ಮಕ್ಕಳು, ವಿದ್ಯಾರ್ಥಿಗಳು ಹಾಗೂ ರೈತರು ಸೇರಿ ಪ್ರತಿ ವರ್ಷ 8 ಲಕ್ಷಕ್ಕಿಂತ ಅಧಿಕ ಮಂದಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು, ಇದು ಕಳವಳಕಾರಿ ಸಂಗತಿಯಾಗಿದೆ. ಇದರಿಂದ ದೇಶದ ಅಭಿವೃದ್ಧಿಗೆ ತೊಡುಕಾಗಲಿದ್ದು, ಆತ್ಮಹತ್ಯೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲರೂ ಅರಿವು ಮೂಡಿಸಬೇಕಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಸುನಿಲ್ ಎಸ್. ಹೊಸಮನಿ ಕಳವಳ ವ್ಯಕ್ತಪಡಿಸಿದರು.
ಕೋಲಾರ ನಗರದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಮಾನಸಿಕ ಆರೋಗ್ಯ ಘಟಕದ ಸಂಯುಕ್ತಾಶ್ರಯದಲ್ಲಿ ಬುಧವಾರ ಆಯೋಜಿಸಿದ್ದ ವಿಶ್ವ ಆತ್ಮಹತ್ಯೆ ತಡೆ ದಿನಾಚರಣೆ ಅಧ್ಯಕ್ಷತೆಯವಹಿಸಿ ಅವರು ಮಾತನಾಡಿದರು.
ಕೌಟುಂಬಿಕ ಕಲಹಗಳಿಂದ, ಸಣ್ಣಪುಟ್ಟ ವಿಚಾರಗಳಿಂದ ಹಾಗೂ ಯಾವುದೇ ಮಾದಕ ವಸ್ತುಗಳನ್ನು ಅಧಿಕವಾಗಿ ಬಳಸುವುದರಿಂದ ಆತ್ಮಹತ್ಯೆ ಮೊರೆಹೋಗುತ್ತಿದ್ದಾರೆ. ಕೇವಲ ವಿಶ್ವ ಆತ್ಮಹತ್ಯೆ ತಡೆ ದಿನಕ್ಕೆ ಸೀಮಿತವಾಗದೆ ಪ್ರತಿದಿನ ಅರಿವು ಮೂಡಿಸಬೇಕು ಎಂದರು.
ಮನೋವೈದ್ಯರಾದ ಡಾ.ವಿಜೇತ ದಾಸ್ ಮಾತನಾಡಿ, ಆತ್ಮಹತ್ಯೆಯನ್ನು ಮಾಡಿಕೊಳ್ಳುವವರು ಕೆಲವು ಮುನ್ಸೂಚನೆಗಳನ್ನು ಕೊಡುತ್ತಾರೆ. ಅವುಗಳೆಂದರೆ ಒಂಟಿಯಾಗಿರುವುದು, ಮೌನವಾಗಿರುವುದು, ಪದೇ-ಪದೇ ಸಾಯುವ ಬಗ್ಗೆ ಮಾತನಾಡುವುದು ಹಾಗೂ ಆತ್ಮಹತ್ಯೆ ವಿಡಿಯೋಗಳನ್ನು ಹೆಚ್ಚಾಗಿ ನೋಡುತ್ತಿರುತ್ತಾರೆ. ಪ್ರತಿ 40 ನಿಮಿಷಕ್ಕೆ ಒಬ್ಬರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುತ್ತಾರೆ. ಇದರಲ್ಲಿ 25 ಜನ ವಿಫಲರಾಗಿರುತ್ತಾರೆ. ಆತ್ಮಹತ್ಯೆಗಳನ್ನು ತಡೆಗಟ್ಟಲು ಹಾಗೂ ಮಾನಸಿಕ ಕಾಯಿಲೆಗಳ ಬಗ್ಗೆ ಹೆಚ್ಚಿನ ಮಾಹಿತಿ ಮತ್ತು ಆಪ್ತ ಸಮಾಲೋಚನೆ ಬೇಕಾದವರು 14419ಗೆ ಕರೆ ಮಾಡಿ ಉಚಿತವಾಗಿ ಮಾಹಿತಿಯನ್ನು ಪಡೆದುಕೊಳ್ಳಬಹುದು ಎಂದು ಮಾಹಿತಿ ನೀಡಿದರು.
ಈ ಸುದ್ದಿ ಓದಿದ್ದೀರಾ? ಚಿಂತಾಮಣಿ | ನಗರಸಭಾ ಅಧ್ಯಕ್ಷರಾಗಿ ಜಗನ್ನಾಥ್, ಉಪಾಧ್ಯಕ್ಷರಾಗಿ ರಾಣಿಯಮ್ಮ ಅವಿರೋಧ ಆಯ್ಕೆ
ಕಾರ್ಯಕ್ರಮದಲ್ಲಿ ಮಾನಸಿಕ ಆರೋಗ್ಯ ಅಧಿಕಾರಿ ಡಾ.ನಾರಾಯಣಸ್ವಾಮಿ, ಜಿಲ್ಲಾ ಶಸ್ತ್ರ ಚಿಕಿತ್ಸಕಿ ಮಮತಾ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಎಂ.ಪ್ರೇಮ, ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಪ್ರಭಾರ ಪ್ರಾಂಶುಪಾಲರಾದ ಚಂದ್ರಪ್ಪ, ಆರ್ ಎಲ್ ಜಾಲಪ್ಪ ಆಸ್ಪತ್ರೆ ಮನೋವೈದ್ಯರು ಡಾ.ಮಹಮ್ಮದ್ ಮತ್ತು ಆರೋಗ್ಯ ಇಲಾಖೆಯ ವೈದ್ಯಾಧಿಕಾರಿಗಳು ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.