ಜ್ವರದಿಂದ ನರಳುತ್ತಿದ್ದ ಯುವಕನಿಗೆ ಖಾಸಗಿ ಕ್ಲಿನಿಕ್ ವೈದ್ಯ ಇಂಜೆಕ್ಷನ್ ನೀಡಿದ್ದು, ಇಂಜೆಕ್ಷನ್ ಪಡೆದ ಕೆಲವೇ ಸಮಯದಲ್ಲಿ ಯುವಕ ಮೃತಪಟ್ಟಿರುವ ಘಟನೆ ಕೋಲಾರ ಜಿಲ್ಲೆಯ ವಕ್ಕಲೇರಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಯುವಕ ನಾಗೇಂದ್ರಬಾಬು ಎರಡು ದಿನಗಳಿಂದ ಜ್ವರದಿಂದ ಬಳಲುತ್ತಿದ್ದರು. ಶುಕ್ರವಾರ ಸಂಜೆ ಜ್ವರ ಹೆಚ್ಚಾದ ಕಾರಣ ಗ್ರಾಮದಲ್ಲೇ ಇದ್ದ ‘ಸನ್‌ರೈಸ್’ ಕ್ಲಿನಿಕ್‌ಗೆ ತೆರಳಿ ಇಂಜೆಕ್ಷನ್ ಪಡೆದಿದ್ದಾರೆ. ಆದರೆ, ಇಂಜೆಕ್ಷನ್ ಪಡೆದ ಕೆಲವೇ ಗಂಟೆಗಳಲ್ಲಿ ಅವರು ಸಾವನ್ನಪ್ಪಿದ್ದಾರೆ.
ನಾಗೇಂದ್ರಬಾಬುಗೆ ಇಂಜೆಕ್ಷನ್ ನೀಡಿದ ವೈದ್ಯ ಆಯುರ್ವೇದದಲ್ಲಿ ವೈದ್ಯಕೀಯ ಪಡೆದಿದ್ದಾರೆ. ಅವರು ಆಯುರ್ವೇದ ಚಿಕಿತ್ಸೆಯನ್ನು ಮಾತ್ರವೇ ನೀಡಬೇಕು. ಆದರೆ, ಆ ವೈದ್ಯ ಆಲೋಪತಿ ಚಿಕಿತ್ಸೆಯನ್ನೂ ನೀಡುತ್ತಿದ್ದರು. ಅಭ್ಯಾಸ ಮಾಡಿದ್ದ ವೃತ್ತಿಯೇ ಬೇರೆ, ಚಿಕಿತ್ಸೆ ನೀಡುತ್ತಿದ್ದ ವಿಧಾನವೇ ಬೇರೆಯಾಗಿದ್ದ ಕಾರಣದಿಂದಲೇ ಈ ದುರ್ಘಟನೆ ನಡೆದಿದೆ ಎಂದು ಆರೋಪಿಸಲಾಗಿದೆ.
ಇಂಜೆಕ್ಷನ್ ಪಡೆದ ನಾಗೇಂದ್ರಬಾಬುಗೆ ಕೆಲವೇ ಸಮಯದಲ್ಲಿ ಮೂರ್ಚೆ ಬಂದಿದೆ. ಬಳಿಕ, ಹೃದಯ ಬಡಿತವು ಕಡಿಮೆಯಾಗಲಾರಂಭಿಸಿದೆ. ಕೂಡಲೇ ಅವರನ್ನು ಕೋಲಾರ ಆಸ್ಪತ್ರೆಗೆ ಕರೆದೊಯ್ಯುವಂತೆ ವೈದ್ಯ ಸೂಚಿಸಿದ್ದಾರೆ. ನಾಗೇಂದ್ರಬಾಬು ಅವರನ್ನು ಕೋಲಾರದ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತಾದರೂ, ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ.
ಆಯುರ್ವೇದದಲ್ಲಿ ಅಭ್ಯಾಸ ಮಾಡಿ, ಆಲೋಪತಿ ಚಿಕಿತ್ಸೆ ನೀಡುತ್ತಿರುವ ವೈದ್ಯ ರಫೀಕ್‌ನ ಪರವಾನಗಿಯನ್ನು ರದ್ದುಗೊಳಿಸಬೇಕು. ಆತ ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ಚಿಕಿತ್ಸೆ ನೀಡದಂತೆ ನಿರ್ಬಂಧ ವಿಧಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ವೈದ್ಯನ ವಿರುದ್ಧ ಯುವಕನ ಸಂಬಂಧಿಕರು ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇನ್ನು, ವಕ್ಕಲೇರಿಯಲ್ಲಿ ಸರ್ಕಾರಿ ಪ್ರಾಥಮಿಕ ಕೇಂದ್ರವೂ ಇದ್ದು. ಆ ಆಸ್ಪತ್ರೆಗೆ ಸರಿಯಾಗಿ ವೈದ್ಯರು ಬರುತ್ತಿಲ್ಲ. ನಿಯಮಿತವಾಗಿ ವೈದ್ಯರು ಬರುವಂತೆ ಆಯೋಗ್ಯ ಇಲಾಖೆ ಕ್ರಮ ಕೈಗೊಳ್ಳಬೇಕು. ಆಸ್ಪತ್ರೆಯಲ್ಲಿರುವ ಆ್ಯಂಬುಲೆನ್ಸ್ ಕೆಟ್ಟಿದ್ದು, ಅದನ್ನು ರಿಪೇರಿ ಮಾಡಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.