ರಾಜ್ಯದಲ್ಲಿ ಇಂದಿನಿಂದ (ಜೂನ್ 30) ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಆರಂಭವಾಗಲಿದೆ. ರಾಜ್ಯದಲ್ಲಿ ಬೃಹತ್ ಸಂಖ್ಯೆಯ ಮತದಾರರು ಮತಪಟ್ಟಿಯಿಂದ ಹೊರಗುಳಿಯುವ ಅಪಾಯವಿದೆ. ಅರ್ಹ ಮತದಾರರ ಹೆಸರು ಡಿಲೀಟ್ ಆಗದಂತೆ ತಡೆಯಲು ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಎಸ್‌ಐಆರ್‌ನಲ್ಲಿ ಪುರಾವೆಯಾಗಿ ಕೇಳಲಾಗುವ ದಾಖಲೆಗಳಲ್ಲಿ ಒಂದಾದ ‘ಶಾಶ್ವತ ನಿವಾಸ ಪ್ರಮಾಣಪತ್ರ’ವನ್ನು ಅಗತ್ಯವಿರುವ ಎಲ್ಲ ಮತದಾರರಿಗೆ ಒದಗಿಸಲು ಆದೇಶಿಸಿದೆ. ಜೊತೆಗೆ, 7 ದಿನಗಳಲ್ಲಿ ರಾಜ್ಯಾದ್ಯಂತ ಸಹಾಯ ಕೇಂದ್ರಗಳನ್ನು ಸ್ಥಾಪಿಸಲು ನಿರ್ಧರಿಸಿದೆ.
ಕಂದಾಯ ಇಲಾಖೆಯು ಸೋಮವಾರ (ಜೂನ್ 29) ಸಮಗ್ರ ಮಾರ್ಗಸೂಚಿ ಹೊರಡಿಸಿದೆ. “ಶಾಶ್ವತ ನಿವಾಸ ಪ್ರಮಾಣಪತ್ರ (PRC) ಸೇರಿದಂತೆ ವಿವಿಧ ಸರ್ಕಾರಿ ಪ್ರಮಾಣಪತ್ರಗಳು ಮತ್ತು ನಾಗರಿಕ ಸೇವೆಗಳ ವಿತರಣೆಯನ್ನು ಸುಗಮ, ಪಾರದರ್ಶಕ ಹಾಗೂ ಕಾಲಮಿತಿಯೊಳಗೆ ಒದಗಿಸಬೇಕು” ಎಂದು ಅಧಿಕಾರಿಗಳಿಗೆ ಸೂಚಿಸಿದೆ.
ಇನ್ನು, ಶಾಶ್ವತ ಪ್ರಮಾಣಪತ್ರಕ್ಕಾಗಿ ಅರ್ಜಿ ಸಲ್ಲಿಸುವವರಿಗೆ ನೆರವು ನೀಡಲು ಪ್ರತಿ ಗ್ರಾಮ ಪಂಚಾಯಿತಿ ಮತ್ತು ನಗರ ಸ್ಥಳೀಯ ಸಂಸ್ಥೆಗಳ ವಾರ್ಡ್ ಕಚೇರಿಗಳಲ್ಲಿ ಕಂಪ್ಯೂಟರ್, ಇಂಟರ್‌ನೆಟ್, ಮುದ್ರಣ ಹಾಗೂ ಸ್ಕ್ಯಾನಿಂಗ್ ಸೌಲಭ್ಯಗಳೊಂದಿಗೆ ಸಹಾಯ ಮತ್ತು ಸೌಲಭ್ಯ ಕೇಂದ್ರಗಳನ್ನು ಸ್ಥಾಪಿಸಲು ಆದೇಶಿಸಲಾಗಿದೆ. ಈ ಆದೇಶ ಜಾರಿಯಾದ ಏಳು ದಿನಗಳೊಳಗೆ ಅಥವಾ ಸರ್ಕಾರ ನಿಗದಿಪಡಿಸುವ ಅವಧಿಯೊಳಗೆ ಜಿಲ್ಲಾ ಪಂಚಾಯಿತಿಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು ಸಹಾಯ ಕೇಂದ್ರಗಳನ್ನು ಕಾರ್ಯಾರಂಭಗೊಳಿಸಬೇಕು ಎಂದು ಸರ್ಕಾರ ಸೂಚಿಸಿದೆ.
ಅರ್ಹ ನಾಗರಿಕರು ತಮ್ಮ ಶಾಸ್ವತ ನಿವಾಸ ಪ್ರಮಾಣಪತ್ರಕ್ಕಾಗಿ ಅಟಲ್ ಜನಸ್ನೇಹಿ ಕೇಂದ್ರ, ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ಒನ್ ಹಾಗೂ ಕಾಮನ್ ಸರ್ವಿಸ್ ಸೆಂಟರ್‌ಗಳ ಮೂಲಕ ಹಾಗೂ ಸೇವಾ ಸಿಂಧು ಪೋರ್ಟಲ್, ಅಟಲ್ ಜನಸ್ನೇಹಿ ಕೇಂದ್ರ (AJSK) ಪೋರ್ಟಲ್ ಮೂಲಕವೂ ಅರ್ಜಿ ಸಲ್ಲಿಸಬಹುದು ಎಂದು ಸರ್ಕಾರ ಹೇಳಿದೆ. ಪ್ರಮಾಣಪತ್ರ ನೀಡುವ ಮೊದಲು ಅರ್ಜಿದಾರರ ಅರ್ಹತೆಯನ್ನು ಸಂಬಂಧಿತ ಪ್ರಾಧಿಕಾರವು ಸ್ವತಂತ್ರವಾಗಿ ದೃಢೀಕರಿಸಬೇಕೆಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
ಮತದಾರರೇ ಗಮನಿಸಿ
ಇಂದಿನಿಂದ ರಾಜ್ಯದಲ್ಲಿ ಎಸ್‌ಐಆರ್ ಪ್ರಕ್ರಿಯೆ ಆರಂಭವಾಗಲಿದೆ. ರಾಜ್ಯಾದ್ಯಂತ ಬಿಎಲ್‌ಒಗಳು ಮನೆ ಬಾಗಿಲಿಗೆ ಬಂದು ಎನ್ಯುಮರೇಷನ್ ಫಾರ್ಮ್ ಕೊಡಲಿದ್ದಾರೆ. ಮತದಾರರ ಗುರುತಿನ ಚೀಟಿ ಹೊಂದಿರುವ ಪ್ರತಿಯೊಬ್ಬರೂ ಈ ಫಾರ್ಮ್‌ಗಳನ್ನು ತುಂಬಬೇಕು. ಆ ನಂತರ, ಆಗಸ್ಟ್ 5ರಂದು ಕರಡು ಮತದಾರರ ಪಟ್ಟಿ ಬಿಡುಗಡೆಯಾಗಲಿದೆ. ಆ ಪಟ್ಟಿಯಲ್ಲಿ ಎನ್ಯುಮರೇಷನ್ ಫಾರ್ಮ್ ಸಲ್ಲಿಸಿದ್ದ ಪ್ರತಿಯೊಬ್ಬರ ಹೆಸರುಗಳು ಇರುತ್ತವೆ. ಆದರೆ, ಲಕ್ಷಾಂತರ ಮಂದಿಗೆ ತಮ್ಮ ಅರ್ಹತೆಯನ್ನು ಸಾಬೀತು ಪಡಿಸುವಂತೆ ಚುನಾವಣಾ ಆಯೋಗ ನೋಟಿಸ್ ಕೊಡುತ್ತದೆ. ಅಕ್ಷರಸ್ಥರು ತಮ್ಮ ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ, ಪಾಸ್‌ಪೋರ್ಟ್ ಸೌಲಭ್ಯ ಹೊಂದಿರುವರರು ಪಾಸ್‌ಪೋರ್ಟ್‌ಗಳನ್ನು ಒದಗಿಸಬಹುದು. ಆದರೆ, ಅನಕ್ಷರಸ್ಥರು ಮತ್ತು ಬಡ-ಹಿಂದುಳಿದ ದಾಖಲೆ ರಹಿತರು ಸಮಸ್ಯೆಗೆ ಸಿಲುಕಲಿದ್ದಾರೆ.
ಅಂತಹ ದಾಖಲೆ ರಹಿತರ ಮತದಾನ ಹಕ್ಕನ್ನು ರಕ್ಷಿಸಲು ಜಾತಿ ಪ್ರಮಾಣಪತ್ರ ಮತ್ತು ಶಾಶ್ವತ ನಿವಾಸ ಪ್ರಮಾಣಪತ್ರವನ್ನು ರಾಜ್ಯ ಸರ್ಕಾರ ಒದಗಿಸಬಹುದು, ಆ ಮೂಲಕ ತನ್ನ ನಾಗರಿಕರನ್ನು ರಕ್ಷಿಸಿಕೊಳ್ಳಬಹುದು. ಈ ಹಿಂದೆ, ಕೇರಳ ಸರ್ಕಾರವೂ ಇಂತಹ ಕ್ರಮವನ್ನು ಕೈಗೊಂಡಿತ್ತು. ಬಹುಸಂಖ್ಯಾತರು ಮತಪಟ್ಟಿಯಿಂದ ಹೊರಗುಳಿಯದಂತೆ ರಕ್ಷಿಸಿತು. ಇದೀಗ, ಕರ್ನಾಟಕ ಸರ್ಕಾರವು ಅಂತಹ ಮಹತ್ವದ ಹೆಜ್ಜೆ ಇಟ್ಟಿದೆ.
2002 ಮತದಾರರ ಪಟ್ಟಿ ಮತ್ತು 2025ರ ಮತದಾರರ ಪಟ್ಟಿಗೂ ಹೊಂದಾಣಿಕೆಯಾಗುತ್ತಿಲ್ಲ ಎಂಬ ಕಾರಣಕ್ಕಾಗಿ ನೋಟಿಸ್ ಪಡೆಯುವ ಮತದಾರರು ತಮ್ಮ ಮತದಾನದ ಹಕ್ಕನ್ನು ಉಳಿಸಿಕೊಳ್ಳಲು ಈಗಿನಿಂದಲೇ ‘ಶಾಶ್ವತ ನಿವಾಸ ಪ್ರಮಾಣಪತ್ರ’ವನ್ನು ಪಡೆದುಕೊಳ್ಳಬೇಕು. ತಮ್ಮ ಹಕ್ಕುಗಳನ್ನು ಉಳಿಸಿಕೊಳ್ಳಲು ಸಿದ್ಧರಾಗಬೇಕು. ಅಂತೆಯೇ, ಪಕ್ಷಗಳ ಕಾರ್ಯಕರ್ತರು ಮತ್ತು ಸಾಮಾಜಿಕ ಕಾರ್ಯಕರ್ತರು ಕೂಡ ಬಡವರು ಮತ್ತು ಹಿಂದುಳಿದವರಿಗೆ ಈ ಪ್ರಮಾಣಪತ್ರವನ್ನು ಕೊಡಿಸಲು ಪ್ರಯತ್ನಿಸಬೇಕು. ಆ ಮೂಲಕ, ರಾಜ್ಯದಲ್ಲಿ ಲಕ್ಷಾಂತರ ಅರ್ಹ ಮತದಾರರ ಹೆಸರುಗಳ ಮತಪಟ್ಟಿಯಿಂದ ಡಿಲೀಟ್ ಆಗದಂತೆ ತಡೆಯಬಹುದು!



