ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನಲ್ಲಿ ಗಣಿ ಇಲಾಖೆ ಅಧಿಕಾರಿಗಳ ಬೆಂಬಲದಿಂದಲೇ ಅಕ್ರಮವಾಗಿ ಗಣಿಗಾರಿಕೆ ನಡೆಸಿ, ಕೋಟ್ಯಂತರ ರೂಪಾಯಿ ಹಣ ಲೂಟಿ ಮಾಡುತ್ತಿದ್ದು, ಪರಿಸರ ಹಾಳಾಗಿತ್ತಿರುವುದಲ್ಲದೆ ಸರ್ಕಾರಕ್ಕೆ ಬರಬೇಕಾಗಿದ್ದ ಕೋಟ್ಯಂತರ ಹಣ ಕಳ್ಳರ ಪಾಲಾಗುತ್ತಿದೆ. ಹಾಗಾಗಿ ಜಿಲ್ಲಾಧಿಕಾರಿಗಳು ರಾಜಕೀಯ ಒತ್ತಡಗಳಿಗೆ ಮಣಿಯದೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಹೋರಾಟಗಾರರಾದ ಡಿ ಮುನೇಶ್ ಹಾಗೂ ನವೀನ್ ಕುಮಾರ್ ಅವರು ಒತ್ತಾಯಿಸಿದರು.
ಮಾಲೂರು ನಗರದ ಪತ್ರಕರ್ತರ ಭವನದಲ್ಲಿ ಮಾಧ್ಯಮದವರೊಂದಿಗೆ ಅವರುಗಳು ಮಾತನಾಡಿ, “ಗಣಿಮಾಲೀಕರ ಸಂಘದ ಅಧ್ಯಕ್ಷ ಕ್ಷೇತ್ರನಹಳ್ಳಿ ಕೆ ಎಸ್ ವೆಂಕಟೇಶಪ್ಪ ಅವರು ಮಾಲೂರು ಶಾಸಕ ಕೆ ವೈ ನಂಜೇಗೌಡರ ಬೆಂಬಲ ಹಾಗೂ ಭ್ರಷ್ಟ ಗಣಿ ಅಧಿಕಾರಿ ರಾಜೇಶ್ ಸಹಕಾರದಿಂದ ಕಾನೂನು ಬಾಹಿರವಾಗಿ, ನಿಯಮಗಳನ್ನು ಗಾಳಿಗೆ ತೂರಿ ಐಶ್ವರ್ಯ ಕ್ರಷರ್ ಘಟಕದ ಮೂಲಕ ಮಾಲೂರು ತಾಲೂಕಿನ ಟೇಕಲ್ ಹೋಬಳಿಯ ತಿಮ್ಮನಾಯಕನ ಹಳ್ಳಿ ಅಗ್ರಹಾರದ ಸರ್ವೆ ನಂ. 35ರಲ್ಲಿ ಭೂಮಿ ಮೇಲಿರುವ ಬಂಡೆಯನ್ನು ಕಬಳಿಸಿ, ಅಕ್ರಮವಾಗಿ ತೆಗೆದು ಕೇವಲ 23 ಸಾವಿರ ಟನ್‌ಗೆ ಮಾತ್ರ ರಾಯಲ್ಟಿ ಪಾವತಿಸಿದ್ದು, ಇದರಲ್ಲಿ ಸುಮಾರು ₹50 ಕೋಟಿಗೂ ಹೆಚ್ಚು ಹಗರಣ ನಡೆದಿದೆ” ಎಂದು ಆರೋಪಿಸಿದರು.
“ಇದೇ ರೀತಿ ಮಾಲೂರು ತಾಲೂಕು ವ್ಯಾಪ್ತಿಯಲ್ಲಿ 100 ಎಕರೆಗೂ ಹೆಚ್ಚು ಬಫರ್ ಜೋನ್‌ನಲ್ಲಿ ಅಕ್ರಮವಾಗಿ ಗಣಿಗಾರಿಕೆ ನಡೆಯುತ್ತಿದ್ದು, ಸುಮಾರು ₹3,000 ಕೋಟಿ ಮೌಲ್ಯದ ಹಗರಣ ನಡೆದಿದೆ. ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಉಪಲೋಕಾಯುಕ್ತರು ಸ್ಥಳ ಪರಿಶೀಲನೆ ನಡೆಸಿ ಪರಿಸರ ಉಲ್ಲಂಘನೆ ವಿರುದ್ಧ ಕ್ರಮ ಕೈಗೊಳ್ಳಲು
ಸೂಚಿಸಿದ್ದು, ಕ್ರಷರ್ ಘಟಕಗಳಿಗೆ ಎನ್‌ಪಿಡಿ ಜಾರಿ ಮಾಡಿ ಗಣಿ ಮಾಲೀಕರು ಉತ್ತರ ನೀಡದೇ ಇದ್ದಾಗ ಕ್ರಷರ್ ಘಟಕ ಬಂದ್ ಮಾಡಲು ನೋಟಿಸ್ ಜಾರಿ ಮಾಡಿದ್ದಾರೆ. ಕ್ರಷರ್ ಸ್ಥಗಿತಗೊಳಿಸಿ ಏರ್ ಚೆಕಿಂಗ್ ಮಾಡುತ್ತಿದ್ದು, ಸುಳ್ಳು ವರದಿ ಸಿದ್ದಪಡಿಸಲು ಯತ್ನ ನಡೆಯುತ್ತಿದೆ” ಎಂದು ದೂರಿದರು.
ಈ ಸುದ್ದಿ ಓದಿದ್ದೀರಾ? ಆದಿಮ ರಂಗಶಾಲೆಯ ಗಾಯಕರೇ ನಾಯಕರಾಗಿರುವ ನೆಲ ಕೋಲಾರ: ರಾಜಪ್ಪ ದಳವಾಯಿ
ಗಣಿಗಾರಿಕೆ ವೇಳೆ ಕಾರ್ಮಿಕರು ಮೃತಪಟ್ಟರೂ ಪೊಲೀಸ್ ಇಲಾಖೆ ಸೂಕ್ತ ತನಿಖೆ ನಡೆಸದೆ ಕಾರ್ಮಿಕರ ಮೇಲೆಯೇ ಕೇಸು ದಾಖಲಿಸುತ್ತಿದ್ದು, ಇದರ ಬಗ್ಗೆ ಜಿಲ್ಲಾ ರಕ್ಷಣಾಧಿಕಾರಿಗಳು ಸೂಕ್ತ ಕ್ರಮ ಜರುಗಿಸುವಂತೆ ಮನವಿ
ಮಾಡಿದರಲ್ಲದೆ, ಎಲ್ಲ ಹಗರಣಗಳ ಬಗ್ಗೆ ತನಿಖೆ ಮಾಡುವಂತೆ ಇ.ಡಿಗೆ ದೂರು ಸಲ್ಲಿಸುವುದಾಗಿ ತಿಳಿಸಿದರು.