ಕಾರ್ಗಿಲ್ ಯುದ್ಧದಲ್ಲಿ ಕಾಲು ಕಳೆದುಕೊಂಡಿರುವ ಮಾಜಿ ಸೈನಿಕರೊಬ್ಬರು ಸರ್ಕಾರದಿಂದ ಜಮೀನು ನೀಡುವಂತೆ ಆಗ್ರಹಿಸಿ ಕಳೆದ ಎರಡು ದಿನಗಳಿಂದ ತಮ್ಮ ಪತ್ನಿ, ಮಕ್ಕಳ ಸಹಿತ ನಡೆಸುತ್ತಿರುವ ಉಪವಾಸ ಸತ್ಯಾಗ್ರಹ ಐದನೇ ದಿನಕ್ಕೆ ಕಾಲಿಟ್ಟಿದ್ದು, ಉಪವಾಸ ಸತ್ಯಾಗ್ರಹಕ್ಕೆ ಮಾಜಿ ಸೈನಿಕರ ಸಂಘವೂ ಸಾಥ್ ನೀಡಿ ಅವರೂ ಕೂಡಾ ಧರಣಿ ಕುಳಿತಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಅಂಬಾಜಿದುರ್ಗ ಹೋಬಳಿಯ ರಾಯಪಲ್ಲಿ ಗ್ರಾಮದ ಶಿವಾನಂದರೆಡ್ಡಿ ಸುಮಾರು ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಗಡಿ ಭಾಗದಲ್ಲಿ ನಡೆದ ಅಪಘಾತದಿಂದಾಗಿ ಅವರು ಅಂಗವಿಕಲರಾಗಿದ್ದು, ಕಾಲಿಗೆ ತೀವ್ರ ಪೆಟ್ಟಾಗಿ ಸೇನೆಯಿಂದ ಕಡ್ಡಾಯ ನಿವೃತ್ತಿ ಪಡೆದ ಮಾಜಿ ಯೋಧ. ಇವರು ಕಾಲಿಗೆ ಪೆಟ್ಟುಬಿದ್ದು, ನಿವೃತ್ತಿಯಾದ ಹಿನ್ನೆಲೆಯಲ್ಲಿ ಸೇನೆಯಿಂದಲೇ ಜಮೀನು ಮಂಜೂರು ಮಾಡುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ. ಹಾಗೆ ಸೂಚಿಸಿ ಎರಡೂವರೆ ದಶಕವೇ ಕಳೆದರೂ ಕೂಡ ಇವರಿಗೆ ಸರ್ಕಾರದಿಂದ ಸಿಗಬೇಕಾದ ಜಮೀನು ಸಿಕ್ಕಿಲ್ಲ. ಇದು ನಮ್ಮ ದೇಶದ ಮಾಜಿ ಯೋಧರೊಬ್ಬರಿಗೆ ನಮ್ಮ ಆಡಳಿತ ನೀಡಿರುವ ಗೌರವ.
“ತನಗೆ ಸರ್ಕಾರದಿಂದ ಸಿಗಬೇಕಾದ ಜಮೀನಿಗಾಗಿ ಕಳೆದ 24 ವರ್ಷಗಳಿಂದ ಹೋರಾಟ ನಡೆಸಿದ್ದು, ಮುಖ್ಯಮಂತ್ರಿ, ಸಚಿವರು, ಜಿಲ್ಲಾಧಿಕಾರಿಗಳು ಸ್ಥಳೀಯ ಅಧಿಕಾರಿಗಳ ಗಮನಕ್ಕೂ ತಂದಿದ್ದರು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಇದರಿಂದ ಬೇಸತ್ತಿದ್ದು, ಉಪವಾಸ ಸತ್ಯಾಗ್ರಹವನ್ನು ಆರಂಭಿಸಲಾಗಿದೆ. ತಾಲೂಕು ದಂಡಾಧಿಕಾರಿ ಸುದರ್ಶನ್ ಯಾದವ್ ಅವರು ಧರಣಿ ಸ್ಥಳಕ್ಕೆ ಆಗಮಿಸಿದ್ದು, ಮಾಜಿ ಸೈನಿಕರೊಂದಿಗೆ ಮಾತುಕತೆ ನಡೆಸಿ ಉಪವಾಸ ಸತ್ಯಾಗ್ರಹ ಕೈಬಿಡುವಂತೆ ಮನವಿ ಮಾಡಿದರು. ಆದರೆ ಮೊದಲು ಜಮೀನು ಮಂಜೂರು ಮಾಡಿರುವ ಆದೇಶ ಪತ್ರವನ್ನು ಕೊಡಿ ಬಳಿಕ ಉಪವಾಸ ಸತ್ಯಾಗ್ರಹ ಕೈಬಿಡುತ್ತೇವೆ” ಎಂದು ಮಾಜಿ ಸೈನಿಕರು ಪಟ್ಟು ಹಿಡಿದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕೋಲಾರ | ಆ.17ರಂದು ವೇಮಗಲ್, ಕುರುಗಲ್ ಪಟ್ಟಣ ಪಂಚಾಯಿತಿ ಚುನಾವಣೆ: ಜಿಲ್ಲಾಧಿಕಾರಿ ಎಂ ಆರ್ ರವಿ
ದಂಡಾಧಿಕಾರಿಗಳು ಪ್ರತಿಕ್ರಿಯಿಸಿದ್ದು, ಈಗಾಗಲೇ ಜಮೀನು ಮಂಜೂರು ಮಾಡಿಕೊಡಲು ಚಿಕ್ಕಬಳ್ಳಾಪುರ ಜಿಲ್ಲಾ ಅಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅಲ್ಲಿಂದ ಪ್ರಸ್ತಾವನೆ ಬಂದಿಲ್ಲವೆಂದು ಹೇಳಿದಾಗ, ಮಾಜಿ ಸೈನಿಕರು ಜಿಲ್ಲಾಧಿಕಾರಿಗಳೇ ಇಲ್ಲಿಗೆ ಬರಲಿ ಅವರೊಂದಿಗೆ ಮಾತುಕತೆ ನಡೆಸಿದ ನಂತರ ನಿರ್ಣಯ ತೆಗೆದುಕೊಳ್ಳುತ್ತೇವೆಂದು ಹೇಳಿ ಉಪವಾಸ ಸತ್ಯಾಗ್ರಹ ಮುಂದುವರೆಸಿದ್ದಾರೆ.