ಬೀದಿ ರಂಪಾಟ ಮಾಡಿದ ತಪ್ಪನ್ನು ಮರೆ ಮಾಚಿಕೊಳ್ಳಲು ವಿನಾಕಾರಣ ಕಾಂಗ್ರೆಸ್ ಶಾಸಕರ ವಿರುದ್ಧ ಆರೋಪ ಮಾಡುತ್ತಿರುವ ಸಂಸದ ಎಸ್ ಮುನಿಸ್ವಾಮಿ ತಮ್ಮ ವರ್ತನೆ ಬದಲಾಯಿಸಿಕೊಳ್ಳದಿದ್ದರೆ ಕಾಂಗ್ರೆಸ್‍ನಿಂದಲೂ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ ಲಕ್ಷ್ಮಿನಾರಾಯಣ ಎಚ್ಚರಿಕೆ ನೀಡಿದರು.
ಕೋಲಾರ ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಮುನಿಸ್ವಾಮಿ ಸಂಸದರಾಗಿ ಆಯ್ಕೆಯಾಗಿ 4 ವರ್ಷ ಪೂರೈಸಿದ್ದಾರೆ. ರೈತರು, ಮಹಿಳೆಯರು ಮತ್ತು ವಿದ್ಯಾರ್ಥಿಗಳ ಪರ ಯಾವತ್ತೂ ಹೋರಾಟ ಮಾಡಲಿಲ್ಲ. ಈಗ ವೈಯಕ್ತಿಕ ಕಾರಣಕ್ಕೆ ಬಿಜೆಪಿಯನ್ನು ಬಳಕೆ ಮಾಡಿಕೊಂಡಿದ್ದು, ಅನುಚಿತವಾಗಿ ವರ್ತಿಸುತ್ತಿದ್ದಾರೆ” ಎಂದು ಟೀಕಿಸಿದರು.
“ಯುವಕರಲ್ಲಿ ಹಿಂದುತ್ವ ದ್ವೇಷದ ಬೀಜ ಬಿತ್ತಿ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಬಿಜೆಪಿ ನಾಯಕರಿಗೆ ಮೆದುಳಿಗೂ ಹಾಗೂ ನಾಲಿಗೆಗೂ ಸಂಪರ್ಕವೇ ಇಲ್ಲ. ಮತ್ತೆ ಅಧಿಕಾರಕ್ಕೆ ಬರಲು ಇಂಥ ಗೊಂದಲ ಸೃಷ್ಟಿಸುತ್ತಿದ್ದಾರೆ” ಎಂದರು.
“ಜನತಾ ದರ್ಶನದಲ್ಲಿ ಮುನಿಸ್ವಾಮಿ ನಡವಳಿಕೆ ನಗೆಪಾಟಲಿಗೀಡಾಗಿದೆ. ಸಾರ್ವಜನಿಕರ ಕಾರ್ಯಕ್ರಮದಲ್ಲಿ ಜನಪ್ರತಿನಿಧಿಯಾಗಿ ಹೇಗೆ ನಡೆದುಕೊಳ್ಳಬೇಕು ಎಂಬುದರ ಅರಿವೇ ಅವರಿಗೆ ಇಲ್ಲ. ಇಂತಹ ಸಂಸದರು ಬಿಜೆಪಿಗೆ ಕಳಂಕ” ಎಂದು ಆರೋಪಿಸಿದರು.
“ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್, ಕೆ ಎಚ್ ಮುನಿಯಪ್ಪ, ರಮೇಶ್ ಕುಮಾರ್ ಅವರನ್ನು ಗುರಿಯಾಗಿಸಿಕೊಂಡು ಬಿಜೆಪಿ ಮುಖಂಡರುಗಳಾದ ಸಿ ಟಿ ರವಿ, ಮುನಿಸ್ವಾಮಿ, ಸದಾನಂದಗೌಡ, ಎನ್ ರವಿ ಕುಮಾರ್ ಆರೋಪ ಮಾಡಿದ್ದಾರೆ. ನಿಮ್ಮ ಸರ್ಕಾರ ಇದ್ದಾಗ ಏಕೆ ತನಿಖೆ ನಡೆಸಿ ಕ್ರಮ ವಹಿಸಲಿಲ್ಲ?” ಎಂದು ಕಿಡಿಕಾರಿದರು.
“ಮುನಿಸ್ವಾಮಿ ಅವರನ್ನು ಕೋಲಾರದ ಜನ ಎಂದಿಗೂ ಕ್ಷಮಿಸುವುದಿಲ್ಲ, ಬಿಜೆಪಿ ಅಧಿಕಾರದಲ್ಲಿ ಇದ್ದಾಗ ನಾರಾಯಣ ಇಲ್ಲಿಗೆ ವರ್ಗಾವಣೆಯಾಗಿ ಬಂದರೇ ಹೊರತು ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಅಲ್ಲ” ಎಂದರು.
ಜಿಲ್ಲಾ ಕಾರ್ಯಾಧ್ಯಕ್ಷ ಊರಬಾಗಿಲು ಶ್ರೀನಿವಾಸ್ ಮಾತನಾಡಿ, “‘ಕಾಂಗ್ರೆಸ್ ಶಾಸಕರನ್ನು ಭೂಗಳ್ಳರೆಂದು ಹೇಳಿಕೆ ನೀಡಿ ಕಾರ್ಯಕ್ರಮದಲ್ಲಿ ಗೊಂದಲ ಸೃಷ್ಟಿಯಾಗಲು ಮುನಿಸ್ವಾಮಿ ಅವರೇ ಕಾರಣರಾದರು. ಆ ಸಂದರ್ಭದಲ್ಲಿ ಉಂಟಾದ ಗದ್ದಲವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ ನಾರಾಯಣ ಬಹಳ ಮುತುವರ್ಜಿಯಿಂದ ನಿಭಾಯಿಸಿದ್ದಾರೆ. ಇಂಥ ಅಧಿಕಾರಿಯನ್ನು ಕಾಂಗ್ರೆಸ್ ಏಜೆಂಟ್ ಎಂಬುದಾಗಿ ಹೇಳಿರುವ ಸಂಸದರಿಗೆ ನಾಚಿಕೆಯಾಗಬೇಕು. ಬಿಜೆಪಿಯವರ ರೀತಿ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಳ್ಳುವ ಸಂಸ್ಕೃತಿ ಕಾಂಗ್ರೆಸ್‍ಗೆ ಇಲ್ಲ” ಎಂದು ತಿರುಗೇಟು ನೀಡಿದರು.
ಈ ಸುದ್ದಿ ಓದಿದ್ದೀರಾ? ಧಾರವಾಡ | ಪತ್ನಿಗೆ ಮಾತ್ರವಲ್ಲ, ತಂದೆಗೂ ವಿಮೆ ಹಣ ನೀಡುವಂತೆ ಗ್ರಾಹಕ ಆಯೋಗ ತೀರ್ಪು
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಎಸ್‌ಸಿ ಘಟಕದ ಅಧ್ಯಕ್ಷ ಕೆ ಜಯದೇವ್, ಗ್ರಾಮಾಂತರ ಬ್ಲಾಕ್ ಅಧ್ಯಕ್ಷ ಉದಯ್ ಶಂಕರ್, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸಾದ್ ಬಾಬು, ಕೆಪಿಸಿಸಿ ಒಬಿಸಿ ಕಾರ್ಯದರ್ಶಿ ಮಂಜುನಾಥ್, ಡಿಸಿಸಿ ಬ್ಯಾಂಕ್ ನಾಮನಿರ್ದೇಶಿತ ನಿರ್ದೇಶಕ ಎಲ್ ಎ ಮಂಜುನಾಥ್, ಬಿ ಟಿ ಮಂಜುನಾಥ್, ರಾಮಯ್ಯ ಇದ್ದರು.