ಜಾಗೃತಿ ಸಮಿತಿಯ ನಿಯಮಗಳನ್ನು ಉಲ್ಲಂಘಿಸಿ ಕಾನೂನು ಬಾಹಿರವಾಗಿ ಆಯ್ಕೆ ಮಾಡಿರುವ ಜಾಗೃತಿ (ಅಟ್ರಾಸಿಟಿ) ಸಮಿತಿಯನ್ನು ಈ ಕೂಡಲೇ ವಜಾಗೊಳಿಸಿ ಕಾನೂನಿನ ಪ್ರಕಾರ ಹೊಸದಾಗಿ ಜಾಗೃತಿ ಸಮಿತಿಯನ್ನು ಆಯ್ಕೆ ಮಾಡಬೇಕು ಹಾಗೂ ಸಮಾಜ ಕಲ್ಯಾಣ ಇಲಾಖೆಯ ಜೆಡಿ ಶ್ರೀನಿವಾಸನ್ ರವರ ನಿಯೋಜನೆಯನ್ನು ರದ್ದು ಮಾಡಿ, ನಿಷ್ಠಾವಂತ ಅಧಿಕಾರಿಯನ್ನು ಇಲಾಖೆಗೆ ನೇಮಕ ಮಾಡುವಂತೆ ಒತ್ತಾಯಿಸಿ ದಲಿತ ಸಂಘಟನೆಗಳ ಸಂಯುಕ್ತ ರಂಗದಿಂದ ಮಂಗಳವಾರ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಪುರುಷೋತ್ತಮ್ ಅವರ ಮೂಲಕ ಆಯುಕ್ತರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ನಗರದ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಕಛೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರಿಗೆ ಮನವಿ ನೀಡಿ ಮಾತನಾಡಿದ ದಲಿತ ಸಂಘಟನೆಗಳ ಸಂಯುಕ್ತ ರಂಗ ಅಧ್ಯಕ್ಷ ಡಿಪಿಎಸ್ ಮನಿರಾಜು ಹೊಸದಾಗಿ ಆಯ್ಕೆ ಮಾಡಿರುವ ಜಿಲ್ಲಾ ಜಾಗೃತಿ ಸಮಿತಿ ಆಯ್ಕೆ ಮಾಡಲು ಹಲವಾರು ನಿಬಂಧನೆಗಳು ಷರತ್ತುಗಳು ಇವೆ ಅರ್ಜಿಗಳನ್ನು ಹಾಕಲು ಎಲ್ಲಾ ದಲಿತಪರ ಸಂಘ ಸಂಸ್ಥೆಗಳು ಮತ್ತು ಸಮುದಾಯದ ಸೇವಕರಿಗೆ ಅವಕಾಶ ನೀಡಬೇಕು, ಅರ್ಜಿ ಹಾಕಲು ಮೊದಲೇ ಪ್ರಚಾರಗೊಳಿಸಬೇಕು ನಂತರ ಸಮುದಾಯದ ಬಡವರ ಪರವಾಗಿ ಯಾರು ಸೇವೆಗಳನ್ನು ಸಲ್ಲಿಸಿರುತ್ತಾರೆ ಅವರಿಗೆ ಮೊದಲ ಆದ್ಯತೆ ನೀಡಬೇಕು ಎಂದು ಮನವರಿಕೆ ಮಾಡಿಕೊಟ್ಟರು.
ಸಮಿತಿ ರಚನೆ ಮಾಡಲು ಸಮಾಜ ಕಲ್ಯಾಣ ಇಲಾಖೆಯ ಜೆಡಿ ಶ್ರೀನಿವಾಸನ್ ನಿಯಮಗಳನ್ನು ಉಲ್ಲಂಘನೆ ಮಾಡಿ ಈತನಿಗೆ ಬೇಕಾದವರಿಂದ ಎಷ್ಟು ಅರ್ಜಿಗಳು ಬೇಕೋ ಅಷ್ಟೇ ಅರ್ಜಿಗಳನ್ನು ಮಾತ್ರ ಪಡೆದುಕೊಂಡಿದ್ದಾರೆ ಹಿಂದಿನ ವರ್ಷಗಳಲ್ಲಿ ಈ ರೀತಿ ಸಮಿತಿಗೆ ಅರ್ಜಿಗಳನ್ನು ಕರೆದಾಗ ನೂರಾರು ಅರ್ಜಿಗಳನ್ನು ಸಲ್ಲಿಸಿರುವುದು ಕೂಡ ದಾಖಲೆಗಳಲ್ಲಿ ಇದೆ ಆದರೆ ಏಕಾಏಕಿ ಆಯಾ ಶಾಸಕರ ಶಿಫಾರಸ್ಸು ಪತ್ರಗಳನ್ನು ಪಡೆದುಕೊಂಡು ಭ್ರಷ್ಟ ಅಧಿಕಾರಿ ಶ್ರೀನಿವಾಸನ್ ರಾಜಕೀಯ ಏಜೆಂಟರಿಗೆ ಹಾಗೂ ಸಮುದಾಯದ ಬಗ್ಗೆ ಯಾವುದೇ ಅರಿವು ಇಲ್ಲದಂತಹವರನ್ನು ಕಾನೂನು ಬಾಹಿರವಾಗಿ ಜಾಗೃತಿ ಸಮಿತಿಗೆ ಆಯ್ಕೆ ಮಾಡಿದ್ದಾರೆ ಎಂದು ಆರೋಪಿಸಿದರು.
ದಮನಿತರ ಸೇವಾ ಸಮಿತಿ ರಾಜ್ಯ ಅಧ್ಯಕ್ಷ ಮೇಡಿಹಾಳ ಮುನಿಅಂಜಿನಪ್ಪ ಮಾತನಾಡಿ ಜಾಗೃತಿ ಸಮಿತಿಯನ್ನು ಈ ಕೂಡಲೇ ವಜಾಗೊಳಿಸಿ ನಿಯಮಗಳ ಪ್ರಕಾರ ಹೊಸದಾಗಿ ನೇಮಕ ಮಾಡಬೇಕು ಮತ್ತು ತೋಟಗಾರಿಕೆ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದವರನ್ನು ಸಮಾಜ ಕಲ್ಯಾಣ ಇಲಾಖೆಯಲ್ಲಿ ಜಂಟಿ ನಿರ್ದೇಶಕರಾಗಿ ನಿಯೋಜನೆಗೊಂಡಾಗಿನಿಂದ ಹಲವು ಅಕ್ರಮಗಳಲ್ಲಿ ಭಾಗಿಯಾಗಿದ್ದಾರೆ ಈ ಇಲಾಖೆಯ ಯೋಜನೆಗಳ ಬಗ್ಗೆ ಯಾವುದೇ ರೀತಿ ಇವರಿಗೆ ಅರಿವು ಇಲ್ಲ ಸಮಾಜ ಕಲ್ಯಾಣ ಇಲಾಖೆಯ ಜೆಡಿ ಶ್ರೀನಿವಾಸ್ ರವರ ನಿಯೋಜನೆಯನ್ನು ಕೂಡಲೇ ರದ್ದುಪಡಿಸಿ ಮಾತೃ ಇಲಾಖೆಗೆ ವರ್ಗಾಯಿಸಿ ಸಮಾಜ ಕಲ್ಯಾಣ ಇಲಾಖೆಗೆ ನಿಷ್ಠಾವಂತ ಅಧಿಕಾರಿಯನ್ನು ಸರ್ಕಾರದಿಂದ ನೇಮಕ ಮಾಡಿಕೊಡಬೇಕು ಇಲ್ಲದೆ ಹೋದರೆ ಜಿಲ್ಲಾಧಿಕಾರಿ ಕಛೇರಿ ಮುಂದೆ ಅನಿರ್ಧಿಷ್ಟ ಅವಧಿ ಧರಣಿ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಇದನ್ನು ಓದಿದ್ದೀರಾ..? ಕೋಲಾರ | ಪೋಷಕರು ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸಲು ಶಾಸಕ ಕೊತ್ತೂರು ಮಂಜುನಾಥ್ ಮನವಿ – ಈ ದಿನ.ಕಾಮ್
ಈ ಸಂದರ್ಭದಲ್ಲಿ ದಲಿತ ಸಂಘಟನೆಗಳ ಮುಖಂಡರಾದ ದಲಿತ್ ನಾರಾಯಣಸ್ವಾಮಿ, ಮೋಚಿಪಾಳ್ಳ ನಾಗೇಶ್, ಅಂಬೇಡ್ಕರ್ ನಗರ ಮಂಜು, ಮತ್ತಿಕುಂಟೆ ಕೃಷ್ಣಪ್ಪ, ಹರಳಕುಂಟೆ ರಾಜು, ಮಹಿಳಾ ಘಟಕದ ಗಿರಿಜಾ ಮುಂತಾದವರು ಇದ್ದರು.





