ಕರ್ನಾಟಕ ರಾಜ್ಯದಲ್ಲಿ ಒಳಮೀಸಲಾತಿ ಜಾರಿ ಮಾಡುವಂತೆ ಒತ್ತಾಯಿಸಿ ಜಿಲ್ಲಾ ಮಾದಿಗ ಸಮುದಾಯದವರು ಅರೆಬೆತ್ತಲೆ ಹಾಗೂ ಕೇಶ ಮುಂಡನೆ ಮಾಡಿಸಿಕೊಳ್ಳವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದು, ವಿನೂತನವಾಗಿ ಪ್ರತಿಭಟನೆ ನಡೆಸಿದರು. ಅಲ್ಲದೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಕೋಲಾರ ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆಗಳನ್ನು ನಡೆಸಿದ ನಂತರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಮಾದಿಗ ಸಮುದಾಯದ ಮುಖಂಡರು ಮಾತನಾಡಿದ್ದು, “ಅವಕಾಶ ವಂಚಿತ ಸಮುದಾಯಗಳಿಗೆ ಸಾಮಾಜಿಕ ನ್ಯಾಯವನ್ನು ಒದಗಿಸುವ ಸಲುವಾಗಿ ಜಾರಿಗೆ ಆಗಬೇಕಾಗಿದ್ದ ಒಳಮೀಸಲಾತಿಯ ಬೇಡಿಕೆಗಾಗಿ ಕಳೆದ 35 ವರ್ಷಗಳಿಂದ ಹೋರಾಟ ನಡೆಸುತ್ತಿದ್ದರೂ ನೆನೆಗುದಿಗೆ ಬಿದ್ದಿದೆ. ಸರ್ವೋಚ್ಚ ನ್ಯಾಯಾಲಯ ಪರಿಶಿಷ್ಟ ಜಾತಿಯಲ್ಲಿರುವ 101 ಸಮುದಾಯಗಳಿಗೆ ಒಳಮೀಸಲಾತಿ ನೀಡುವಂತೆ ತೀರ್ಪು ನೀಡಿದ್ದರೂ ಕೂಡ ನ್ಯಾಯಾಲಯದ ತೀರ್ಪನ್ನು ಜಾರಿಗೊಳಿಸಲು ಅನಗತ್ಯ ವಿಳಂಬ ಮಾಡುತ್ತಿದೆ” ಎಂದು ಆರೋಪಿಸಿದರು.

“ಇದೇ ತಿಂಗಳು ನಡೆಯಲಿರುವ ಅಧಿವೇಶನದಲ್ಲಿ ಒಳಮೀಸಲಾತಿ ಪ್ರಕಟಣೆ ಮಾಡದಿದ್ದರೆ 18ನೇ ತಾರೀಖು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದೆಂದು” ಎಚ್ಚರಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಕೋಲಾರ | ವ್ಯಸನಮುಕ್ತ ಸಮಾಜಕ್ಕೆ ಎಲ್ಲರೂ ಕೈ ಜೋಡಿಸಿ: ಜಿಲ್ಲಾಧಿಕಾರಿ ಎಂ ಆರ್ ರವಿ
ಪ್ರತಿಭಟನೆಯಲ್ಲಿ ಮಾದಿಗ ದಂಡೋರದ ರಾಜ್ಯ ಉಪಾಧ್ಯಕ್ಷ ಸಾಹುಕಾರ್ ಶಂಕರಪ್ಪ, ಹಾರೋಳ್ಳಿ ವೆಂಕಟೇಶ್, ಆಲೇರಿ ಮುನಿರಾಜು, ವೆಂಕಟಸ್ವಾಮಿ, ದಿನ್ನೆ ಹೊಸಹಳ್ಳಿ ಆಂಜಿ, ಹಾರೋಹಳ್ಳಿ ಸೀನ, ಜೆ ಎಂ ದೇವರಾಜ್, ವೇಣು ಸೇರಿದಂತೆ ಬಹುತೇಕರು ಇದ್ದರು.