ಕೋಲಾರ ನಗರಸಭೆಯ ನೂತನ ಸಮಿತಿ ಆಯ್ಕೆಗೂ ಮೊದಲಿನಿಂದ ಆಡಳಿತಾಧಿಕಾರಿ ಅವಧಿಯಲ್ಲಿ ನಗರದಲ್ಲಿ ನಡೆದಿರುವ ಕಾಮಗಾರಿಗಳು ಮತ್ತು ಬಿಲ್‌ಗಳಿಗೆ ಸಂಬಂಧಿಸಿದಂತೆ ವಿಶೇಷವಾಗಿ ತನಿಖೆ ನಡೆಸಲು ಲೋಕಾಯುಕ್ತಗೆ ದೂರು ನೀಡಲು ಸಾಮಾನ್ಯ ಸಭೆಯಲ್ಲಿ ಸದಸ್ಯರು ಒಕ್ಕೊರಲಿನಿಂದ ನಿರ್ಧರಿಸಲಾಯಿತು.
ನಗರಸಭೆ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಸದಸ್ಯರು, ತಮ್ಮ ತಮ್ಮ ವಾರ್ಡ್‌ಗಳಲ್ಲಿ ಏನು ನಡೆದಿದೆ ಅಂತ ನಮಗೆ ಮಾಹಿತಿನೇ ಇರಲ್ಲ. ನಗರಸಭೆಯ ಸದಸ್ಯರಿಗೆ ಗೊತ್ತಿಲ್ಲ. ಆದರೂ ವಾರ್ಡಿಗೆ ಸಂಬಂಧಿಸಿದಂತೆ ಬಿಲ್ ಪಾವತಿಯಾಗಿದೆ. ಇದಕ್ಕೆ ಯಾರು ಹೊಣೆ? ಇದನ್ನು ಈಗೇ ಬಿಟ್ಟರೆ ಮುಂದೆ ಇಂತಹ ಅಕ್ರಮ ಬಿಲ್‌ಗಳು ಹೆಚ್ಚಾಗುತ್ತದೆ. ಇದಕ್ಕೆ ಕಡಿವಾಣ ಹಾಕಬೇಕಾದರೆ ಲೋಕಾಯುಕ್ತ ಸಂಸ್ಥೆಯಿಂದ ತನಿಖೆಯಾಗಲೇ ಬೇಕು. ಮುಂದೆ ಯಾವುದೇ ಕಾರಣಕ್ಕೂ ಅಧ್ಯಕ್ಷರು ಪರಿಶೀಲನೆ ನಡೆಯದೆ ಬಿಲ್ ಪಾವತಿ ಮಾಡಬಾರದು ಎಂದು ತೀರ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಶಾಸಕ ಕೊತ್ತೂರು ಮಂಜುನಾಥ್ ಮಾತನಾಡಿ, ನಗರಸಭೆ ಅಧಿಕಾರಿಗಳು ಎಂದರೆ ನೀವು ಏನು ಅಂದುಕೊಂಡಿದ್ದೀರಾ? ನೀವೇನೇ ಸುಪ್ರೀಂ ಅನ್ನುವುದನ್ನು ಬಿಡಿ. ಸಾರ್ವಜನಿಕರು ಕೆಲಸವಾಗಿಲ್ಲ ಎಂದರೆ ಯಾರು ಅಧಿಕಾರಿಗಳ ಮನೆ ಬಾಗಿಲು ತಟ್ಟಲ್ಲ ನಗರಸಭೆ ಸದಸ್ಯರ ಮನೆ ಬಾಗಿಲು ತಟ್ಟೋದು. ಅಧಿಕಾರಿಗಳು ನಗರಸಭೆ ಕಚೇರಿಯೊಳಗೆ ಕುಳಿತುಕೊಂಡು ಬಿಲ್ ಗಳು ಮಾಡಿಕೊಂಡು ಇದ್ದುಬಿಡಿ ಎಂದರು.
ನಗರಕ್ಕೆ ಗ್ಯಾಸ್ ಪೈಪ್ ಲೈನ್ ಅಳವಡಿಕೆ ಸಂಬಂಧ ತಮಿಳುನಾಡಿನ ಏಜೆನ್ಸಿಯವರು ಬಂದಿದ್ದರು. ನೆಲ ಅಗೆಯುವಾಗ ಕೇಬಲ್ ಅಥವಾ ಪೈಪ್ ಗೆ ಧಕ್ಕೆಯಾದರೆ ತಾವೇ ಸರಿಪಡಿಸುವ ಬಗ್ಗೆ ಒಪ್ಪಂದ ಮಾಡಿಕೊಳ್ಳಬೇಕು ಎಂದು ಹೇಳಿದ್ದೇನೆ. ಚರ್ಚೆ ಹಂತದಲ್ಲಿದ್ದು, ನಗರಸಭೆ ಸದಸ್ಯರ ಜೊತೆ ಚರ್ಚೆ ಮಾಡಬೇಕು. ಒಪ್ಪಂದ ಇಲ್ಲದಿದ್ದರೆ ಕೊಡಲ್ಲ ಎಂದು ಈಗಾಗಲೇ ಅವರಿಗೆ ಹೇಳಲಾಗಿದೆ ಎಂದರು.

ನಗರಸಭೆ ಸದಸ್ಯ ಮುರಳಿಗೌಡ ಮಾತನಾಡಿ, ನಗರಕ್ಕೆ ನೀರು ಸರಬರಾಜು ಮಾಡುವ ಅಮ್ಮೇರಹಳ್ಳಿ ಕೆರೆಯಿಂದ ವಾರ್ಡ್‌ಗಳಿಗೆ ನೀರು ಬರತ್ತಾ ಇಲ್ಲ ಆದರೂ ಬಿಲ್ ಗಳು ಆಗಿವೆ ವರ್ಷಕ್ಕೆ ಎಷ್ಟು ಬಾರಿ ಪಂಪ್ ಹೌಸ್ ರಿಪೇರಿ ಅಂತ ಬಿಲ್ ಮಾಡತ್ತಾರೆ ಪರಿಶೀಲನೆ ಮಾಡಬೇಕು ಬಸವನತ್ತದಲ್ಲಿರುವ ನಗರಸಭೆಗೆ ಸೇರಿದ ಜಮೀನು ಸರ್ವೇ ಮಾಡಿ ಎಂದು ಕೋರಿದರು.
ಸದಸ್ಯ ಪ್ರವೀಣ್ ಗೌಡ ಮಾತನಾಡಿ, ನಗರಸಭೆ ವ್ಯಾಪ್ತಿಯಲ್ಲಿ ಎಷ್ಟು ನಿವೇಶನಗಳು ಇವೆ ಹೊರಗಡೆ ಪ್ರದೇಶದ ಎಷ್ಟು ಜಮೀನು ನಗರಸಭೆಗೆ ಮಂಜೂರು ಆಗಿದೆ ಮಾಹಿತಿ ಕೊಡಿ. ಖಾದ್ರಿಪುರದಲ್ಲಿ ಎರಡು ಸರ್ವೇ ನಂಬರ್ ಗಳಲ್ಲಿ ನಗರಸಭೆಯ ಜಾಗವನ್ನು ನಕಲಿ ದಾಖಲೆ ಸೃಷ್ಟಿಸಿ ಖಾತೆ ಮಾಡಿಕೊಡಲಾಗಿದೆ. ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಬಡವರಿಗೆ ವಿತರಿಸಲು ಮೀಸಲಿರುವ ಜಾಗ ಉಳಿಸಿಕೊಳ್ಳಿ ವಶಕ್ಕೆ ಪಡೆದು ಬೇಲಿ ಹಾಕಿ ನಗರಸಭೆ ವ್ಯಾಪ್ತಿಯ ಗುಂಡುತೋಪುಗಳಲ್ಲಿ ಅಕ್ರಮ ನಡೆದಿದೆ ಎಂದು ದೂರಿದರು.
ಇದನ್ನೂ ಓದಿ: ಮದ್ದೂರು ಪುರಸಭೆ | ಸಾವಿರಾರು ಅರ್ಜಿ ವಿಲೇವಾರಿ ಬಾಕಿ; ಸಾರ್ವಜನಿಕರ ಅಲೆದಾಟ
ಭೂ ಮಾಫಿಯಾದಿಂದ ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಆರೋಪ. ಈ ಬಗ್ಗೆ 35 ವಾರ್ಡ್‌ಗಳ ಮಾಹಿತಿ ಕೊಡಿ. ರಕ್ಣಣೆಗೆ ಮುಂದಾಗಿ, ಮಹಿಳಾ ಸಮಾಜದ ಜಾಗ ನಗರಸಭೆಗೆ ಸೇರಿದ್ದು, ನಗರಸಭೆ ಉಳಿಸಿಕೊಳ್ಳುವಲ್ಲಿ ಅಧಿಕಾರಿಗಳು ಬದ್ಧತೆ ತೋರಬೇಕು. ಭೂಗಳ್ಳರ ಜೊತೆ ಕೈಜೋಡಿಸಿದರೆ ಹೇಗೆ ಎಂದು ಪ್ರಶ್ನಿಸಿದರು. ಆಗ ಅಧಿಕಾರಿಗಳು ಸುಮಾರು 145 ನಿವೇಶನ, 28 ಸಿಎ ನಿವೇಶನ, 30 ಪಾರ್ಕ್ ಇವೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಸದಸ್ಯ ಸುರೇಶ್ ಬಾಬು ಮಾತನಾಡಿ, ಸ್ವಚ್ಛ ಭಾರತ್ ಮಿಷನ್ 1.0ನಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿದ್ದು, ಎಲ್ಲಾ ವಸ್ತುಗಳನ್ನು ಮಾರುಕಟ್ಟೆ ದರಕ್ಕಿಂತ ದುಪ್ಪಟ್ಟು ಬೆಲೆಗೆ ಖರೀದಿಸಿದ್ದಾರೆ. ತನಿಖೆ ಮಾಡಿ ಶಾಮೀಲಾಗಿರುವ ಅಧಿಕಾರಿಗಳನ್ನು ಅಮಾನತು ಮಾಡಿ. ಉಳಿದ ಅಧಿಕಾರಿಗಳಿಗೆ ಎಚ್ಚರಿಕೆ ಬರುತ್ತದೆ ಎಂದು ಒತ್ತಾಯಿಸಿದರು.
ನಗರಸಭೆಗೆ ಸೇರಿದ ಸರ್ಕಾರಿ ಸ್ವತ್ತುಗಳ ಒತ್ತುವರಿ, ಅಧಿಕಾರಿಗಳ ನಿರ್ಲಕ್ಷ್ಯ ವಹಿಸಿದ್ದು ಮಹಿಳಾ ಸಮಾಜ ಜಾಗವು 50 ಕೋಟಿ ದಯವಿಟ್ಟು ಕ್ರಮಕೈಗೊಳ್ಳಿ, ವಶಕ್ಕೆ ಪಡೆದರೆ ನಗರಸಭೆಗೆ ಆದಾಯ ಬರುತ್ತದೆ 17ನೇ ವಾರ್ಡ್ ನಲ್ಲಿರುವ ಉದ್ಯಾನದಲ್ಲಿ ಅಕ್ರಮವಾಗಿ ಮನೆ ಕಟ್ಟುತ್ತಿದ್ದಾರೆ ಅಧಿಕಾರಿಗಳ ಹೇಳಿದರು ಕನಿಷ್ಠ ಸ್ಥಳಕ್ಕೆ ಭೇಟಿ ಕೊಟ್ಟಿಲ್ಲ ಎಂದು ಆರೋಪಿಸಿದರು.
ಇದಕ್ಕೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್ ಮಾತನಾಡಿ, ಕೂಡಲೇ ಅಧಿಕಾರಿಗಳು ಭೇಟಿ ನೀಡಿ ದಾಖಲೆ ಕೇಳಿ ಅಕ್ರಮವಾಗಿ ಕಟ್ಟಿರುವುದು ಗೊತ್ತಾಗುತ್ತದೆ. ಕೂಡಲೇ ವಶಕ್ಕೆ ಪಡೆಯಿರಿ. ಕಟ್ಟಡ ತೆರವುಗೊಳಿಸಿ. ಹೀಗೆ ಉಳಿದ ವಾರ್ಡ್ ಗಳಲ್ಲೂ ಪರಿಶೀಲನೆ ಮಾಡಿ ಪೊಲೀಸರಿಗೆ ಮನವಿ ಮಾಡಿ ರಕ್ಷಣೆ ಪಡೆಯಿರಿ. ಇಲ್ಲದಿದ್ದರೆ ಏನೂ ಮಾಡಲು ಸಾಧ್ಯವಿಲ್ಲ. ಅಧಿಕಾರಿಗಳು ಕೆಲಸ ಮಾಡದಿದ್ದರೆ ನೋಟಿಸ್ ಕೊಡಿ. ಜೊತೆಗೆ ನಗರದಲ್ಲಿ ಕಾಮಗಾರಿ ಸಂಬಂಧ ಕೆಲಸ ಮಾಡದ ಗುತ್ತಿಗೆದಾರರಿಗೆ ನೋಟಿಸ್ ಕೊಡಿ. ಆಗಲೂ ಉತ್ತರ ಕೊಡದಿದ್ದರೆ ಕಪ್ಪು ಪಟ್ಟಿಗೆ ಸೇರಿಸಿ ಎಂದು ಸೂಚಿಸಿದರು.
ಇದನ್ನು ಓದಿದ್ದೀರಾ? ಕಾಂಗ್ರೆಸ್ ಹೈಕಮಾಂಡ್ ಮಾತಿಗೆ ಮನ್ನಣೆ ಕೊಡುತ್ತಿದ್ದಾರೆಯೇ ರಾಜ್ಯದ ಸಚಿವರು?
ಸದಸ್ಯ ರಾಕೇಶ್ ಮಾತನಾಡಿ, ನಗರಸಭೆಯ ಸಮಸ್ಯೆಗಳಿಗೆ ದೂರು ಕೊಟ್ಟರೂ ಯಾವುದೇ ಪ್ರಯೋಜನವಿಲ್ಲ ಖರ್ಚು ವೆಚ್ಚಗಳಿಗೆ ಸಂಬಂಧಿಸಿದಂತೆ ಎಲ್ಲಿ ದಾಖಲೆಗಳು ಸೃಷ್ಟಿಯಾಗುತ್ತವೆ ಯಾರಿಗೂ ಗೊತ್ತಿಲ್ಲ ಆದರೆ ಸಭೆಗೆ ಮಾತ್ರ ಬಿಲ್ ಪಾವತಿಯಾಗಿ ಅಂತ ಬರುತ್ತದೆ ಎಂದರು.
ಸಭೆಗೆ ಭಾರಿ ಬಿಗಿ ಭದ್ರತೆ
ನಗರಸಭೆಗೆ ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯ ಬಳಿಕ ನಡೆದ ಮೊದಲ ಸಭೆಗೆ ಭಾರಿ ಬಿಗಿ ಭದ್ರತೆಯಲ್ಲಿ ನಡೆಸಲಾಯಿತು ಗಲ್ ಪೇಟೆ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಲೋಕೇಶ್ ನೇತೃತ್ವದಲ್ಲಿ ಬಿಗಿ ಭದ್ರತೆ ಒದಗಿಸಲಾಗಿತ್ತು.
ಸಭೆಯ ಅಧ್ಯಕ್ಷತೆಯನ್ನು ಲಕ್ಷ್ಮಿದೇವಮ್ಮ ರಮೇಶ್ ವಹಿಸಿದ್ದರು. ಉಪಾಧ್ಯಕ್ಷೆ ಸಂಗೀತಾ, ತಹಶೀಲ್ದಾರ್ ನಯನಾ, ನಗರಸಭೆ ಪ್ರಭಾರಿ ಆಯುಕ್ತೆ ಅಂಬಿಕಾ, ಕುಡಾ ಅಧ್ಯಕ್ಷ ಮೊಹಮ್ಮದ್ ಹನೀಫ್, ಎಂಜಿನಿಯರ್ ಶ್ರೀನಿವಾಸ್ ಇದ್ದರು.
