ಕರ್ನಾಟಕ ಸರ್ಕಾರವು 2026-27ನೇ ಸಾಲಿನ ಮುಂಗಾರು ಹಂಗಾಮಿಗೆ ಮರು ವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯನ್ನು ಜಾರಿಗೊಳಿಸಿದ್ದು, ಕೊಡಗು ಜಿಲ್ಲೆಯ ರೈತರು ಕಾಳುಮೆಣಸು ಹಾಗೂ ಅಡಿಕೆ ಬೆಳೆಗಳಿಗೆ ಜುಲೈ 31ರೊಳಗೆ ನೋಂದಣಿ ಮಾಡಿಸಿಕೊಳ್ಳುವಂತೆ ತೋಟಗಾರಿಕೆ ಇಲಾಖೆ ಮನವಿ ಮಾಡಿದೆ.
ಕೊಡಗು ಜಿಲ್ಲೆಯಲ್ಲಿ ಕಾಳುಮೆಣಸು ಮತ್ತು ಅಡಿಕೆ ಬೆಳೆಗಳನ್ನು ವಿಮಾ ಘಟಕಗಳಾಗಿ ಅಧಿಸೂಚಿಸಲಾಗಿದೆ. ಮಳೆಯ ಪ್ರಮಾಣ, ತಾಪಮಾನ ಸೇರಿದಂತೆ ಸ್ಥಳೀಯ ಟೆಲಿಮೆಟ್ರಿಕ್ ಮಳೆಮಾಪನ ಕೇಂದ್ರಗಳಲ್ಲಿ ದಾಖಲೆಯಾಗುವ ಹವಾಮಾನ ಮಾಹಿತಿಯ ಆಧಾರದ ಮೇಲೆ ಬೆಳೆ ನಷ್ಟವನ್ನು ಮೌಲ್ಯಮಾಪನ ಮಾಡಿ ವಿಮಾ ಪರಿಹಾರ ನೀಡಲಾಗುತ್ತದೆ.
ಯೋಜನೆಯಡಿ ಕಾಳುಮೆಣಸು ಬೆಳೆಗೆ ಪ್ರತಿ ಹೆಕ್ಟೇರ್ಗೆ ₹47,000 ವಿಮಾ ಮೊತ್ತ ನಿಗದಿಪಡಿಸಲಾಗಿದ್ದು, ರೈತರು ಶೇ.5ರಂತೆ ₹2,350 ಪ್ರೀಮಿಯಂ ಪಾವತಿಸಬೇಕು. ಅಡಿಕೆ ಬೆಳೆಗೆ ಪ್ರತಿ ಹೆಕ್ಟೇರ್ಗೆ ₹1,28,000 ವಿಮಾ ಮೊತ್ತ ನಿಗದಿಯಾಗಿದ್ದು, ₹6,400 ಪ್ರೀಮಿಯಂ ಪಾವತಿಸಬೇಕಿದೆ. ಎರಡೂ ಬೆಳೆಗಳಿಗೆ ವಿಮೆ 2026ರ ಆಗಸ್ಟ್ 1ರಿಂದ 2027ರ ಜುಲೈ 31ರವರೆಗೆ ಅನ್ವಯವಾಗಲಿದೆ.
ಬೆಳೆ ಸಾಲ ಪಡೆದ ಹಾಗೂ ಬೆಳೆ ಸಾಲ ಪಡೆಯದ ರೈತರಿಗೆ ವಿಮಾ ಮೊತ್ತ ಮತ್ತು ಪ್ರೀಮಿಯಂ ಮೊತ್ತ ಒಂದೇ ರೀತಿಯಲ್ಲಿರುತ್ತದೆ. ಜಿಲ್ಲೆಯ ಎಲ್ಲಾ ಅರ್ಹ ರೈತರು ಯೋಜನೆಯಡಿ ನೋಂದಣಿ ಮಾಡಿಕೊಳ್ಳಬಹುದಾಗಿದೆ.
ವಿಮೆ ಮಾಡಿಸಿಕೊಳ್ಳಲು ಆಸಕ್ತ ರೈತರು ನಿಗದಿತ ಅರ್ಜಿಯೊಂದಿಗೆ ಪಹಣಿ, ಬ್ಯಾಂಕ್ ಖಾತೆ ಪಾಸ್ಬುಕ್, ಆಧಾರ್ ಕಾರ್ಡ್ ಪ್ರತಿಗಳು ಹಾಗೂ ಸ್ವಯಂ ಘೋಷಿತ ಬೆಳೆ ವಿವರಗಳನ್ನು ಸಲ್ಲಿಸಬೇಕು. ಬೆಳೆ ಸಾಲ ಪಡೆದ ರೈತರು ತಮ್ಮ ಹತ್ತಿರದ ಬ್ಯಾಂಕ್ಗಳಲ್ಲಿ, ಬೆಳೆ ಸಾಲ ಪಡೆಯದ ರೈತರು ಗ್ರಾಮ ಒನ್ ಕೇಂದ್ರಗಳು ಅಥವಾ ಸಾಮಾನ್ಯ ಸೇವಾ ಕೇಂದ್ರಗಳ ಮೂಲಕ ನೋಂದಣಿ ಮಾಡಿಸಿಕೊಳ್ಳಬಹುದು.
ಮರು ವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯ ಅನುಷ್ಠಾನಕ್ಕಾಗಿ ಕೊಡಗು ಜಿಲ್ಲೆಗೆ ಯುನೈಟೆಡ್ ಇಂಡಿಯಾ ಇನ್ಸುರೆನ್ಸ್ ಕಂಪನಿಯನ್ನು ವಿಮಾ ಸಂಸ್ಥೆಯಾಗಿ ನೇಮಿಸಲಾಗಿದೆ.
ಈ ಸುದ್ದಿ ಓದಿದ್ದೀರಾ?ಪರಿಶಿಷ್ಟರ ಮೇಲಿನ ದೌರ್ಜನ್ಯ ಸಂತ್ರಸ್ತರಿಗೆ ತ್ವರಿತ ನೆರವು ನೀಡಿ: ಜಿಲ್ಲಾಧಿಕಾರಿ ಶ್ರೀರೂಪ ಸೂಚನೆ
ಹೆಚ್ಚಿನ ಮಾಹಿತಿಗಾಗಿ ಸಮೀಪದ ಬ್ಯಾಂಕ್ ಶಾಖೆ, ಯುನೈಟೆಡ್ ಇಂಡಿಯಾ ಇನ್ಸುರೆನ್ಸ್ ಕಂಪನಿ-ಮೊ. 9353534871, 9481883708, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಗಳಾದ ಮಡಿಕೇರಿ-9448407816, ಸೋಮವಾರಪೇಟೆ-8762360208, ಪೊನ್ನಂಪೇಟೆ-9448049020, ರೈತ ಸಂಪರ್ಕ ಕೇಂದ್ರಗಳು, ಸಾಮಾನ್ಯ ಸೇವಾ ಕೇಂದ್ರಗಳು ಅಥವಾ ತೋಟಗಾರಿಕೆ ಉಪ ನಿರ್ದೇಶಕರ ಕಚೇರಿ, ಮಡಿಕೇರಿ-9448999227ನ್ನು ಸಂಪರ್ಕಿಸಬಹುದಾಗಿದೆ ಎಂದು ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಶಶಿಧರ ತಿಳಿಸಿದ್ದಾರೆ.





