ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘ ಅರ್ಜಿ ಸಲ್ಲಿಸಿದ 72 ಗಂಟೆಗಳಲ್ಲಿ ಸಾಲ ಸೌಲಭ್ಯ ಒದಗಿಸುವ ಶಕ್ತಿ ಹೊಂದಿರುವುದು ಸಂತಸದ ವಿಷಯವಾಗಿದ್ದು, 17 ವರ್ಷಗಳ ಸುದೀರ್ಘ ಅವಧಿಯಲ್ಲಿ ಯಶಸ್ವಿ ಕಾರ್ಯ ನಿರ್ವಹಣೆ ಶ್ಲಾಘನೀಯವಾಗಿದೆ ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಸಂಘದ 2024-25ನೇ ಸಾಲಿನ ಸರ್ವಸದಸ್ಯರ ಸಭೆಗೆ ಚಾಲನೆ ನೀಡಿ, ಯಶಸ್ವಿನಿ ಆರೋಗ್ಯ ವಿಮಾ ಕಾರ್ಡ್ ವಿತರಿಸಿ ಅವರು ಮಾತನಾಡುತ್ತಿದ್ದರು.
ಸಹಕಾರ ಸಂಘ ಕಳೆದ ಐದು ವರ್ಷದಲ್ಲಿ ಸರಾಸರಿ ವರ್ಷಕ್ಕೆ 2 ಲಕ್ಷ ರೂ ಲಾಭ ಗಳಿಸುತ್ತಾ ಬಂದಿದೆ ಎಂದ ಅವರು, ಸಂಘದ ಆರ್ಥಿಕ ಚಟುವಟಿಕೆಗಳು ಮತ್ತಷ್ಟು ಹೆಚ್ಚಬೇಕು. ಸಾಲ ನೀಡುವುದರ ಜತೆಗೆ ಇತರೆ ಲಾಭದಾಯಕ ಚಟುವಟಿಕೆಗಳನ್ನು ಆರಂಭಿಸುವ ಚಿಂತನೆ ನಡೆಯಲಿ ಎಂದು ಆಶಿಸಿದರು.
ಸಹಕಾರ ಸಂಘದ ಪದಾಧಿಕಾರಿಗಳು ಹಾಗೂ ನಿರ್ದೇಶಕರು ತಮಗೆ ಸಿಕ್ಕಿರುವುದು ಅಧಿಕಾರ ಎಂದು ಭಾವಿಸಬಾರದು. ಅದು ಕೇವಲ ಜವಾಬ್ದಾರಿ ಎಂಬುದನ್ನು ಅರಿತು ಸಂಘವನ್ನು ಮುನ್ನಡೆಸಬೇಕು ಎಂದು ಸಲಹೆ ನೀಡಿದ ಅವರು, ಸಹಕಾರ ಎಂಬ ಪದದಲ್ಲೇ ಹೊಂದಾಣಿಕೆ, ಸೇವೆಯ ಸ್ಮರಣೆ ಇದೆ. ಪರಸ್ಪರ ಸಹಕಾರದಿಂದ ಎಂತಹ ಸಾಧನೆಯನ್ನು ಮಾಡಬಹುದು. ಈ ನಿಟ್ಟಿನಲ್ಲಿ ಸೇವಾ ಮನೋಭಾವದಿಂದ ಸಂಘವನ್ನು ಮುನ್ನಡೆಸಿಕೊಂಡು ಹೋಗಿ ಎಂದು ಹಾರೈಸಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್, ಸಾಲ ವಸೂಲಾತಿಯಲ್ಲೂ ದಾಖಲೆ ನಿರ್ಮಿಸಲಾಗಿದೆ. ಶೇ.99 ಸಾಲ ವಸೂಲಾತಿಯಾಗಿದ್ದು, ಯಾವುದೇ ಸುಸ್ತಿ ಬಾಕಿ ಇಲ್ಲ ಎಂದು ತಿಳಿಸಿದರು.
ಸಾಲ ವಸೂಲಿಯಲ್ಲಿ ಸಾಧನೆ ಮಾಡುವ ಉದ್ದೇಶದಿಂದ ಸಂಘದ ನಿರ್ದೇಶಕರಾದ ಸೋಮಶೇಖರ್ ಹಾಗೂ ನಾಗರಾಜಯ್ಯ ಅವರ ನೇತೃತ್ವದಲ್ಲಿ ನೇಮಿಸಿದ್ದ ಉಪಸಮಿತಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದ್ದು, ಸಾಲ ವಸೂಲಿಯಲ್ಲಿ ಗಣನೀಯ ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ಅಭಿನಂದಿಸಿದರು.
ಛಾಪಾ ಕಾಗದ ಮಾರಾಟಕ್ಕೆ ಅನುಮತಿ
ಸಂಘ ಸದ್ಯ ತನ್ನ ಅಧೀನದಲ್ಲೇ ಛಾಪಾ ಕಾಗದ ಮಾರಾಟ ನಿರ್ವಹಣೆಗೆ ತೊಂದರೆಯಿದ್ದು, ಸದಸ್ಯರು ಯಾರಾದರೂ ಮುಂದೆ ಬಂದಲ್ಲಿ ಸಂಘದ ಅಡಿಯಲ್ಲೇ ಈ ಕಾರ್ಯ ನಡೆಸಲು ಅನುಮತಿ ನೀಡಲಾಗುವುದು ಎಂದ ಅವರು, ಸದಸ್ಯರು ಮುಂದೆ ಬಂದಲ್ಲಿ ನ್ಯಾಯಬೆಲೆ ಅಂಗಡಿ ನಡೆಸಲು ಸಂಘ ಸಿದ್ದವಿದೆ ಎಂದು ತಿಳಿಸಿದರು.
ಹಿರಿಯ ಸದಸ್ಯರಾದ ಅನಂತರಾಮು, ಡಿವಿಡೆಂಟ್‍ಅನ್ನು ಸದಸ್ಯರಿಗೆ ಹಂಚಲು ಸಲಹೆ ನೀಡಿದರೆ, ಸದಸ್ಯ ಸಿ.ಜಿ.ಮುರಳಿ, ಸತತ 3 ಸಭೆಗಳಿಗೆ ಗೈರಾಗುವ ನಿರ್ದೇಶಕರು,ಸದಸ್ಯರಿಗೆ ಮತದಾನದ ಹಕ್ಕು ನೀಡದಂತೆ ಕೋರಿದರು.

ಸಂಘದ ಉಪಾಧ್ಯಕ್ಷ ಅಬ್ಬಣಿ ಶಂಕರ್ ಆಯವ್ಯಯ ಮಂಡಿಸಿ, ಸಂಘ 11,15,859 ರೂ ನಿವ್ವಳ ಲಾಭ ಗಳಿಸಿದೆ ಎಂದು ಹರ್ಷ ವ್ಯಕ್ತಪಡಿಸಿ, ಇದೇ ಸಂದರ್ಭದಲ್ಲಿ ಮುಂದಿನ 2024-25ನೇ ಸಾಲಿನ ಅಂದಾಜು ಆಯವ್ಯಯ ಮಂಡಿಸಿದರು. ಅದಕ್ಕೆ ಸಭೆಯಲ್ಲಿ ಅನುಮೋದನೆ ನೀಡಲಾಯಿತು.
ಇದೇ ಸಂದರ್ಭದಲ್ಲಿ ಸಕಾಲದಲ್ಲಿ ಸಾಲ ಮರುಪಾವತಿಸುವಲ್ಲಿ ಮುಂಚೂಣಿಯಲ್ಲಿರುವ ಹಿರಿಯ ಸದಸ್ಯ ಎನ್.ಆರ್.ಪುರುಷೋತ್ತಮ್ ಅವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಸಭೆಗೆ ಸ್ವಾಗತ ಕೋರಿದ ಸಂಘದ ಸಿಇಒ ಗಂಗಾಧರ್ ಅವರಿಗೆ ಗೌರವಧನದ ಚೆಕ್ ವಿತರಿಸಲಾಯಿತು.
ಸಭೆಯಲ್ಲಿ ಸಂಘದ ನಿರ್ದೇಶಕರು ಹಾಗೂ ರಾಜ್ಯ ಪತ್ರಕರ್ತರ ಸಂಘದ ಕಾರ್ಯಕಾರಿ ಸದಸ್ಯ ವಿ.ಮುನಿರಾಜು, ಹೆಚ್.ಎನ್.ಮುರಳೀಧರ್, ದಾಸ್, ಸೋಮಶೇಖರ್, ಈಶ್ವರ್, ಶಬ್ಬೀರ್ ಅಹ್ಮದ್, ಹೆಚ್.ಎಲ್. ಸುರೇಶ್, ನಾಗರಾಜಯ್ಯ, ಸಿ.ವಿ.ನಾಗರಾಜ್, ಪತ್ರಕರ್ತರ ಖಜಾಂಚಿ ಎ.ಜಿ.ಸುರೇಶ್ ಕುಮಾರ್ ಮತ್ತು ಇತರರು ಇದ್ದರು.
