ಜೂನ್ 3ರಂದು (ನಾಳೆ) ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ವೇದಿಕೆ ಸಜ್ಜಾಗಿದೆ. ಕನಿಷ್ಠ ಮೂರು ಡಿಸಿಎಂ ಹುದ್ದೆಗಳನ್ನು ಸೃಷ್ಟಿಸಲಿದ್ದಾರೆ ಎಂಬ ಚರ್ಚೆಗಳೂ ನಡೆಯುತ್ತಿವೆ. ಇದೇ ಹೊತ್ತಿನಲ್ಲಿ ಮುಸ್ಲಿಂ ಸಮುದಾಯದ ನಾಯಕರಲ್ಲಿ ಕುರ್ಚಿಗಾಗಿ ನಡೆಯುತ್ತಿರುವ ಕಾದಾಟದ ಭಾಗವಾಗಿಯೇ, ಬಿ.ಝೆಡ್. ಜಮೀರ್ ಅಹ್ಮದ್ ಖಾನ್ ಅವರದ್ದು ಎನ್ನಲಾದ ಆಡಿಯೊ ವೈರಲ್ ಆಯಿತೆ? “ದಾವಣಗೆರೆ ಉಪಚುನಾವಣೆ ಸಂದರ್ಭದಲ್ಲಿ ಜಮೀರ್ ಅವರು ಪಕ್ಷ ವಿರೋಧಿ ಚಟುವಟಿಕೆಗಳನ್ನು ನಡೆಸಿದ್ದಾರೆ, ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ಉಚ್ಚಾಟಿತ ಉಪಾಧ್ಯಕ್ಷ ಮೊಹಮ್ಮದ್ ಸಿರಾಜ್ ಅವರೊಂದಿಗೆ ಮಾತನಾಡುತ್ತಾ, ಎಸ್ಡಿಪಿಐ ಅಭ್ಯರ್ಥಿ ಪರ ಮುಸ್ಲಿಮರ ಮತ ಹಾಕಿಸಲು ಜಮೀರ್ ಸೂಚಿಸಿದ್ದಾರೆ” ಎಂದು ಆರೋಪಿಸಲಾಗಿದೆ.
ಉಪಚುನಾವಣೆಯ ಮತದಾನದ ದಿನವಾದ ಏಪ್ರಿಲ್ 9ರಂದು ಇಬ್ಬರ ನಡುವೆ ನಡೆದಿದೆ ಎನ್ನಲಾದ ಮಾತುಕತೆಯ ಆಡಿಯೊವನ್ನು ‘ಕನ್ನಡ ಕಾಕ್ರೋಚ್’ ಎಂಬ ‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ಸೋಮವಾರ ನಸುಕಿನ 3 ಗಂಟೆಗೆ ಹಂಚಿಕೊಳ್ಳಲಾಗಿದೆ. ಉರ್ದು ಮತ್ತು ಕನ್ನಡದಲ್ಲಿ ನಡೆದ ಈ ಸಂಭಾಷಣೆಯ ಪೂರ್ಣ ಪಠ್ಯ ಕೂಡ ಇದರಲ್ಲಿದೆ. ಪಕ್ಷದ ವಿರುದ್ಧ ಮತಹಾಕಿಸಲು ಜಮೀರ್ ಸೂಚಿಸಿದ್ದರೆಂದು ಆ ವಿಡಿಯೊ ಪ್ರತಿಪಾದಿಸುತ್ತಿದೆ.
“ನನ್ನೊಂದಿಗೆ ಜಮೀರ್ ಅಹಮ್ಮದ್ ಅವರು ಪಕ್ಷ ವಿರೋಧಿಯಾಗಿ ಮಾತನಾಡಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಆಡಿಯೊಗೂ ನನಗೂ ಯಾವುದೇ ಸಂಬಂಧವಿಲ್ಲ. ಇದೊಂದು ಸಂಪೂರ್ಣವಾಗಿ ತಿರುಚಿದ ಆಡಿಯೊ. ಇದು ಸತ್ಯಕ್ಕೆ ದೂರವಾಗಿದೆ” ಎಂದಿರುವ ಸಿರಾಜ್, ಪ್ರಕರಣವನ್ನೂ ದಾಖಲಿಸಿದ್ದಾರೆ. ಈ ಕುರಿತು ಜಮೀರ್ ಅವರೂ ಪ್ರತಿಕ್ರಿಯಿಸಿದ್ದು, “ರಾಜ್ಯದ ಕೆಲವು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ನನ್ನ ಕುರಿತ ಆಡಿಯೊ ಸಂಪೂರ್ಣವಾಗಿ ನಕಲಿಯಾಗಿದ್ದು , ಇದನ್ನು ಎ.ಐ ತಂತ್ರಜ್ಞಾನ ಬಳಸಿ ಸೃಷ್ಟಿ ಮಾಡಲಾಗಿದೆ. ಇದು ನನ್ನ ವಿರುದ್ಧ ನಡೆದಿರುವ ದೊಡ್ಡ ರಾಜಕೀಯ ಷಡ್ಯಂತ್ರ. ನಕಲಿ ಆಡಿಯೊವನ್ನು ತಯಾರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿರುವ ಕಿಡಿಗೇಡಿಗಳ ವಿರುದ್ಧ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ದಾಖಲಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದ್ದಾರೆ.
ವಿಧಾನ ಪರಿಷತ್ ಸದಸ್ಯರಾದ ಕೆ. ಅಬ್ದುಲ್ ಜಬ್ಬಾರ್, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿಯಾಗಿದ್ದ ನಸೀರ್ ಅಹಮದ್, ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷ ಸಿರಾಜ್ ಅಹಮದ್ ಅವರ ವಿರುದ್ಧ ಪಕ್ಷವು ಈಗಾಗಲೇ ಕ್ರಮ ಜರುಗಿಸಿತ್ತು. ಮುಸ್ಲಿಮರು ದೊಡ್ಡ ಸಂಖ್ಯೆಯಲ್ಲಿರುವ ಕ್ಷೇತ್ರದಲ್ಲಿ ಸಮುದಾಯಕ್ಕೆ ಟಿಕೆಟ್ ನೀಡಬೇಕೆಂಬ ಆಗ್ರಹಗಳು ಮತ್ತು ಅದರ ಸುತ್ತಮುತ್ತ ರಾಜಕೀಯ ಚಟುವಟಿಕೆಗಳು ನಡೆದು ಎರಡು ತಿಂಗಳುಗಳಾಗುತ್ತಿವೆ. ಹೀಗಿರುವಾಗ ಜಮೀರ್ ಅವರದ್ದು ಎನ್ನಲಾದ ಆಡಿಯೊ ಇಷ್ಟು ತಡವಾಗಿ ವೈರಲ್ ಆಗಿದ್ದರ ಹಿಂದೆ ಇರುವ ಉದ್ದೇಶ ಪ್ರಶ್ನೆಗೆ ಒಳಗಾಗಿದೆ.
‘ಈದಿನ ಡಾಟ್ ಕಾಮ್’ ಜೊತೆ ಮಾತನಾಡಿದ ಮುಸ್ಲಿಂ ಮುಖಂಡ ಹಾಗೂ ಕಾಂಗ್ರೆಸ್ ಬೆಂಬಲಿಗ ಅಬ್ದುಲ್ ರಝಾಕ್ ಖಾನ್, “ಇದೊಂದು ಪಿತೂರಿ” ಎನ್ನುತ್ತಾರೆ. “ಹೊಸ ಸರ್ಕಾರದಲ್ಲಿ ಜಮೀರ್ ಅವರಿಗೆ ಸಚಿವ ಸ್ಥಾನ ತಪ್ಪಿಸಿ, ಆ ಅವಕಾಶವನ್ನು ತಾವು ಪಡೆದುಕೊಳ್ಳುವುದಕ್ಕಾಗಿಯೇ ಸಮುದಾಯದ ಕೆಲವು ನಾಯಕರು ಈ ಸಂಚು ರೂಪಿಸಿದ್ದಾರೆ” ಎಂದು ದೂರುವ ರಝಾಕ್ ಅವರು, ಸಮುದಾಯದ ಒಳಗೆ ನಡೆಯುತ್ತಿರುವ ಕುರ್ಚಿ ಕದನವನ್ನು ವಿವರಿಸುತ್ತಾರೆ.

“ಚುನಾವಣೆಗಳನ್ನು ಗೆದ್ದು, ಜನಮೆಚ್ಚುಗೆ ಪಡೆಯಲು ದೊಡ್ಡ ಕಸರತ್ತು ನಡೆಸಬೇಕು. ಜನರ ಪ್ರೀತಿ ಪಡೆದಿರುವ ಜಮೀರ್ ಅವರನ್ನು ತುಳಿಯಲು ಯತ್ನಿಸಲಾಗುತ್ತಿದೆ. ಈ ಆಡಿಯೊ ವೈರಲ್ ಯಾರು ಮಾಡಿದ್ದಾರೆಂಬ ಬಗ್ಗೆ ಗುಮಾನಿಗಳಿವೆ. ವಿಧಾನ ಪರಿಷತ್ತಿನ ಆಡಳಿತ ಪಕ್ಷದ ಮುಖ್ಯ ಸಚೇತಕ ಸಲೀಂ ಅಹ್ಮದ್, ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್ ಅವರು ಈ ಹಿಂದೆಯೇ ಪತ್ರಿಕಾಗೋಷ್ಠಿ ನಡೆಸಿ, ‘ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಒಂದಷ್ಟು ಹಿರಿಯ ಮುಖಂಡರು ಪಕ್ಷವನ್ನು ಸೋಲಿಸಲು ದೊಡ್ಡ ಹುನ್ನಾರ ಮಾಡಿದ್ದಾರೆ’ ಎಂದು ಹೇಳಿದ್ದರು. ಜೊತೆಗೆ ಆಡಿಯೊ ಇದೆ ಎಂದೂ ತಿಳಿಸಿದ್ದರು. ಅಕಸ್ಮಾತ್ ಆಡಿಯೊ ಇದ್ದಿದ್ದರೆ ಅದೇ ಸಮಯದಲ್ಲಿ ಬಹಿರಂಗಪಡಿಸಬೇಕಿತ್ತು” ಎನ್ನುತ್ತಾರೆ ರಝಾಕ್.
“ಜಮೀರ್ ಅವರ ರಾಜಕಾರಣ ಹಾಗೂ ಜನ ಪರ ಕಾಳಜಿಗಳನ್ನು ಗಮನಿಸಬೇಕಾಗುತ್ತದೆ. ನೊಂದವರಿಗೆ ಸಹಾಯ ಮಾಡುವ ಗುಣ ಅವರದ್ದು. ಯಾವುದೋ ಮಗುವಿನ ಹೃದಯ ಸರ್ಜರಿಗೆಂದು 25 ಲಕ್ಷ ರೂ. ಕೊಟ್ಟರು. ಪಕ್ಷದ ಕಾರ್ಯಕರ್ತ ಆಕಸ್ಮಿಕವಾಗಿ ಸತ್ತಾಗ ಕುಟುಂಬಕ್ಕೆ ನೆರವಾದರು. ಇದ್ರಿಷ್ ಪಾಷಾ ಕೊಲೆಯಾದಾಗ ಐದು ಲಕ್ಷ ರೂ.ಗಳನ್ನು ಕುಟುಂಬಕ್ಕೆ ನೀಡಿದರು. ಶಿವಾಜಿನಗರದಲ್ಲಿ ಆಸ್ಪತ್ರೆ ಗೋಡೆ ಕುಸಿದು ಬಡವರು ಸಾವಿಗೀಡಾದಾಗ ಎಲ್ಲ ಸಂತ್ರಸ್ತ ಕುಟುಂಬಗಳಿಗೆ ತಲಾ ಐದು ಲಕ್ಷ ರೂ. ಕೊಟ್ಟರು. ಜಮೀರ್ ವಿರುದ್ಧ ಇರುವ ಯಾರು ಕೂಡ ಇಂತಹ ಕೆಲಸಗಳನ್ನು ಮಾಡಿಲ್ಲ. ಎಲ್ಲ ಸಮುದಾಯದವರನ್ನು ಪ್ರೀತಿಯಿಂದ ಜಮೀರ್ ನಡೆಸಿಕೊಳ್ಳುತ್ತಾರೆ” ಎನ್ನುವ ಅವರು, “ದಾವಣಗೆರೆ ಪ್ರಹಸನ ಮುಗಿದು ಎರಡು ತಿಂಗಳುಗಳಾಯಿತು. ಈಗ ಜಮೀರ್ ಅವರಿಗೆ ಡಿಸಿಎಂ ಪಟ್ಟ ಸಿಗಬಾರದೆಂದು ಈ ಎಲ್ಲ ಪಿತೂರಿ ನಡೆಸಲಾಗುತ್ತಿದೆ. ಇದೊಂದು ಹೇಡಿತನದ ಕೃತ್ಯ. ಮಧ್ಯರಾತ್ರಿಯಲ್ಲಿ ಕನ್ನಡ ಕಾಕ್ರೋಚ್ ಎಂಬ ಟ್ವಿಟರ್ ಖಾತೆಯನ್ನು ಸೃಷ್ಟಿಸಿ, ಆಡಿಯೊ ಅಪ್ಲೋಡ್ ಮಾಡಿ, ಮಾಧ್ಯಮಗಳಿಗೆ ಫಾರ್ವಡ್ ಮಾಡಿದ್ದು ಯಾರು? ಇದೊಂದು ಷಡ್ಯಂತ್ರ ಅಲ್ಲವೇ?” ಎಂದು ಬೇಸರ ವ್ಯಕ್ತಪಡಿಸುತ್ತಾರೆ.
“ಕಾಂಗ್ರೆಸ್ ಪಕ್ಷವು ಜಮೀರ್ ಅವರ ಮೇಲೆ ಯಾವುದಾದರೂ ಕ್ರಮ ತೆಗೆದುಕೊಳ್ಳಬೇಕು ಅನ್ನುವುದಾದರೆ, ಇದೇ ನೀತಿ ಎಲ್ಲರಿಗೂ ಅನ್ವಯಿಸಬೇಕಲ್ಲವೇ? ದಿವಂಗತ ಶಾಮನೂರು ಶಿವಶಂಕರಪ್ಪ ಅವರು ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಯಡಿಯೂರಪ್ಪನವರ ಪುತ್ರನಿಗೆ ಮತ ನೀಡಿ ಎಂದು ಬಹಿರಂಗ ಹೇಳಿಕೆ ನೀಡಿದ್ದರು. ಆಗ ಶಿಸ್ತು ಸಮಿತಿ ಕಾಂಗ್ರೆಸ್ನಲ್ಲಿ ಇರಲಿಲ್ಲವೇ? ಜಮೀರ್ ಅವರು ಎತ್ತರಕ್ಕೆ ಬೆಳೆಯುವುದನ್ನು ಸಹಿಸಿಕೊಳ್ಳದವರು, ಕಾಂಗ್ರೆಸ್ ಪಕ್ಷದಲ್ಲಿದ್ದುಕೊಂಡೇ ಮಾಡಿರುವ ಪಿತೂರಿ ಇದಾಗಿದೆ. ಕಾಂಗ್ರೆಸ್ ಪಕ್ಷವು ಜಮೀರ್ ಅವರ ಜೊತೆ ಇದೆ. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರು ಜಮೀರ್ ಅವರ ಜೊತೆಯಲ್ಲಿದ್ದಾರೆ” ಎಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ.
ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ರಾಜ್ಯ ಉಪಾಧ್ಯಕ್ಷ ಹಾಗೂ ಲೇಖಕರಾದ ಡಾ.ರಝಾಕ್ ಉಸ್ತಾದ್ ಪ್ರತಿಕ್ರಿಯಿಸಿ, “ಬೆಳೆಯುತ್ತಿರುವ ನಾಯಕರಿಗೆ, ಸಮಾಜದಲ್ಲಿ ಜನಪ್ರಿಯರಾದವರಿಗೆ ಪಕ್ಷದ ಒಳಗೆ ಮತ್ತು ಹೊರಗೆ ವಿರೋಧಿಗಳು ಇದ್ದೇ ಇರುತ್ತಾರೆ. ಇಂತಹ ಘಟನೆಗಳಿಂದ ಜಮೀರ್ ಅಂಥವರ ರಾಜಕೀಯ ಅಂತ್ಯವಾದರೆ, ಅದು ಪಕ್ಷಕ್ಕೆ ದೊಡ್ಡ ಹಿನ್ನಡೆ ತರುತ್ತದೆ. ಜಮೀರ್ ಅಹಮ್ಮದ್ ಅವರು ಚುನಾವಣೆಗಳ ಸಂದರ್ಭದಲ್ಲಿ ದೇಶದಾದ್ಯಂತ ಪಕ್ಷದ ಪರವಾಗಿ ಕೆಲಸ ಮಾಡಿದವರು. ತೆಲಂಗಾಣ, ಮಹಾರಾಷ್ಟ್ರ, ಉತ್ತರಪ್ರದೇಶ, ಕೇರಳ, ಬಿಹಾರ- ಹೀಗೆ ಹಲವು ರಾಜ್ಯಗಳಿಗೆ ಹೋಗಿ ಪ್ರಚಾರಗಳನ್ನು ಮಾಡಿದ್ದಾರೆ. ಸ್ಟಾರ್ ಪ್ರಚಾರಕರಾಗಿ ಗುರುತಿಸಿಕೊಂಡಿರುವ ಅವರಿಗೆ ರಾಜಕೀಯ ವಿರೋಧಿಗಳು ಇದ್ದೇ ಇರುತ್ತಾರೆ. ಜಮೀರ್ಗೆ ಸಿಗುವ ಸ್ಥಾನ ತನಗೆ ಸಿಗಲಿ ಎಂದು ಬಯಸುವವರೂ ಇರುತ್ತಾರೆ. ಆಡಿಯೊ ಬಿಡುಗಡೆ ಮಾಡಲು ಬಳಸಿರುವ ಸಂದರ್ಭವನ್ನು ನೋಡಿದರೆ ಇದೊಂದು ರಾಜಕೀಯ ಷಡ್ಯಂತ್ರವಾಗಿಯೇ ಕಾಣುತ್ತದೆ” ಎಂದು ತಿಳಿಸಿದರು.

“2023 ಮತ್ತು 2024ರ ಚುನಾವಣೆಗಳಲ್ಲಿ ಪಕ್ಷ ವಿರೋಧಿ ಕೆಲಸ ಮಾಡಿದವರ ಬಗ್ಗೆ ಸಾಕಷ್ಟು ದೂರುಗಳು ಈಗಾಗಲೇ ಕೆಪಿಸಿಸಿ ಮುಂದೆ ಬಂದಿವೆ. ಅದ್ಯಾವುದರ ಮೇಲೂ ಕ್ರಮ ಆಗದೆ ದಾವಣಗೆರೆ ವಿಚಾರದಲ್ಲಿ ಮಾತ್ರ ಕ್ರಮ ಆಗುತ್ತದೆ ಎಂದರೆ, ಅಲ್ಲಿ ಯಾವುದೋ ಒಂದು ಶಕ್ತಿ ಕೆಲಸ ಮಾಡುತ್ತಿದೆ ಎಂದರ್ಥ. ಟಾರ್ಗೆಟ್ ಕಿಲ್ಲಿಂಗ್ ಇದು” ಎನ್ನುವ ಉಸ್ತಾದ್ ಅವರು, “ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ನಿಂತಿದ್ದಕ್ಕೆ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿತು. ಈಗ ಮುಸ್ಲಿಂ ಸಮುದಾಯದ ಒಗ್ಗಟ್ಟು ಒಡೆದು ಹೋದರೆ ಕಾಂಗ್ರೆಸ್ ಪಕ್ಷಕ್ಕೆ ನಷ್ಟವಾಗುತ್ತದೆ” ಎಂದು ಎಚ್ಚರಿಸಿದರು.
“ಈ ಹಿಂದೆ ಮುಸ್ಲಿಂ ನಾಯಕರಲ್ಲಿ ಇದ್ದ ಒಗ್ಗಟ್ಟು ಈಗ ಇಲ್ಲವಾಗಿದೆ. ನಾಳೆ ನಡೆಯುವ ಚುನಾವಣೆಯಲ್ಲಿ ಸದ್ಯದ ಸ್ಥಿತಿಯೇ ಮುಂದುವರಿದರೆ ಕಾಂಗ್ರೆಸ್ಗೆ ದೊಡ್ಡ ನಷ್ಟವಾಗುತ್ತದೆ. ದಾವಣಗೆರೆ ಉಪಚುನಾವಣೆ ಬಳಿಕ ಸಮುದಾಯದ ನಾಯಕರ ವಿರುದ್ಧವೇ ಪತ್ರಿಕಾಗೋಷ್ಠಿ ನಡೆಸಿದಾಗಲೇ ಕೆಟ್ಟ ಸಂದೇಶ ರವಾನೆಯಾಯಿತು. ಪಕ್ಷದೊಳಗೆ ಆಂತರಿಕವಾಗಿ ಬಗೆಹರಿಸಿಕೊಳ್ಳಬೇಕಾದ ಸಂಗತಿಗಳನ್ನು ಪತ್ರಿಕಾಗೋಷ್ಠಿ ನಡೆಸಿ ಬಹಿರಂಗಪಡಿಸುವ ಅಗತ್ಯವೇನಿತ್ತು” ಎಂದು ಪ್ರಶ್ನಿಸಿದರು.
“ಇಂಥವರನ್ನೇ ಮಂತ್ರಿ ಮಾಡಿ ಎಂದು ಸಮುದಾಯ ಕೇಳಿಲ್ಲ. ಸರ್ಕಾರ ಯಾರನ್ನು ಮಂತ್ರಿ ಮಾಡುತ್ತದೆಯೋ ಅವರೊಂದಿಗೆ ಸಮುದಾಯ ಹೋಗುತ್ತದೆ. ಜಮೀರ್ ಅವರನ್ನು ಮಂತ್ರಿ ಮಾಡದೆ ಸುಮ್ಮನೆ ಬಿಟ್ಟಿದ್ದರೂ ಸಮುದಾಯ ಪ್ರಶ್ನಿಸುತ್ತಿರಲಿಲ್ಲ. ಆದರೆ ಈ ರೀತಿಯಲ್ಲಿ ಅವಮಾನಿಸಿ, ಯಾವುದೇ ಆಡಿಯೊ ಬಿಟ್ಟು ತುಳಿಯಲು ಯತ್ನಿಸಿದರೆ ಸಮುದಾಯಕ್ಕೆ ತಪ್ಪು ಸಂದೇಶ ರವಾನೆಯಾಗುತ್ತದೆ” ಎಂದು ಅಭಿಪ್ರಾಯಪಟ್ಟರು.

ಮಾಜಿ ಡಿವೈಎಸ್ಪಿ, ಸಾಮಾಜಿಕ ಕಾರ್ಯಕರ್ತ ಸುಹೇಲ್ ಅಹಮ್ಮದ್ ಮಾತನಾಡಿ, “ನಾಳೆ ಪ್ರಮಾಣ ವಚನ ಇರುವಾಗ ಇಂತಹ ಆಡಿಯೊಗಳಿಗೆ ಪಕ್ಷವು ಆಸ್ಪದ ನೀಡಬಾರದು. ಸಿದ್ದರಾಮಯ್ಯನವರ ಜೊತೆಗೆ ಅಹಿಂದಕ್ಕಾಗಿ ಹೋರಾಡಿದವರಲ್ಲಿ ಜಮೀರ್ ಕೂಡ ಒಬ್ಬರು. ರಾಜ್ಯ ಪ್ರವಾಸ ಮಾಡಿ ಸಮುದಾಯದೊಂದಿಗೆ ಗುರುತಿಸಿಕೊಂಡಿದ್ದಾರೆ. ಅದನ್ನು ಗಂಭೀರವಾಗಿ ಪರಿಗಣಿಸಬೇಕು. ಪಕ್ಷ ವಿರೋಧಿ ಚಟುವಟಿಕೆ ಅನಿಸಿದರೂ ಇಷ್ಟು ದಿನ ಸುಮ್ಮನಿದ್ದದ್ದು ಏಕೆ ಎಂಬುದೇ ಇಲ್ಲಿನ ಮುಖ್ಯಪ್ರಶ್ನೆ” ಎಂದರು.
ರಿಜ್ವಾನ್ ಅರ್ಷದ್ ಅವರನ್ನು ಸಂಪರ್ಕಿಸಲು ‘ಈದಿನ ಡಾಟ್ ಕಾಮ್’ ಯತ್ನಿಸಿತು. ಆದರೆ ಅವರು ಕರೆಗೆ ಲಭ್ಯವಾಗಲಿಲ್ಲ.




