧಿಗೆ ₹5 ಸಾವಿರ ಕೋಟಿ: ಸಿಎಂ ಸಿದ್ದರಾಮಯ್ಯ
ಕಾರ್ಯಕ್ರಮದಲ್ಲಿ ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಬೆಳ್ಳಿ ಹಬ್ಬ ಆಚರಣಾ ಸಮಿತಿ ಅಧ್ಯಕ್ಷ ಉಳ್ಳಿಯಡ ಪೂವಯ್ಯ, ಗೌರವಧ್ಯಕ್ಷೆ ಬಿ.ಆರ್ ಸವಿತಾ ರೈ, ಪ್ರಜ್ಞಾ ರಾಜೇಂದ್ರ, ಆನಂದ್ ಕೊಡಗು, ಪ್ರತಿಮಾ ಹರೀಶ್ ರೈ, ಕೆ.ಕೆ ರೆಜಿತ್ ಕುಮಾರ್, ಬಾಚರಣಿಯಂಡ ಅನು ಕಾರ್ಯಪ್ಪ, ಪ್ರೆಸ್‌ಕ್ಲಬ್ ಮಾಜಿ ಅಧ್ಯಕ್ಷ ಎಚ್.ಟಿ. ಅನಿಲ್, ಡಾ. ಉಳ್ಳಿಯಡ ಪೂವಯ್ಯ, ಹಿರಿಯ ಪತ್ರಕರ್ತರಾದ ಬಿ.ಜಿ. ಅನಂತಶಯನ, ಜಿ. ರಾಜೇಂದ್ರ, ಅಜ್ಜಿನಿಕಂಡ ಮಹೇಶ್ ನಾಚಯ್ಯ, ಉಳ್ಳಿಯಡ ಡಾಟಿ ಪೂವಯ್ಯ, ಜಿ. ಚಿದ್ವಿಲಾಸ್ ಇದ್ದರು.