ಗ್ರಾಮ ಪಂಚಾಯತಿ ಸದಸ್ಯರೊಬ್ಬರನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಕೋಡಿಹಳ್ಳಿ ಕ್ರಾಸ್ ಬಳಿ ಶನಿವಾರ ನಡೆದಿದೆ.
ತಾಲೂಕಿನ ಮೀಣಸಂದ್ರದ ಗ್ರಾಮದ ಅನಿಲ್ ಕುಮಾರ್ ಹತ್ಯೆಯಾದ ದುರ್ದೈವಿ. ಅವರು ಜಯಮಂಗಲ ಗ್ರಾಮ ಪಂಚಾಯತಿ ಸದಸ್ಯರಾಗಿದ್ದರು. ಮಾಲೂರು ಶಾಸಕ ಕೆ.ವೈ ನಂಜೇಗೌಡ ಅವರ ಆಪ್ತ ವಲಯದಲ್ಲಿ ಅನಿಲ್ ಗುರುತಿಸಿಕೊಂಡಿದ್ದರು. ಗ್ರಾಮದಲ್ಲಿ ಉತ್ತಮ ಕೆಲಸಗಳನ್ನೂ ಮಾಡುತ್ತಿದ್ದರು ಎಂದು ಹೇಳಲಾಗಿದೆ.
ಶನಿವಾರ ಸಂಜೆ ಮಾಲೂರಿನ ಕಡೆಗೆ ಅವರು ಹೊರಟ್ಟಿದ್ದರು. ಈ ವೇಳೆ, ಅವರನ್ನು ಹಿಂಚಾಲಿಸಿ ಬಂದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ. ರ್ಶತಳಕ್ಕೆ ಕೋಲಾರ ಎಸ್‌ಪ್ ನಾರಾಯಣ್ ಮತ್ತು ಮಾಲೂರು ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಓರ್ವ ಅನುಮಾನಾಸ್ಪ ವ್ಯಕ್ತಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಇತ್ತೀಚೆಗೆ, ಗಣೇಶ ವಿಸರ್ಜನೆ ವೇಳೆ ಗ್ರಾಮದಲ್ಲಿ ಆರ್ಕೇಸ್ಟ್ರಾ ಆಯೋಜನೆ ಸಂಬಂಧ ಅನಿಲ್ ಹಾಗೂ ಗ್ರಾಮದ ಕೆಲವರು ನಡುವೆ ಜಗಳ ನಡೆದಿತ್ತು. ಅಲ್ಲದೆ, ಅನಿಲ್ ಅವರೊಂದಿಗೆ ಹಲವು ವರ್ಷಗಳಿಂದ ಮುನಿಸಿಕೊಂಡಿದ್ದ ವ್ಯಕ್ತಿಯೊಬ್ಬ ಶನಿವಾರ ಅವರೊಂದಿಗೆ ಮಾತನಾಡಿದ್ದ. ಹೀಗಾಗಿ, ಅನಿಲ್ ಕೊಲೆಯ ಹಿಂದೆ ಹಲವಾರು ಅನುಮಾನಗಳಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.