ಪ್ರೀತಿಸುತ್ತಿದ್ದ ಸಹೋದ್ಯೋಗಿ ಯುವತಿ ಜೊತೆ ರಿಜಿಸ್ಟರ್ ಮದುವೆ ಆದ ದಿನವೇ ನೌಕರನೊಬ್ಬ ತಾನು ಕೆಲಸ ಮಾಡುತ್ತಿದ್ದ ನಗರದ ಎಸ್‌ಎನ್‌ಆರ್ ಜಿಲ್ಲಾಸ್ಪತ್ರೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕೋಲಾರದ ಬಂಗಾರಪೇಟೆ ತಾಲೂಕಿನ ನಾಯಕರಹಳ್ಳಿಯ ಹರೀಶ್ ಬಾಬು ಎನ್.ಎಂ (33) ಆತ್ಮಹತ್ಯೆ ಮಾಡಿಕೊಂಡಿರುವ ಯುವಕ. ‘ಆಷಾಢ ಮಾಸ ಮುಗಿಯಲಿ ಈಗ ಬೇಡವೆಂದರೂ ಕೇಳದೆ ಬಲವಂತವಾಗಿ ರಿಜಿಸ್ಟ್ರರ್ ಮದುವೆ ಮಾಡಿಸಿದರು. ಈ ಸಾವಿಗೆ ಯುವತಿ ಮನೆಯವರು ಕಾರಣ’ ಎಂದು ಯುವಕನ ಪೋಷಕರು ಆರೋಪಿಸಿದ್ದಾರೆ.
ಜಿಲ್ಲಾಸ್ಪತ್ರೆಯಲ್ಲಿ ಏಳೆಂಟು ವರ್ಷಗಳಿಂದ ನ್ಯಾಷನಲ್ ಆರೋಗ್ಯ ಮಿಷನ್ (ಎನ್‌ಎಚ್‌ಎಂ) ಗುತ್ತಿಗೆ ನೌಕರನಾಗಿ ಡೇಟಾ ಎಂಟ್ರಿ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ ಹರೀಶ್, ಅದೇ ಆಸ್ಪತ್ರೆಯ ಇಎನ್‌ಟಿ ವಿಭಾಗದ ಕೊಠಡಿಯಲ್ಲಿ ಬುಧವಾರ ರಾತ್ರಿ ನೇಣಿಗೆ ಶರಣಾಗಿದ್ದಾರೆ. ರಾತ್ರಿ ಆಸ್ಪತ್ರೆ ಒಳಗೆ ಹೋಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಕಿಟಕಿಗೆ ಬ್ಯಾಂಡೇಜ್ ಬಟ್ಟೆ ಕಟ್ಟಿ ನೇಣು ಹಾಕಿಕೊಳ್ಳುವ ಮೊದಲು ಮದ್ಯಪಾನ ಮಾಡಿರುವುದು ಗೊತ್ತಾಗಿದೆ. ಪಕ್ಕದಲ್ಲಿ ಮದ್ಯದ ಬಾಟಲಿಗಳು, ಕಬಾಬ್, ಮಿಕ್ಸ್ಚರ್ ಪತ್ತೆಯಾಗಿವೆ. ಮೊಬೈಲ್ ಫೋನ್‌ನ ಮುರಿದ ಸಿಮ್ ಬಿದ್ದುಕೊಂಡಿತ್ತು. ಆತ್ಮಹತ್ಯೆಗೆ ಮುನ್ನ ಅವರೇ ಸಿಮ್ ಮುರಿದು ಹಾಕಿದ್ದಾರೆ ಎನ್ನಲಾಗಿದೆ.

ಸದ್ಯಕ್ಕೆ ಮದುವೆ ಬೇಡ ಎನ್ನುತ್ತಿದ್ದ ಆ ಯುವಕನಿಗೆ ಪ್ರೀತಿಸಿದ ಯುವತಿ ಜೊತೆ ಎರಡೂ ಕುಟುಂಬಗಳ ಕೆಲವೇ ಮಂದಿಯ ಸಮ್ಮುಖದಲ್ಲಿ ಕೋಲಾರ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಬುಧವಾರ ಮದುವೆ ಮಾಡಲಾಗಿತ್ತು. ಮನೆ ಕಟ್ಟಿದ ಬಳಿಕ ಮದುವೆಯಾಗುವುದಾಗಿ ಹೇಳುತ್ತಿದ್ದ ಆತನಿಗೆ ಯುವತಿ ಮನೆ ಕಡೆಯಿಂದ ಒತ್ತಡ ಇತ್ತು ಎನ್ನಲಾಗಿದೆ. ಅಲ್ಲದೇ, ಇಬ್ಬರೂ ಬೇರೆ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಹರೀಶ್ ಬಾಬು ಮಡಿವಾಳ ಸಮುದಾಯ, ಯುವತಿ ಪರಿಶಿಷ್ಟ ಜಾತಿಗೆ ಸೇರಿದವರು.
ಈ ಕಾರಣದಿಂದಲೇ ಆ ಯುವತಿ, ಬೇಗನೇ ಮದುವೆಯಾಗುವಂತೆ ಕೋರಿದ್ದಾರೆ. ಇದಕ್ಕೆ ಹರೀಶ್ ಬಾಬು, ‘ಸದ್ಯಕ್ಕೆ ಮದುವೆ ಬೇಡ, ಆಷಾಢ ಮಾಸ ಮುಗಿಯಲಿ. ಊರಿನಲ್ಲಿ ಮನೆ ಕಟ್ಟಿಸುತ್ತಿದ್ದು, ಪೂರ್ಣವಾದ ಬಳಿಕ ಮದುವೆ ಆಗೋಣ’ ಎಂಬುದಾಗಿ ಹೇಳಿದ್ದರಂತೆ. ಇದಕ್ಕೆ ಒಪ್ಪದ ಪ್ರೇಯಸಿ, ಹರೀಶ್ ಬಾಬು ಮನೆಗೆ ಹೋಗಿ ಆತನ ತಾಯಿಯನ್ನು ಮನವೊಲಿಸುವ ಕೆಲಸ ಮಾಡಿದ್ದರು. ಕೊನೆಗೆ ಪೋಷಕರು ಬಲವಂತವಾಗಿಯೇ ಮದುವೆಗೆ ಒಪ್ಪಿಗೆ ನೀಡಿದ್ದರೂ ಕೊನೆಗೆ ಮದುವೆ ನಡೆದು ಹೋಗಿದೆ. ನಂತರ ಎಲ್ಲರೂ ಮನೆಗೆ ವಾಪಸ್ ಹೋಗಿದ್ದಾರೆ. ಅತ್ತ ಹರೀಶ್ ಬಾಬು ತಮ್ಮ ತಾಯಿಯನ್ನು ಊರಿಗೆ ಬಿಟ್ಟು ಮತ್ತೆ ಕೋಲಾರಕ್ಕೆ ಬಂದಿದ್ದಾರೆ. ರಾತ್ರಿ 11 ಗಂಟೆ ಸುಮಾರಿಗೆ ಮದ್ಯದ ಬಾಟಲಿಯೊಂದಿಗೆ ಜಿಲ್ಲಾಸ್ಪತ್ರೆಯ ಕೊಠಡಿಗೆ ಬಂದಿದ್ದಾರೆ. ಮದ್ಯ ಸೇವಿಸಿ ನಂತರ ಅಲ್ಲೇ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಬೆಳಿಗ್ಗೆ ಎಂದಿನಂತೆ ಆಸ್ಪತ್ರೆ ಸಿಬ್ಬಂದಿ ಕೆಲಸಕ್ಕೆ ಬಂದಾಗ ವಿಚಾರ ಗೊತ್ತಾಗಿದೆ. ‘ಹರೀಶ್ ಒಳ್ಳೆಯ ಕೆಲಸಗಾರ. ಜೊತೆಗೆ ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ಸಹೋದ್ಯೋಗಿ ಯುವತಿಯನ್ನು ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು’ ಎಂದು ಸ್ನೇಹಿತರು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಡಿವೈಎಸ್ಪಿ ಎಂ.ಎಚ್.ನಾಗ್ತೆ, ಕೋಲಾರ ನಗರ ಠಾಣೆ ಇನ್‌ಸ್ಪೆಕ್ಟರ್ ಸದಾನಂದ, ಫಾರೆನ್ಸಿಕ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಸುತ್ತಿದ್ದಾರೆ.
“ತಿಂಗಳ ಹಿಂದೆ ಯುವತಿ ನನ್ನ ಮನೆಗೆ ಬಂದು ಹರೀಶ್ ಬಾಬುನನ್ನು ಇಷ್ಟಪಟ್ಟಿದ್ದು, ಮದುವೆ ಆಗುವುದಾಗಿಯೂ, ಆತ ಒಪ್ಪದಿದ್ದರೆ ಸಾಯುವುದಾಗಿಯೂ ಹೇಳಿದ್ದಳು. ಆ ರೀತಿ ನಿರ್ಧಾರ ಮಾಡಬೇಡ, ಎಲ್ಲಾ ಕುಳಿತು ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳೋಣ ಎಂದಿದ್ದೆ. ಮನೆ ನಿರ್ಮಿಸುತ್ತಿದ್ದು, ಇರಲು ಜಾಗವಿಲ್ಲ, ಪೂರ್ಣಗೊಂಡ ಮೇಲೆ ಯೋಚಿಸೋಣವೆಂದು ಬುದ್ಧಿ ಹೇಳಿ ಕಳಿಸಿದ್ದೆ. ಪುತ್ರ ಕೂಡ ಈಗ ಮದುವೆ ಬೇಡ ಎಂದಿದ್ದ. ಆದರೆ, ಆಕೆ ಬುಧವಾರ ಮದುವೆಯಾಗುವುದಾಗಿ ಹಟ ಹಿಡಿದು ಒತ್ತಡ ಹಾಕಿದ್ದಳು. ಆಷಾಢ ಕಾರಣ ಮದುವೆ ಬೇಡವೆಂದರೂ ಕೇಳಲಿಲ್ಲ. ನಾನು ತಾಲ್ಲೂಕು ಕಚೇರಿಗೆ ಹೋಗಿ ರಿಜಿಸ್ಟ್ರರ್ ಮದುವೆ ಮಾಡಿದೆವು. ಚೆನ್ನಾಗಿ ಬದುಕಿಕೊಳ್ಳಲಿ ಎಂದು ಜಾತಿಯನ್ನೂ ನೋಡಲಿಲ್ಲ. ಆಕೆ ಪರಿಶಿಷ್ಟ ಜಾತಿ, ನಾವು ಧೋಬಿ. ಪುತ್ರನ ಸಾವಿನ ಸಂಬಂಧ ಯುವತಿ ಕಡೆಯವರ ಮೇಲೆ ಅನುಮಾನ ಇದೆ. ಈ ಸಂಬಂಧ ಪೊಲೀಸ್ ಠಾಣೆಗೆ ದೂರು ನೀಡಿದ್ದೇವೆ” ಎಂದು ಮೃತ ಹರೀಶ್ ಬಾಬು ತಾಯಿ ಸುಶೀಲಮ್ಮ ತಿಳಿಸಿದರು.
ಇದನ್ನೂ ಓದಿ: ಕೋಲಾರ | ಕೋಮುಲ್ ಸರ್ಕಾರಿ ನಾಮ ನಿರ್ದೇಶಕರಾಗಿ ಯೂನುಸ್ ಶರೀಫ್ ನೇಮಕ
ಆಷಾಢದಲ್ಲಿ ಯಾರಾದರೂ ಮದುವೆ ಆಗುತ್ತಾರಾ? ಒಂದು ತಿಂಗಳು ಸಮಯ ಕೊಡಿ, ನಂತರ ಮದುವೆ ಮಾಡೋಣವೆಂದು ಕೇಳಿದರೂ ಬಲವಂತದಿಂದ ರಿಜಿಸ್ಟ್ರರ್ ಮದುವೆ ಮಾಡಿಸಿದರು. ಇದೇ ಹರೀಶ್ ಬಾಬು ಸಾವಿಗೆ ಕಾರಣ. ಅದು ಆತನಿಗೆ ಇಷ್ಟವಿತ್ತೋ ಇಲ್ಲವೋ? ಆಸ್ಪತ್ರೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬುದು ನಾಯಕನಹಳ್ಳಿ ಗ್ರಾಮಸ್ಥರ ಅಭಿಪ್ರಾಯ.
ಹರೀಶ್ ಬಾಬು ಇ–ಆಸ್ಪತ್ರೆಯಲ್ಲಿ ಡೇಟಾ ಎಂಟ್ರಿ ಆಪರೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ರಾತ್ರಿ ಆಸ್ಪತ್ರೆಯ ಕೊಠಡಿಯಲ್ಲಿ ಬೀಗ ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದು ಕಾರಣ ಗೊತ್ತಾಗಲಿದೆ. ಹರೀಶ್ ಬಾಬು ಉತ್ತಮ ಕೆಲಸಗಾರ. ಕಳೆದ ತಿಂಗಳು ಪಾಳಿಯಂತೆ ರಾತ್ರಿ ಅವಧಿಯಲ್ಲಿ ಕೆಲಸ ಮಾಡುತ್ತಿದ್ದರು. ಜುಲೈ 1ರಿಂದ ಹಗಲು ಕೆಲಸ ನಿಗದಿ ಮಾಡಲಾಗಿತ್ತು. ಆದರೆ, ಕಳೆದ ಮೂರು ದಿನಗಳಿಂದ ಕೆಲಸಕ್ಕೆ ಬಂದಿರಲಿಲ್ಲ. ರಜೆ ಏನೂ ಪಡೆದಿರಲಿಲ್ಲ ಎಂದು ಕೋಲಾರ ಜಿಲ್ಲಾ ಆಸ್ಪತ್ರೆ ಶಸ್ತ್ರ ಚಿಕಿತ್ಸಕ ಡಾ ಜಗದೀಶ್ ಹೇಳಿದರು.
