ಕೋಲಾರ ತಾಲೂಕಿನ ತುರಾಂಡಹಳ್ಳಿ ಗ್ರಾಮದ ಪ್ರಗತಿಪರ ರೈತ ಟಿ.ಎನ್ ರವಿ ಅವರ ತೋಟಕ್ಕೆ ಕೃಷಿ ಇಲಾಖೆಯ ಅಧಿಕಾರಿಗಳೊಂದಿಗೆ ಅಮೆರಿಕ ದೇಶದ ಕೃಷಿ ಅಧಿಕಾರಿಗಳು, ವಿಶ್ವ ಹಣಕಾಸು ಸಂಸ್ಥೆ, ಮತ್ತು ಎನ್.ಜಿ.ಒ ಸಂಸ್ಥೆಯ ಅಧಿಕಾರಿಗಳು ಭೇಟಿ ನೀಡಿ ಬೆಳೆಗಳು ಬೆಳೆಯುವಿಕೆ ಬಗ್ಗೆ ಮಾಹಿತಿ ಪಡೆದುಕೊಂಡರು.
ಕೃಷಿ ಇಲಾಖೆಯ ಉಪ ನಿರ್ದೇಶಕಿ ಸುಮಾ ನೇತೃತ್ವದಲ್ಲಿ ತೋಟಕ್ಕೆ ಭೇಟಿ ನೀಡಿ ಸಾವಯವ ಗೊಬ್ಬರ, ರಾಸಾಯನಿಕ ಮುಕ್ತ ಕೃಷಿ, ಟಮೋಟ, ಕ್ಯಾಪ್ಸಿಕಂ ಸೇರಿದಂತೆ ಇತರೆ ತೋಟಗಾರಿಕಾ ಬೆಳೆಗಳು, ವಿವಿಧ ತಳಿಯ ಹೂ ಗಿಡಗಳು ಬೆಳೆಯುವಿಕೆ ವಿಧಾನದ ಬಗ್ಗೆ ಮಾಹಿತಿ ಪಡೆದುಕೊಂಡರು.
ಭೂಮಿಯಲ್ಲಿ ನೈಸರ್ಗಿಕ ಸಂಪನ್ಮೂಲಗಳ ಬಳಕೆ, ಸಾವಯುವ ಗೊಬ್ಬರದಿಂದ ಉತ್ತಮ ಗುಣಮಟ್ಟದ ಬೆಳೆಯನ್ನು ಬೆಳೆಯಲು ಅನುಸರಿಸಬಹುದಾದ ಔಷಧೀಯ ಸಿಂಪಡಣೆ, ಕೃಷಿ ವಿಷಯಗಳ ಬಗ್ಗೆ ಟಿ.ಎನ್ ರವಿ ಅವರು ಮಾಹಿತಿ ನೀಡಿದರು. ಕೃಷಿ ಅಧಿಕಾರಿಗಳು ಮತ್ತು ವಿದೇಶಿ ಅಧಿಕಾರಿಗಳು ತೋಟಕ್ಕೆ ಭೇಟಿ ನೀಡಿ ಪ್ರಾಯೋಗಿಕ ಅನುಭವವನ್ನು ಪಡೆದುಕೊಂಡರು.
ಇದನ್ನೂ ಓದಿ: ಕೋಲಾರ | ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ರಾಜೀವ್ ಗಾಂಧಿ, ದೇವರಾಜ ಅರಸು ಜನ್ಮ ದಿನಾಚರಣೆ
ಈ ಸಂದರ್ಭದಲ್ಲಿ ಕೃಷಿ ಇಲಾಖೆಯ ಉಪ ನಿರ್ದೇಶಕಿ ಮಂಜುಳ, ಕೆವಿಕೆ ಮತ್ತು ಕೃಷಿ ಇಲಾಖೆಯ ಅಧಿಕಾರಿಗಳಾದ ನಾಗರಾಜ್, ಮಂಜುನಾಥ್, ಲಕ್ಷ್ಮೀದೇವಿ, ಸುಗಟೂರು ಶ್ರೀಧರ್, ರೈತ ಸಂಘದ ಬಯಲುಸೀಮೆ ಪ್ರದೇಶದ ಕಾರ್ಯದರ್ಶಿ ಪ್ರಭಾಕರ್ ಗೌಡ, ಉಪಾಧ್ಯಕ್ಷ ಬಿಸಲಹಳ್ಳಿ ಬೈಚೇಗೌಡ, ಸುಗಟೂರು ಗ್ರಾಪಂ ಅಧ್ಯಕ್ಷ ಭೂಪತಿಗೌಡ ಇದ್ದರು.