ಪರಿಶಿಷ್ಟ ಪಂಗಡದ ಯುವಕನನ್ನು ಪ್ರೀತಿಸಿದಳು ಎಂಬ ಕಾರಣಕ್ಕೆ ತನ್ನ ತಂದೆಯೇ ಮಗಳನ್ನು ಮರ್ಯಾದೆಗೇಡು ಹತ್ಯೆ ಮಾಡಿ, ಸಮಾಧಿ ಮಾಡಿರುವ ಆಘಾತಕಾರಿ ಘಟನೆ ಕೋಲಾರ ಜಿಲ್ಲೆಯಲ್ಲಿ ನಡೆದಿದೆ.
ಕೋಲಾರ ತಾಲೂಕಿನ ತೊಟ್ಲಿ ಗ್ರಾಮದಲ್ಲಿ ಮಾರ್ಯಾದೆಗೇಡು ಹತ್ಯೆ ನಡೆದಿದ್ದು, ಬಳಿಕ ಯಾರಿಗೂ ಗೊತ್ತಾಗದಂತೆ ಸಮಾಧಿಯನ್ನೂ ಮಾಡಿದ್ದಾರೆ. ಈ ವಿಚಾರ ಪೊಲೀಸ್ ಕಿವಿಗೆ ಬಿದ್ದಿದ್ದರಿಂದ ಜಾತಿರೋಗಪೀಡಿತ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ.
ರಮ್ಯಾ (19) ಎಂಬ ಯುವತಿ ಹತ್ಯೆಗೆ ಒಳಗಾಗಿದ್ದು, ತಂದೆ ವೆಂಕಟೇಶಗೌಡ ಕೊಲೆ ಆರೋಪಿಯಾಗಿದ್ದಾನೆ. ನರಸಾಪುರ ಖಾಸಗಿ ಕಂಪನಿಗೆ ಕೆಲಸಕ್ಕೆ ಹೋಗುವಾಗ ಆಕೆಗೆ ಪರಿಶಿಷ್ಟ ಪಂಗಡದ ಹುಡುಗನೊಂದಿಗೆ ಪ್ರೀತಿಯಾಗಿದೆ. ಈ ಪ್ರೀತಿ ಹಲವು ದಿನ ಮುಂದುವರೆದಿದೆ.
ಪರಿಶಿಷ್ಟ ಪಂಗಡದ ಯುವಕನನ್ನು ಮಗಳು ಪ್ರೀತಿಸಿದ ವಿಷಯ ತಂದೆಗೆ ಗೊತ್ತಾಗಿದೆ. ಈ ಕಾರಣಕ್ಕೆ ತಂದೆ ಮಗಳು ರಮ್ಯಾಳನ್ನು ಕರೆದು ‘ಬುದ್ಧಿ’ ಹೇಳಿದ್ದಾನೆ. ಆದರೆ, ಆಕೆ ತಂದೆಯ ಮಾತನ್ನು ಕಿವಿಗೆ ಹಾಕಿಕೊಳ್ಳದೆ ತನ್ನ ಪ್ರೀತಿಯನ್ನು ಮುಂದುವರಿಸಿದ್ದಾಳೆ.
ಮಗಳ ವಿಚಾರಕ್ಕೆ ಆಕ್ರೋಶಗೊಂಡಿದ್ದ ಪೋಷಕರು ಆಗಸ್ಟ್ 25ರಂದು ಮಗಳನ್ನು ಕೊಂದಿದ್ದು, ಎಲ್ಲರೂ ಸೇರಿ ಆಕೆಯ ಅಂತ್ಯಸಂಸ್ಕಾರವನ್ನೂ ಮಾಡಿ ಮುಗಿಸಿದ್ದಾರೆ. ಈ ವಿಚಾರ ಊರಿನ ಕೆಲವರಿಗೆ ಗೊತ್ತಾಗಿ ಗುಸು ಗುಸು ಪ್ರಾರಂಭವಾದ ಬಳಿಕ ಪೊಲೀಸರ ಬಳಿಗೆ ದೂರು ಹೋಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ರಮ್ಯಾಳ ತಂದೆ ವೆಂಕಟೇಶಗೌಡನನ್ನು ಕರೆದು ವಿಚಾರಣೆಗೊಳಪಡಿಸಿದ್ದಾರೆ. ಬಳಿಕ ವಿಷಯ ಬೆಳಕಿಗೆ ಬಂದಿದೆ.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಮನೆ ಎದುರು ಗಲಾಟೆ ಮಾಡಬೇಡಿ ಎಂದಿದ್ದಕ್ಕೆ ತಂದೆ, ಮಗನಿಗೆ ಹಲ್ಲೆ; ಉದ್ವಿಗ್ನ ಪರಿಸ್ಥಿತಿ
ಭಾನುವಾರ (ಆಗಸ್ಟ್ 27) ಬೆಳಿಗ್ಗೆ ಕೋಲಾರ ತಹಶೀಲ್ದಾರ್ ಹರ್ಷವರ್ಧನ್ ನೇತೃತ್ವದಲ್ಲಿ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ಸಂಬಂಧ ಯುವತಿಯ ತಂದೆ ವೆಂಕಟೇಶಗೌಡ, ಮೋಹನ್ ಮತ್ತು ಚೌಡೇಗೌಡ ಎಂಬುವವರನ್ನು ಕೋಲಾರ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಈ ದಿನ.ಕಾಮ್ ಕೋಲಾರ ಎಸ್‌ಪಿ ಹಾಗೂ ತಹಶೀಲ್ದಾರ್ ಅವರನ್ನು ಸಂಪರ್ಕಿಸಿದೆ. ಆದರೆ, ಅವರು ಕರೆಗೆ ಲಭ್ಯವಾಗಿಲ್ಲ.