ಪೌರ ಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಕೋಲಾರ ನಗರ ಶಾಸಕ ಕೊತ್ತೂರು ಮಂಜುನಾಥ್ ಭರವಸೆ ನೀಡಿದರು.
ಕೋಲಾರ ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಮಂಗಳವಾರ ಆಯೋಜಿಸಿದ್ದ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪೌರಕಾರ್ಮಿಕರು ಕೋಲಾರ ಜನತೆಯ ಪೌಷ್ಟಿಕಾಂಶ ಇದ್ದಂತೆ. ಅವರು ಯಾವುದೇ ಜಾತಿ, ಧರ್ಮ, ಬಡವ, ಶ್ರೀಮಂತ ಎನ್ನದೇ ಎಲ್ಲರ ಮನೆಯ ಮುಂದೆ ಸ್ವಚ್ಚತೆ ಮಾಡಿ, ನಮ್ಮ ಆರೋಗ್ಯ ಕಾಪಾಡುತ್ತಿದ್ದಾರೆ. ಅವರ ಯೋಗಕ್ಷೇಮವನ್ನು ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ ಎಂದರು.
ಪೌರಕಾರ್ಮಿಕರ ಒಳಿತಿಗಾಗಿ ಸದಾ ಶ್ರಮಿಸಲು ನಾನು ಸಿದ್ಧ. ಪೌರಕಾರ್ಮಿಕರಿಗೆ ನಿವೇಶನ ಮತ್ತು ಗೃಹ ನಿರ್ಮಾಣಕ್ಕೆ ನಾವು ಸಿದ್ದರಿದ್ದೇವೆ. ಪೌರಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ಎರಡು ತಿಂಗಳಿಗೊಮ್ಮೆ ಪೌರಕಾರ್ಮಿಕರ ಸಮಸ್ಯೆಗಳನ್ನು ಆಲಿಸಲು ಸಭೆ ಮಾಡಲಾಗುವುದು ಎಂದು ಆಶ್ವಾಸನೆ ನೀಡಿದರು.
ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು ಮಾತನಾಡಿ, ಪೌರಕಾರ್ಮಿಕರ ಬಗ್ಗೆ ಸದನದಲ್ಲಿ ಚರ್ಚೆ ಮಾಡಿದ್ದೇನೆ. ಪೌರಕಾರ್ಮಿಕರಿಗೆ ನೀಡಬೇಕಾದ ಸವಲತ್ತುಗಳನ್ನು ನೀಡಲು ಒತ್ತಾಯಿಸಿದ್ದೇನೆ. ಖಾಯಂ ನೌಕರರಿಗೆ ಸಲ್ಲಬೇಕಾದ ಸೌಲಭ್ಯಗಳು ತಲುಪದ ಕುರಿತು ಸ್ಪಷ್ಟತೆಯಿಲ್ಲ. ಇಂದಿಗೂ ಎಷ್ಟೋ ನಗರಸಭೆ, ಪುರಸಭೆ, ಹಾಗೂ ಪಟ್ಟಣ ಪಂಚಾಯತಿಯಲ್ಲಿ ಒಳಚರಂಡಿ ವ್ಯವಸ್ಥೆ ಇಲ್ಲದೇ ಮಲಹೊರುವ ಪದ್ದತಿ ಇದೆ. ಪೌರಕಾರ್ಮಿಕರೇ ಆ ಕೆಲಸ ಮಾಡುತ್ತಿರುವುದು ಅಮಾನವೀಯ ಎನಿಸುತ್ತದೆ ಎಂದು ವಿಷಾದಿಸಿದರು.

ನಗರಸಭೆ ಅಧ್ಯಕ್ಷೆ ಲಕ್ಷ್ಮೀದೇವಮ್ಮ ರಮೇಶ್ ಮಾತನಾಡಿ, ಪೌರ ಕಾರ್ಮಿಕರು ನಮ್ಮ ಆರೋಗ್ಯ ರಕ್ಷಣೆ ಮಾಡುತ್ತಿರುವ ಯೋಧರು. ಪೌರಕಾರ್ಮಿಕರಿಗೆ ಸೇರಬೇಕಾದ ಸೌಲಭ್ಯಗಳನ್ನು ಅತಿ ಶೀಘ್ರದಲ್ಲೇ ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ನಗರಸಭೆಯಿಂದ ಹೊರವಲಯದ ಬಾರಂಡಹಳ್ಳಿ ಸಮೀಪ ನಿವೇಶನ ನೀಡಿ ಮನೆ ಕಟ್ಟಿಸಿಕೊಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಮನೆಗಳ ನಿರ್ಮಾಣಕ್ಕೆ ಅಧ್ಯತೆ ನೀಡಲಾಗುತ್ತದೆ ಎಂದು ತಿಳಿಸಿದರು.
ನಗರಸಭೆ ಸದಸ್ಯ ಪ್ರಸಾದ್ ಬಾಬು ಮಾತನಾಡಿ, ಪೌರಕಾರ್ಮಿಕರಿಗೆ ಸಲ್ಲಬೇಕಾದ ಸೌಲಭ್ಯಗಳನ್ನು ಒದಗಿಸಿಲ್ಲ. ಅವರಿಗೆ ಅದು ತಲುಪುವ ತನಕ ವೇದಿಕೆ ಏರುವುದಿಲ್ಲ ಎಂದು ಪ್ರತಿರೋಧ ತೋರುವ ಮೂಲಕ ಪೌರಕಾರ್ಮಿಕರಿಗೆ ಸಲ್ಲಬೇಕಾದ ಸೌಲಭ್ಯಗಳನ್ನು ಒದಗಿಸಲು ಮನವಿ ಮಾಡಿದರು.
ಕಾರ್ಯಕ್ರಮಕ್ಕೂ ಮುನ್ನ ಪೌರಕಾರ್ಮಿಕರು ನಗರದ ಬಂಗಾರಪೇಟೆ ವೃತ್ತದ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ, ಗಾಂಧಿವನದ ಮಹಾತ್ಮ ಗಾಂಧಿಯವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಎಂ.ಜಿ. ರಸ್ತೆ ಮೂಲಕ ರಂಗಮಂದಿರವರೆಗೆ ಮೆರವಣಿಗೆ ನಡೆಸಿದರು. ಕಾರ್ಮಿಕರು ಹಾಗೂ ನಗರಸಭೆ ಅಧಿಕಾರಿಗಳು, ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಕುಣಿದು ಸಂಭ್ರಮಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮಂಗಳಾರತಿ ಎತ್ತಬೇಕಾದ್ದು ಕಾವೇರಿಗಲ್ಲ, ಕಾಂಗ್ರೆಸ್ಸಿಗರಿಗೆ
ಕಾರ್ಯಕ್ರಮದಲ್ಲಿ ನಗರಸಭೆ ಉಪಾಧ್ಯಕ್ಷೆ ಸಂಗೀತಾ. ಪೌರಾಯುಕ್ತೆ ಅಂಬಿಕಾ, ಸದಸ್ಯರಾದ ರಾಕೇಶ್, ಅಂಬರೀಷ್, ಮುರಳಿಗೌಡ, ಸುರೇಶ್ ಬಾಬು, ಗುಣಶೇಖರ್, ಅಫ್ಸರ್, .ಪ್ರವೀಣ್ ಗೌಡ,ಶಾಮಾ ತಾಜ್, ಮಂಜುನಾಥ್, ಶಾಹಿನ್ ತಾಜ್, ಭಾಗ್ಯಮ್ಮ, ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ವ್ಯೆ. ಶಿವಕುಮಾರ್, ಮಾಲೂರು ಪುರಸಭೆ ಅಧ್ಯಕ್ಷೆ ಕೋಮಲ, ಪೌರಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಮಂಜುನಾಥ್ ಮುಂತಾದವರು ಭಾಗವಸಿದ್ದರು.