ಪೊನ್ನಂಪೇಟೆ ಚಿಟ್ಟಡೆಯ ಕೂವಲೆರ ಕುಟುಂಬಸ್ಥರ ಆತಿಥ್ಯದಲ್ಲಿ ಕೊಡವ ಮುಸ್ಲಿಂ ಮನೆತನಗಳ ನಡುವಿನ ಪ್ರಥಮ ವರ್ಷದ ಹೊನಲು ಬೆಳಕಿನ ಕೌಟುಂಬಿಕ ವಾಲಿಬಾಲ್ ಪಂದ್ಯಾವಳಿ “ಕೂವಲೆರ ಚಿಟ್ಟಡೆ ಕಪ್ -2025” ಇಂದಿನಿಂದ ಆರಂಭಗೊಂಡಿದ್ದು, ಮೂರು ದಿನಗಳ ಕಾಲ ಕಾರ್ಯಕ್ರಮ ನಡೆಯಲಿದೆ.
ವಿರಾಜಪೇಟೆ ತಾಲೂಕಿನ ಬೇಟೋಳಿ ಗ್ರಾಮದಲ್ಲಿರುವ ಚಿಟ್ಟಡೆಯ ಜುಮ್ಮಾ ಮಸೀದಿ ಮೈದಾನದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಈ ಕೌಟುಂಬಿಕ ವಾಲಿಬಾಲ್ ಪಂದ್ಯಾವಳಿಗೆ ಎಲ್ಲ ಸಿದ್ಧತೆಗಳು ನಡೆದಿವೆ.
ಕೊಡವ ಮುಸ್ಲಿಂರ ಪ್ರಾತಿನಿಧಿಕ ಸಂಘಟನೆಯಾಗಿರುವ ‘ಕೊಡವ ಮುಸ್ಲಿಂ ಅಸೋಸಿಯೇಷನ್‌ನ ಅನುಮೋದಿತ ಮನೆತನದವರಿಗೆ ಮಾತ್ರ ಈ ಕೌಟುಂಬಿಕ ಪಂದ್ಯಾವಳಿ ಸೀಮಿತವಾಗಿದ್ದು, ಇದರಂತೆ ಒಟ್ಟು 43 ಕುಟುಂಬ ತಂಡಗಳು ಈ ಪಂದ್ಯಾವಳಿಗಾಗಿ ನೋಂದಾಯಿಸಿಕೊಂಡಿವೆ.
ಪಂದ್ಯಾವಳಿ ವೇಳೆ ಪ್ರೇಕ್ಷಕರ ಅನುಕೂಲಕ್ಕಾಗಿ ಮೈದಾನದ ಸುತ್ತಲೂ ಎರಡು ಬೃಹತ್ ಗ್ಯಾಲರಿಗಳನ್ನು ನಿರ್ಮಿಸಲಾಗಿದೆ. ಪಂದ್ಯಾವಳಿಯನ್ನು ಆಯೋಜಿಸಿರುವ ಕುಟುಂಬದ ವತಿಯಿಂದ ವಿಜೇತರಿಗೆ ಒಟ್ಟು ನಾಲ್ಕು ಸ್ಥಾನದ ಬಹುಮಾನಗಳನ್ನು ನೀಡಲಾಗುವುದು.
“ಚಾಂಪಿಯನ್ ತಂಡಕ್ಕೆ ₹55,555/-, ರನ್ನರ್ಸ್ ತಂಡಕ್ಕೆ ₹33,333/-, ತೃತೀಯ ಸ್ಥಾನ ಪಡೆಯುವ ತಂಡಕ್ಕೆ ₹22,222/- ಹಾಗೂ 4ನೇ ಸ್ಥಾನ ಪಡೆಯುವ ತಂಡಕ್ಕೆ ₹11,111/- ನಗದು ಬಹುಮಾನ ಸೇರಿದಂತೆ ತಲಾ ಆಕರ್ಷಕ ಪಾರಿತೋಷಕಗಳನ್ನು ನೀಡಲಾಗುವುದು. ಜತೆಗೆ ಚಾಂಪಿಯನ್ ತಂಡಕ್ಕೆ ಕೆಎಂಎ ವಿನ್ನರ್ಸ್ ರೋಲಿಂಗ್ ಟ್ರೋಫಿಯನ್ನು ಪ್ರದಾನ ಮಾಡಲಾಗುವುದು” ಎಂದು ಆಯೋಜನ ಸಮಿತಿಯ ತಾಂತ್ರಿಕ ವಿಭಾಗದ ಮುಖ್ಯಸ್ಥ ಕೂವಲೆರ ಪೈಝ ಸಜೀರ್ ತಿಳಿಸಿದ್ದಾರೆ.
“ಪಂದ್ಯದ ವೇಳೆ ಹೆಚ್ಚು ಪಾರದರ್ಶಕತೆಯನ್ನು ಕಾಯ್ದುಕೊಳ್ಳಲು ಕೇರಳದಿಂದ ನುರಿತ ವಾಲಿಬಾಲ್ ತೀರ್ಪುಗಾರರನ್ನು ಕರೆಸಿಕೊಳ್ಳಲಾಗಿದೆ” ಎಂದು ಮಾಹಿತಿ ನೀಡಿದ್ದಾರೆ.
“ಪಂದ್ಯಾವಳಿಯ ಉದ್ಘಾಟನೆಯ ಅಂಗವಾಗಿ ಮೊದಲಿಗೆ ರಜಿತ್ ಫ್ರೆಂಡ್ಸ್ ಮತ್ತು ಲಿಮ್ರಾ ಫ್ರೆಂಡ್ಸ್ ತಂಡಗಳ ನಡುವೆ ಪ್ರದರ್ಶನ ಪಂದ್ಯ ಆಯೋಜಿಸಲಾಗಿದೆ. ಮೂರು ದಿನಗಳ ಕಾಲವೂ ಪಂದ್ಯಾವಳಿಯನ್ನು ಸಕ್ಸಸ್ ಸ್ಪೋರ್ಟ್ಸ್ ಯುಟ್ಯೂಬ್ ಚಾನೆಲ್ ಮೂಲಕ ನೇರ ಪ್ರಸಾರಗೊಳಿಸಲು ಅಗತ್ಯ ವ್ಯವಸ್ಥೆ ಕೈಗೊಳ್ಳಲಾಗಿದೆ” ಎಂದು ಮಾಹಿತಿ ನೀಡಿದರು.
ಈ ಸುದ್ದಿ ಓದಿದ್ದೀರಾ?: ಕೊಡಗು | ತಾಲೂಕು ಆಡಳಿತದ ನಿರ್ಲಕ್ಷ್ಯ; ಪೊನ್ನಂಪೇಟೆ ಬಡವರಿಗಿಲ್ಲ ಸೂರು; ದಸಂಸ ಪ್ರತಿಭಟನೆ
“ಕ್ರೀಡೆ ಮನಸ್ಸಿಗೆ ಆನಂದ ನೀಡುವುದಷ್ಟೇ ಅಲ್ಲ, ಪರಸ್ಪರ ಒಂದುಗೂಡಿಸುತ್ತದೆ. ಜತೆಗೆ ಕ್ರೀಡೆ ಮನುಷ್ಯರನ್ನು ಹೆಚ್ಚು ಕ್ರಿಯಾಶೀಲಗೊಳಿಸುತ್ತದೆ. ಈ ಹಿನ್ನೆಲೆಯಲ್ಲಿ ಸಮುದಾಯದವರನ್ನು ಒಂದೆಡೆ ಸೇರಿಸಲು ಇದೇ ಮೊದಲ ಬಾರಿಗೆ ಕೊಡವ ಮುಸ್ಲಿಂ ಕೌಟುಂಬಿಕ ವಾಲಿಬಾಲ್ ಪಂದ್ಯಾವಳಿಯ ಆತಿಥ್ಯವನ್ನು ಚಿಟ್ಟಡೆಯ ಕೂವಲೆರ ಕುಟುಂಬ ವಹಿಸಿದೆ” ಎಂದರು.
“ಕೊಡಗಿನ ವಾಲಿಬಾಲ್ ಕ್ರೀಡೆಗೆ ಕೊಡವ ಮುಸ್ಲಿಂ ಕ್ರೀಡಾಪಟುಗಳ ಕೊಡುಗೆ ಅನನ್ಯವಾದದ್ದು. ಆದರೆ ಇಂದಿಗೂ ಅದೆಷ್ಟೋ ಸಮುದಾಯದ ಪ್ರತಿಭೆಗಳು ಸೂಕ್ತ ವೇದಿಕೆ ಮತ್ತು ಅವಕಾಶದ ಕೊರತೆಯನ್ನು ಎದುರಿಸುತ್ತಿದ್ದಾರೆ. ಪ್ರತಿಭೆಗಳನ್ನು ಗುರುತಿಸಿ ಅಂತವರನ್ನು ಪ್ರೋತ್ಸಾಹಿಸುವ ಪ್ರಯತ್ನ ಮಾಡಲಾಗುವುದು. ಅಲ್ಲದೆ, ಕುಗ್ರಾಮಗಳಲ್ಲೂ ಕ್ರೀಡಾಕೂಟಗಳನ್ನು ಯಶಸ್ವಿಯಾಗಿ ಆಯೋಜಿಸಬಹುದು. ಹೀಗೆ ಚಿಕ್ಕ ಊರಿನಲ್ಲಿ ದೊಡ್ಡ ಮಟ್ಟದ ಕ್ರೀಡಾಕೂಟವನ್ನು ಆಯೋಜಿಸಿ ಸಮಾಜಕ್ಕೆ ಸಂದೇಶವೊಂದನ್ನು ನೀಡುವ ಉದ್ದೇಶವೂ ಇದರ ಹಿಂದೆ ಅಡಗಿದೆ” ಎಂದು ಪಂದ್ಯಾವಳಿ ಆಯೋಜಕರು ಅಭಿಪ್ರಾಯಪಟ್ಟರು.
