ಇಡೀ ಭಾರತದಲ್ಲೇ ಪರಿಶುದ್ದ ಗಾಳಿ ಇರುವ ನಗರಗಳ ಪಟ್ಟಿಯಲ್ಲಿ ಕರ್ನಾಟಕದ ಕಾಶ್ಮೀರ ಎನಿಸಿಕೊಂಡಿರುವ ಕೊಡಗಿನ ‘ಮಡಿಕೇರಿ’ ಅಗ್ರಸ್ಥಾನ ಪಡೆದಿದೆ.
ಅತಿ ಕಡಿಮೆ ವಾಯುಮಾಲಿನ್ಯ ಹೊಂದಿರುವ ನಗರ ಎಂಬ ಹಿರಿಮೆ ಮಂಜಿನ ನಗರಿ ಮಡಿಕೇರಿ ಪಾಲಾಗಿದೆ. ಪ್ರಕೃತಿಯ ಐಸಿರಿಯನ್ನೇ ಹೊದ್ದಿರುವ ಮಡಿಕೇರಿ ಎಲ್ಲಿ ನೋಡಿದರೂ ವನಸಿರಿಯಿಂದ ಕಂಗೊಳಿಸುವ ಪ್ರವಾಸಿಗರ ಸ್ವರ್ಗ.
ಅತ್ಯುತ್ತಮ ಹವಾಮಾನ ಹಾಗೂ ಪರಿಶುದ್ಧ ಗಾಳಿ ಇರುವ ಮಡಿಕೇರಿ ದಟ್ಟವಾದ ಅರಣ್ಯ, ಕಾಫಿ ತೋಟ, ವನ್ಯ ಸಂಕುಲದಿಂದ ತನ್ನ ಸೊಬಗನ್ನು ಹೆಚ್ಚಿಸಿಕೊಳ್ಳುವ ಜತೆಗೆ ವಾಯುಮಾಲಿನ್ಯಕ್ಕೆ ಈವರೆಗೆ ಆಸ್ಪದ ನೀಡಿಲ್ಲ. ಕಳೆದ ವರ್ಷ ಐದನೇ ಸ್ಥಾನದಲ್ಲಿದ್ದ ಮಡಿಕೇರಿ ಈ ಬಾರಿ ಅಗ್ರಸ್ಥಾನಕ್ಕೆ ಏರಿದೆ.

ಭಾರತ ಸರ್ಕಾರದ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ವಾಯು ಗುಣಮಟ್ಟ ಸೂಚ್ಯಂಕ(ಏರ್ ಕ್ವಾಲಿಟಿ ಇಂಡೆಕ್ಸ್) ಪ್ರಮಾಣವನ್ನು ನಿಗದಿತವಾಗಿ ಪರಿಶೀಲಿಸಿ ದಾಖಲು ಮಾಡುತ್ತದೆ. ಸೀಮಿತ ಅವಧಿಯಲ್ಲಿ ಆಯಾ ಭಾಗದಲ್ಲಿರುವ
ವಾಯುಮಾಲಿನ್ಯ, ಶುದ್ದಗಾಳಿಯ ಪ್ರಮಾಣವನ್ನು ಪರೀಕ್ಷೆ ಮಾಡಲಾಗುತ್ತದೆ. ವಾಯು ಗುಣಮಟ್ಟ ಸೂಚ್ಯಂಕ ಪ್ರಕಾರ ನವೆಂಬರ್ ಎರಡನೇ ವಾರದಿಂದ ಡಿಸೆಂಬರ್ ತನಕ ಪರಿಶುದ್ಧ ಗಾಳಿಯ ಮಟ್ಟದಲ್ಲಿ ಏರಿಕೆ ಕಂಡಿದೆ.
ಅದರಂತೆ ಶೇ.28ರಷ್ಟು ಏರ್ ಕ್ವಾಲಿಟಿ ಇಂಡೆಕ್ಸ್ ದಾಖಲಿಕೆಯಂತೆ ಮಡಿಕೇರಿ ಈ ಬಾರಿ ದೇಶದಲ್ಲೇ ಪರಿಶುದ್ಧ ಗಾಳಿಗೆ ಅಗ್ರಸ್ಥಾನ ಪಡೆದುಕೊಂಡಿದೆ. ವಾತಾವರಣ ಒಂದೇ ಸಮನಾಗಿ ಇರದೆ ಏರಿಳಿತ, ವ್ಯತ್ಯಾಸ ಸಹಜವಾಗಿ ಉಂಟಾಗುವುದರಿಂದ ಯಥಾವತ್ತು ಇರಲು ಸಾಧ್ಯವಿರುವುದಿಲ್ಲ.

ವಾತಾವರಣದಲ್ಲಿ ದೂಳು, ಹೊಗೆ, ಗಾಳಿಯ ಪ್ರಮಾಣದಿಂದ ವಾಯುಮಾಲಿನ್ಯದ ಪ್ರಮಾಣ ದಿನೇ ದಿನೆ ವ್ಯತ್ಯಾಸವಾಗುತ್ತದೆ. ಶೇ.50ರೊಳಗೆ ಏರ್ ಕ್ವಾಲಿಟಿ ಇಂಡೆಕ್ಸ್ ಇದ್ದರೆ ಅದು ಗುಣಮಟ್ಟದ ಪರಿಶುದ್ಧ ಗಾಳಿ ಅಂತಲೂ, ಅದನ್ನು ದಾಟಿ ಶೇ.100ರ ಆಸುಪಾಸು ದಾಖಲಾದರೆ ಸಮಾಧಾನಕರ ಎಂತಲು, ಶೇ.100 ರಿಂದ 200 ಮುಟ್ಟಿದರೆ ಮಧ್ಯಮ, ಶೇ.200 ರಿಂದ 300 ತಲುಪಿದರೆ ಕಳಪೆ, ಶೇ.300 ರಿಂದ 400 ಮಟ್ಟ ತಲುಪಿದರೆ ಅತಿ ಕಲುಷಿತ ವಾಯುಮಾಲಿನ್ಯವೆಂದು ಪರಿಗಣಿಸಲಾಗುತ್ತದೆ.

ಈ ಬಾರಿ ಪರಿಶುದ್ಧ ಗಾಳಿ ಪಟ್ಟಿಯ 10 ಸ್ಥಾನಗಳಲ್ಲಿ ನಾಲ್ಕು ಸ್ಥಾನಗಳು ಕರ್ನಾಟಕದ ಪಾಲಾಗಿವೆ. ಮಡಿಕೇರಿ(28) ಅಗ್ರಸ್ಥಾನ, ತಮಿಳುನಾಡಿನ ತಿರುನಲ್ ವೇಲಿ(30) ಎರಡನೇ ಸ್ಥಾನ, ಊಟಿ(32) ಮೂರನೇ ಸ್ಥಾನ, ಆಂಧ್ರದ ಅನಂತಪುರ(33) ನಾಲ್ಕನೇ ಸ್ಥಾನ, ಮಿಜೋರಾಂನ ಐಜ್ವಾಲ್(34) ಐದನೇ ಸ್ಥಾನ, ಚಾಮರಾಜನಗರ(42) ಆರನೇ ಸ್ಥಾನ, ತಮಿಳುನಾಡಿನ ಕಾಂಚೀಪುರಂ(43) ಏಳನೇ ಸ್ಥಾನ, ಗದಗ(50) ಎಂಟನೇ ಸ್ಥಾನ, ಹಾವೇರಿ(51) ಒಂಬತ್ತನೇ ಸ್ಥಾನ, ಬಾಗಲಕೋಟೆ(52) ಹತ್ತನೇ ಸ್ಥಾನ ಪಡೆದಿವೆ.

ಆಧುನಿಕ ಶೈಲಿಯ ಜೀವನ, ವಾಹನಗಳ ವ್ಯಾಮೋಹ, ಗಣಿಗಾರಿಕೆ, ಪರಿಸರ ನಾಶ, ಜಂಗಲ್ ರೆಸಾರ್ಟ್, ಪ್ರವಾಸೋದ್ಯಮ ಹೆಸರಿನಲ್ಲಿ ಅರಣ್ಯ ನಾಶ ಇದೆಲ್ಲವೂ ಪ್ರಕೃತಿಯ ಮೇಲೆ ಪ್ರಭಾವ ಬೀರಿವೆ, ಬೀರುತ್ತಲೇ ಇವೆ. ಇಂದಿನ ಬದಲಾದ ಮನುಷ್ಯನ ಬದುಕಿಗೆ ಪ್ರಕೃತಿಯೇ ಹೊಂದಿಕೊಳ್ಳಬೇಕು ಎನ್ನುವಂತೆ ದಾಳಿ ನಡೆಯುವಾಗ ಪ್ರಕೃತಿ ಮುನಿಸಿಕೊಳ್ಳುವ ದಾರಿಯಲ್ಲಿ ತನ್ನ ಪ್ರತಿರೋಧ ಆಗಿಂದಾಗ್ಗೆ ತೋರುತ್ತಿದೆ.

ದೇಶದಲ್ಲಿ ವಾಯುಮಾಲಿನ್ಯ ವಿಪರೀತವಾಗಿದ್ದು, ಉಸಿರಾಡಲು ಸಾಧ್ಯವಿರದ ಪರಿಸ್ಥಿತಿಗೆ ತಲುಪಿದ್ದೇವೆ. ಇದಕ್ಕೆಲ್ಲ ಜಾಗತಿಕ ತಾಪಮಾನ, ಮನುಷ್ಯನ ಕಿಡಿಗೇಡಿ ತನವೇ ಮೂಲ ಕಾರಣ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕರ್ನಾಟಕದ ನಾಲ್ಕು ಜಿಲ್ಲೆಗಳು ಪರಿಶುದ್ಧ ಗಾಳಿ ಪಟ್ಟಿಯಲ್ಲಿ ಸೇರ್ಪಡೆಯಾಗಿರುವುದು ಕೊಂಚ ಆಶಾದಾಯಕವೆನಿಸಿದೆ. ಅದರಲ್ಲೂ ಕೊಡಗಿನ ಮಡಿಕೇರಿ ಪ್ರವಾಸಿಗರ ತವರು ಅಷ್ಟೇ ಅಲ್ಲ, ಸ್ವಚ್ಛವಾದ ಗಾಳಿ ಸೇವನೆಗೂ ಸೂಕ್ತ ನಗರಿ ಆಗಿರುವುದು ನಮ್ಮೆಲ್ಲರಿಗೂ ನೆಮ್ಮದಿ ತರುವಂಥದ್ದು.
ಈ ಸುದ್ದಿ ಓದಿದ್ದೀರಾ? ಗದಗ | ಮುಂಡರಗಿ ಕೃಷಿ ಉತ್ಪನ್ನ ಮಾರುಕಟ್ಟೆ ಕಚೇರಿ ಸ್ವಚ್ಛತೆ ಮರೀಚಿಕೆ; ಅಧಿಕಾರಿಗಳ ನಿರ್ಲಕ್ಷ್ಯ
ಮಡಿಕೇರಿ ಇದೀಗ ಅಗ್ರಸ್ಥಾನದಲ್ಲಿದೆಯೆಂದು ಮೈಮರೆಯುವಂತಿಲ್ಲ. ಪ್ರಕೃತಿ ಉಳಿಸಿಕೊಳ್ಳುವ ಜತೆಗೆ ವಾತಾವರಣ ಕಲುಷಿತ ಆಗದಂತೆ, ಮಾಲಿನ್ಯಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಜಾಗೃತರಾಗಬೇಕಿದೆ. ಇದು ಎಲ್ಲರ ಹೊಣೆಗಾರಿಕೆಯೂ ಹೌದು.
