ಕೋಲಾರದ ನಗರಸಭೆ ವ್ಯಾಪ್ತಿಯ ಅಂತರಗಂಗೆ ಬೆಟ್ಟದ ತಪ್ಪಲಿಂದ ಕೋಲಾರಮ್ಮ ರಾಜಕಾಲುವೆ ಅಭಿವೃದ್ಧಿಗೆ ಸಚಿವ ಸಂಪುಟದ ಸಭೆಯಲ್ಲಿ 90 ಕೋಟಿ ಮೀಸಲಿಟ್ಟ ರಾಜ್ಯ ಸರ್ಕಾರಕ್ಕೆ ನಗರಸಭೆ ಸದಸ್ಯ ಎನ್ ಅಂಬರೀಷ್ ಅಭಿನಂದನೆ ಸಲ್ಲಿಸಿದರು.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, “ಕೋಲಾರ ನಗರಕ್ಕೆ ವಿಶೇಷವಾಗಿ ಸುಮಾರು 30-40 ವರ್ಷಗಳಿಂದ ಮಳೆಯ ಅಬ್ಬರಕ್ಕೆ ಈ ಭಾಗದ ಹಲವು ಪ್ರದೇಶಗಳು ತತ್ತರಿಸಿದ್ದವು. ಈ ಪೈಕಿ ರಹಮತ್ ನಗರ, ರಾಜಾನಗರ, ಶಾಂತಿನಗರ, ನೂರು ನಗರ, ಮಿಲ್ಲತ್ ನಗರ ಸೇರಿದಂತೆ ಅನೇಕ ಏರಿಯಾಗಳು ಹೆಚ್ಚು ಮಳೆಹಾನಿಗೆ ತುತ್ತಾಗುತ್ತಿದ್ದವು. ಅಂತರಗಂಗೆಯ ತಪ್ಪಲಿನಿಂದ ಕೋಲಾರಮ್ಮನ ಕೆರೆಯವರಿಗೆ ರಾಜಕಾಲುವೆ ದುರಸ್ತಿಯಾಗದೆ ಇದ್ದದ್ದರಿಂದ ಮಳೆಬಂದು ನೀರು ಮನೆಗಳಿಗೆ ನುಗ್ಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿತ್ತು. ವಸತಿ ಸಚಿವ ಜಮೀರ್ ಅಹ್ಮದ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಶಾಸಕ ಕೊತ್ತೂರು ಮಂಜುನಾಥ್ ಎಂಎಲ್ಸಿ ಅನಿಲ್ ಕುಮಾರ್ ರವರು ಸರ್ಕಾರದ ಜೊತೆ ಮಾತುಕತೆ ನಡೆಸಿ ಮುಖ್ಯಮಂತ್ರಿ ಉಪಮುಖ್ಯಮಂತ್ರಿ ಜಿಲ್ಲಾ ಉಸ್ತುವಾರಿ ಸಚಿವರ ಗಮನ ಸೆಳೆದು ಸುಮಾರು 90 ಕೋಟಿ ಬಿಡುಗಡೆ ಮಾಡಿಸಿದ್ದಾರೆ. ಸುಮಾರು 60,000 ಜನಸಂಖ್ಯೆ ಇರುವ ಈ ಭಾಗಕ್ಕೆ ಈ ಕಾಮಗಾರಿ ಅತ್ಯಂತ ಉಪಯುಕ್ತವಾದ ಕಾಮಗಾರಿ. ಈ ಭಾಗದಲ್ಲಿ ಶೇಕಡ 90ರಷ್ಟು ಸ್ಲಂ ಪ್ರದೇಶವಾಗಿದ್ದು ಮತ್ತು ಬಡವರು ವಾಸಿಸುತ್ತಿರುವ ಈ ಜಾಗಕ್ಕೆ ಮನ್ನಣೆ ನೀಡಿರುವುದಕ್ಕೆ ರಾಜ್ಯ ಸರ್ಕಾರಕ್ಕೆ ಅಭಿನಂದನೆಗಳು” ಎಂದು ಅಂಬರೀಷ್ ತಿಳಿಸಿದ್ದಾರೆ.

ಇದನ್ನೂ ಓದಿ: ಕೋಲಾರ | ಕೋಮುಲ್ ಸರ್ಕಾರಿ ನಾಮ ನಿರ್ದೇಶಕರಾಗಿ ಯೂನುಸ್ ಶರೀಫ್ ನೇಮಕ