ಕೋಲಾರ ರಾಜಕಾರಣದಲ್ಲಿ ಸಂಚನ ಸೃಷ್ಟಿಸಿದ್ದ ಕೋಮುಲ್ ನಿರ್ದೇಶಕರ ಚುನಾವಣೆ ಮುಗಿದಿದೆ. ಎಲ್ಲರ ಕಣ್ಣು ಅಧ್ಯಕ್ಷ ಗಾದಿ ಮೇಲೆ ನೆಟ್ಟಿದೆ. ಕಾಂಗ್ರೆಸ್‌ನ ಇಬ್ಬರು ಶಾಸಕರ ಕಣ್ಣು ಕೋಮುಲ್ ಅಧ್ಯಕ್ಷ ಸ್ಥಾನದ ಮೇಲಿದ್ದು, 50 ವರ್ಷದಲ್ಲೇ ಮೊದಲ ಬಾರಿಗೆ ದಲಿತ ಸಮುದಾಯದಿಂದ ಕೋಮುಲ್ ನಿರ್ದೇಶಕರಾಗಿರುವ ಬಂಗಾರಪೇಟೆ ಶಾಸಕ ಎನ್ ಎಸ್ ನಾರಾಯಣಸ್ವಾಮಿ ಹಾಗೂ ಶಾಸಕ ನಂಜೇಗೌಡರ ನಡುವೆ ಅಧ್ಯಕ್ಷ ಗದ್ದುಗೆಗೆ ತ್ರೀವ ಪೈಪೋಟಿ ಏರ್ಪಟ್ಟಿದೆ.
ಕೋಲಾರದಲ್ಲಿ ಭಾರೀ ಸದ್ದು ಮಾಡಿದ ಚುಣಾವಣೆ ಅಂದ್ರೆ ಅದುವೇ ಕೋಮುಲ್ ಆಡಳಿತ ಮಂಡಳಿಯ ಚುಣಾವಣೆ. ಅದರಲ್ಲೂ ವಿಶೇಷವಾಗಿ ಒಬ್ಬ ದಲಿತ ಸಮುದಾಯದ ಅಭ್ಯರ್ಥಿ ಕೋಮುಲ್ ನಿರ್ದೇಶಕ ಸ್ಥಾನಕ್ಕೆ ಆಯ್ಕೆಯಾಗಿದ್ದು ಇದೇ ಮೊದಲು. ಯಾಕೆಂದರೆ ದಲಿತ ಸಮುದಾಯದ ಮುಖಂಡರು ಕೋಮುಲ್ ಚುನಾವಣೆ ಬಗ್ಗೆ ಅಷ್ಟೊಂದು ಆಸಕ್ತಿ ತೋರುತ್ತಿರಲಿಲ್ಲ. ಆದರೆ ಈ ಬಾರಿ ಬಂಗಾರಪೇಟೆ ಮೀಸಲು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಸ್ ಎನ್ ನಾರಾಯಣಸ್ವಾಮಿ ಹೆಚ್ಚು ಆಸಕ್ತಿ ವಹಿಸಿ ನಿರ್ದೇಶಕ ಸ್ಥಾನಕ್ಕೆ ಆಯ್ಕೆಯಾದ ಮೊದಲ ದಲಿತ ನಿರ್ದೇಶಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.
ಕೋಲಾರ ಕೋಮುಲ್ ಚುನಾವಣೆ ಬಗ್ಗೆ ಪ್ರಮುಖವಾಗಿ ಹೇಳ ಬಯಸುವುದಾದರೆ ಕೋಲಾರ ಕಾಂಗ್ರೆಸ್‌ನಲ್ಲಿ ಎರಡು ಬಣವಾಗಿ ಮಾರ್ಪಟ್ಟಿತ್ತು. ಒಂದು ಕಡೆ ಮಾಲೂರು ಶಾಸಕ ನಂಜೇಗೌಡ, ಕೋಲಾರ ಶಾಸಕ ಕೊತ್ತೂರ್ ಮಂಜುನಾಥ್ ಹಾಗೂ ವಿಧಾನಪರಿಷತ್ ಸದಸ್ಯ ಅನಿಲ್ ಕುಮಾರ್ ಇದ್ದರೆ, ಇನ್ನೊಂದೆಡೆ ಬಂಗಾರಪೇಟೆ ಕಾಂಗ್ರೆಸ್ ಶಾಸಕ ಎಸ್ ಎನ್ ನಾರಾಯಣಸ್ವಾಮಿ, ಕೆಜಿಎಫ್ ಶಾಸಕಿ ರೂಪಾ ಶಶಿಧರ್ ಹಾಗೂ ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಇವರ ನಡುವೆಯೇ ವಾಗ್ವಾದದ ಮೂಲಕ ಚುನಾವಣೆ ನಡೆದು ಸ್ಪಷ್ಟವಾಗಿ ಕೋಲಾರ ಕಾಂಗ್ರೆಸ್ ಗುಂಪುಗಾರಿಕೆ ಕಾಣತೊಡಗಿತು. ಈ ಗುಂಪುಗಾರಿಕೆಯನ್ನು ಮೀರಿ ಯಾರು ಅಧಿಕಾರದ ಗದ್ದುಗೆ ಏರುತ್ತಾರೆ ಎಂಬ ಚರ್ಚೆ ಆರಂಭವಾಗಿದೆ.
ಕೋಮುಲ್‌ನ ಇತಿಹಾಸದಲ್ಲೇ ಸುಮಾರು ಐವತ್ತು ವರ್ಷಗಳಿಂದ ಯಾರೂ ಕೂಡ ದಲಿತ ನಿರ್ದೇಶಕರಾಗಿಲ್ಲ. ಆದರೆ ಮೊದಲ ಬಾರಿಗೆ ಈ ಬಾರಿ ಕೋಮುಲ್ ಚುನಾವಣೆಯಲ್ಲಿ ದಲಿತ ಅಭ್ಯರ್ಥಿ ಶಾಸಕ ಎಸ್ ಎನ್ ನಾರಾಯಣಸ್ವಾಮಿ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಇವರು ಮೊದಲಿಗೆ ಪುರಸಭೆ ಸದಸ್ಯರಾಗಿ, ನಂತರ ಪುರಸಭೆ ಅಧ್ಯಕ್ಷರಾಗಿ ಮತ್ತು ಬಂಗಾರಪೇಟೆ ವಿಧಾನಸಭಾ ಕ್ಷೇತ್ರದಿಂದ ಸುಮಾರು ಮೂರು ಬಾರಿ ಶಾಸಕರಾಗಿ, ಮೈತ್ರಿ ಸರ್ಕಾರದಲ್ಲಿ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ, 2023ರ ವಿಧಾನಸಭಾ ಚುನಾವಣೆ ನಂತರ ಕೆಯುಡಿಎಫ್‌ಸಿ ಅಧ್ಯಕ್ಷರಾಗಿ ಈಗ ಪ್ರಸ್ತುತ ಕೋಮುಲ್ ಚುನಾವಣೆಯಲ್ಲಿ ಗೆದ್ದು ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.
“ಎಸ್ ಎನ್ ನಾರಾಯಣಸ್ವಾಮಿ ಅವರಿಗೆ ಕೋಮುಲ್ ಅಧ್ಯಕ್ಷ ಸ್ಥಾನ ನೀಡಿದರೆ ದಲಿತ ಸಮುದಾಯ ಹೆಚ್ಚಿರುವ ಕೋಲಾರದಲ್ಲಿ ಸರ್ಕಾರಕ್ಕೆ ಹಾಗೂ ಪಕ್ಷಕ್ಕೆ ಒಳ್ಳೆಯ ಹೆಸರು ಬರುತ್ತದೆ ಹಾಗೂ ಇಡೀ ರಾಜ್ಯದ ಎಲ್ಲ ದಲಿತ ಸಮುದಾಯದವರೂ ಸಂತೋಷ ವ್ಯಕ್ತಪಡಿಸುತ್ತಾರೆ. ಎಲ್ಲರೂ ಕೂಡ ಪಕ್ಷಾತೀತವಾಗಿ ಶಾಸಕ ಎಸ್ ಎನ್ ನಾರಾಯಣಸ್ವಾಮಿ ಅವರಿಗೆ ಬೆಂಬಲವನ್ನೂ ನೀಡುತ್ತಾರೆ. ಆದ ಕಾರಣದಿಂದ ಇವರಿಗೆ ಕೋಮುಲ್ ಅಧ್ಯಕ್ಷ ಸ್ಥಾನ ನೀಡಬೇಕು” ಎಂದು ಚಿಕ್ಕ ಅಂಡಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಸಿ ಎಂ ಹರೀಶ್ ಕುಮಾರ್ ಆಗ್ರಹಿಸಿದರು.
ಬಂಗಾರಪೇಟೆ ಮುಖಂಡ ಸಂದೀಪ್ ಗೌಡ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಶಾಸಕ ನಂಜೇಗೌಡರಿಗೆ ಕಳೆದ ಬಾರಿ ಕೋಚಿಮುಲ್ ಅಧ್ಯಕ್ಷ ಸ್ಥಾನ ನೀಡಲಾಗಿತ್ತು. ಆದರೆ, ಈ ಬಾರಿ ಕೋಮುಲ್ ಅಧ್ಯಕ್ಷ ಸ್ಥಾನವನ್ನು ಮೊದಲ ಬಾರಿಗೆ ಕೋಮುಲ್ ನಿರ್ದೇಶಕರಾಗಿ ಆಯ್ಕೆಯಾದ ಶಾಸಕ ಎಸ್ ಎನ್ ನಾರಾಯಣಸ್ವಾಮಿ ಅವರಿಗೆ ನೀಡಬೇಕು. ಯಾಕಂದರೆ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರೂ ಕೂಡ ಇವರಿಗೆ ಸಚಿವ ಸ್ಥಾನ ಕೈತಪ್ಪಿದೆ. ಈಗ ಕೋಮುಲ್ ಅಧ್ಯಕ್ಷ ಸ್ಥಾನವನ್ನು ಕೊಡಲೇಬೇಕೆಂದು ನಾವು ಕಾಂಗ್ರೆಸ್ ಹೈಕಮಾಂಡ್‌ನಲ್ಲಿ ಆಗ್ರಹ ಮಾಡ್ತೇವೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕೋಮುಲ್ ಚುನಾವಣೆಯಲ್ಲಿ ನಾಲ್ಕು ನಿರ್ದೇಶಕ ಸ್ಥಾನವನ್ನು ಗೆದ್ದ ಜೆಡಿಎಸ್ ನಾಯಕರು ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದಾರೆ. ಸುಮಾರು 13 ಕ್ಷೇತ್ರಗಳಲ್ಲಿ ಕಾಂಗ್ರೆಸ್ 9 ಸ್ಥಾನ ಗೆದ್ದಿದ್ದು, ಜೆಡಿಎಸ್ ಬೆಂಬಲಿತ 4 ಸ್ಥಾನವನ್ನು ಪಡೆದಿದ್ದಾರೆ. ಒಂದು ವೇಳೆ ಶಾಸಕ ಎಸ್ ಎನ್ ನಾರಾಯಣಸ್ವಾಮಿ ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಯಾದರೆ ಜೆಡಿಎಸ್ ನಿರ್ದೇಶಕರು ಬೆಂಬಲ ನೀಡುವ ಸಾಧ್ಯತೆ ಇದೆಯೆಂದು ಹೇಳಲಾಗುತ್ತಿದ್ದು, ಶಾಸಕ ನಂಜೇಗೌಡ ಅಧ್ಯಕ್ಷರಾದರೆ ತಟಸ್ಥವಾಗಿರುತ್ತಾರೆ ಎಂಬ ಚರ್ಚೆಯೂ ನಡೆಯುತ್ತಿದೆ.
ಇದನ್ನೂ ಓದಿದ್ದೀರಾ? ತೀರ್ಥಹಳ್ಳಿ | ಗಾರ್ಡ್ ಗದ್ದೆಯ ಸರ್ಕಾರಿ ಶಾಲೆಯಲ್ಲಿ ಅವ್ಯವಸ್ಥೆ; ವಿದ್ಯಾರ್ಥಿಗಳ ಗೋಳು ಕೇಳೋರು ಯಾರು?
ಮಾಲೂರು ಶಾಸಕ ನಂಜೇಗೌಡ ಹಿಂದಿನ ಐದು ವರ್ಷ ಕೋಚಿಮುಲ್ ಅಧ್ಯಕ್ಷರಾಗಿದ್ದರು. ಈಗ ಮತ್ತೆ ಕೋಮುಲ್ ಚುನಾವಣೆಗೆ ಸ್ಪರ್ಧೆ ಮಾಡಿ ಅವಿರೋಧವಾಗಿ ಆಯ್ಕೆಯಾಗಿದ್ದು, ಕೆಎಂಎಫ್ ಅಧ್ಯಕ್ಷ ಸ್ಥಾನದ ಮೇಲೆ ಆಸೆ ವ್ಯಕ್ತಪಡಿಸಿ ಒಂದೇ ಏಟಿಗೆ ಎರಡು ಹಕ್ಕಿಗಳನ್ನು ಹೊಡೆಯುವ ತಂತ್ರಗಾರಿಕೆ ಮಾಡಿದ್ದಾರೆ.
ಶಾಸಕ ನಂಜೇಗೌಡರು, ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ ಕೆ ಶಿವಕುಮಾರ್ ಅವರೇ ನನಗೆ ಕೆಎಂಎಫ್ ಅಧ್ಯಕ್ಷ ಸ್ಥಾನ ನೀಡುತ್ತೇವೆಂದು ಹೇಳಿದ್ದರು. ಒಂದು ವೇಳೆ ನನಗೆ ನೀಡಿದರೆ ನಾನು ನಿಭಾಯಿಸುತ್ತೇನೆಂದು ಮಾಧ್ಯಮದಲ್ಲಿ ಪ್ರತಿಕ್ರಿಯೆ ನೀಡಿರುವುದು ಭಾರೀ ಚರ್ಚೆಗೆ ಒಳಗಾಗಿದೆ. ಕೆಎಂಎಫ್ ಅಧ್ಯಕ್ಷ ಸ್ಥಾನ ಇಲ್ಲದಿದ್ದರೂ ಕೋಮುಲ್ ಅಧ್ಯಕ್ಷ ಸ್ಥಾನವನ್ನು ನನಗೆ ನೀಡುತ್ತಾರೆ ಎನ್ನುವ ವಿಶ್ವಾಸದಲ್ಲಿದ್ದಾರೆಂದು ಹೇಳಲಾಗುತ್ತಿದೆ.
ಒಟ್ಟಾರೆ ಕಾಂಗ್ರೆಸ್ ಬಣ ರಾಜಕೀಯ ಹಾಗೂ ಶಾಸಕರ ಪೈಪೋಟಿ ನಡುವೆ ಯಾರ ಕೈ ಮೇಲಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.