ಕೋಲಾರ ನಗರದಲ್ಲಿ ಕಳೆದ ನಾಲ್ಕೈದು ದಿನಗಳಿಂದ ಮಳೆ ಸುರಿಯುತ್ತಿದ್ದು, ಹಲವು ವಾರ್ಡ್‌ಗಳಲ್ಲಿ ಅವ್ಯವಸ್ಥೆ ನೆಲೆಸಿರುವುದಕ್ಕೆ ನಾಗರಿಕರು ಆಕ್ರೋಶ ವ್ಯಕ್ತಪಪಡಿಸಿದ್ದಾರೆ.
ನಗರದಲ್ಲಿ ಉಕ್ಕಿ ಹರಿಯುತ್ತಿರುವ ಚೇಂಬರ್ ಹಾಗೂ ಒಳಚರಂಡಿ ಅವ್ಯವಸ್ಥೆ, ಅಲ್ಲಲ್ಲಿ ನಿಂತಿರುವ ಕೊಳಚೆ ನೀರು ಕಂಡು ನಗರಸಭೆ ಸದಸ್ಯರು ಹಾಗೂ ಅಧಿಕಾರಿಗಳ ವಿರುದ್ಧ ಸ್ಥಳೀಯ ನಿವಾಸಿಗಳು ಹರಿಹಾಯ್ದಿದ್ದಾರೆ.
“ನಗರದ 35 ವಾರ್ಡ್‍ಗಳಲ್ಲಿ ಜನಸಾಂದ್ರತೆ ಹೆಚ್ಚಿದ್ದು, ಸ್ವಚ್ಛತೆ ವಿಚಾರದಲ್ಲಿ ಪೌರಾಯುಕ್ತರು ಮತ್ತು ಆರೋಗ್ಯ ನಿರೀಕ್ಷಕರ ನಿರ್ಲಕ್ಷ್ಯ ಹೆಚ್ಚಿದೆ. ಪೌರಕಾರ್ಮಿಕರು, ಚಾಲಕರು ಹಾಗೂ ವಾಹನಗಳ ಕೊರತೆ ಇದೆ. ನಗರದ ಮುಖ್ಯ ರಸ್ತೆಗಳಲ್ಲಿ ಕಸದ ರಾಶಿ ಬಿದ್ದಿರುತ್ತದೆ. ಮನೆ-ಮನೆ ಕಸದ ಸಂಗ್ರಹಣೆ ಸರಿಯಾಗಿ ನಡೆಯುತ್ತಿಲ್ಲ” ಎಂದು ಆರೋಪಿಸಿದರು.
“ಪೌರಕಾರ್ಮಿಕರ ಕೊರತೆಯಿಂದ ಸಾರ್ವಜನಿಕರು ರಸ್ತೆಗೆ ಕಸ ಎಸೆಯುವಂತಾಗಿದೆ. ವಾಣಿಜ್ಯ ಮಳಿಗೆಗಳ ಕಸ ರಸ್ತೆ ಕಾಣುತ್ತಿದೆ. ಕಸ ವಿಲೇವಾರಿ ಮಾಡದೆ ಇರುವುದರಿಂದ ಬೀದಿನಾಯಿಗಳ ಹಾವಳಿ ಹೆಚ್ಚಾಗಿದೆ. ರಹಮತ್ ನಗರದಲ್ಲಿ ಹೆಚ್ಚು ಕಸದ ರಾಶಿ ಇರುವುದರಿಂದ ಬೀದಿನಾಯಿಗಳ ಸಂಖ್ಯೆ ಹೆಚ್ಚಿದ್ದು, ಬಾಲಕನ ಮೇಲೆ ದಾಳಿ ಮಾಡಿ ಗಾಯಗೊಳಿಸಿರುವ ಘಟನೆ ನಡೆದಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಬಹುತೇಕ ದಿನಗಳಿಂದ ನಗರದ ಕೀಲುಕೋಟೆ ವಾರ್ಡ್‍ನ ಪುನೀತ್ ರಾಜ್‍ಕುಮಾರ್ ವೃತ್ತದ ರಸ್ತೆಯಲ್ಲಿ ಯುಜಿಡಿ ತ್ಯಾಜ್ಯ ರಸ್ತೆಯಲ್ಲಿ ಹರಿಯುತ್ತಿದೆ. ಇದೇ ಕೀಲುಕೋಟೆಯಲ್ಲಿ ವಾಸವಿರುವ ಆರೋಗ್ಯ ನಿರೀಕ್ಷಕ ಮೊಹಮ್ಮದ್ ನವಾಜ್ ಈ ಸಮಸ್ಯೆ ಕಂಡರೂ ಸುಮ್ಮನಿದ್ದಾರೆ. ಯುಜಿಡಿ ಬ್ಲಾಕ್ ಆಗಿದೆ. ಕೀಲುಕೋಟೆಯ ರೈಲ್ವೆ ಸೇತುವೆ ಕೆಳಗೆ ತ್ಯಾಜ್ಯ ನೀರು ಹರಿಯುತ್ತಿದ್ದು, ಸಾರ್ವಜನಿಕರಿಗೆ ಓಡಾಡಲು ಕಷ್ಟವಾಗಿದೆ. ಮಳೆ ಬಂದರೆ ಈ ಭಾಗದಲ್ಲಿ ಈಜುಕೊಳದಂತಾಗುತ್ತದೆ” ಎಂದರು.
“ಅಧಿಕಾರಿಗಳು ಸಾರ್ವಜನಿಕರ ಮೊಬೈಲ್ ಕರೆ ಸ್ವೀಕರಿಸುವುದಿಲ್ಲ. ಈ ಕೂಡಲೇ ನಗರಸಭೆಯ ಎಲ್ಲ ವಾರ್ಡ್‍ಗಳಲ್ಲಿ ಕಸದ ನಿರ್ವಹಣೆ, ಯುಜಿಡಿ ಸಮಸ್ಯೆಗಳನ್ನು ಬಗೆಹರಿಸಬೇಕು. ಇಲ್ಲದಿದ್ದಲ್ಲಿ ಮಾನವ ಹಕ್ಕುಗಳ ಜಾಗೃತಿ ದಳದಿಂದ ಮುತ್ತುಸ್ವಾಮಿ ನೇತೃತ್ವದಲ್ಲಿ ನಗರಸಭೆ ಅಧಿಕಾರಿಗಳ ಮೇಲೆ ದೂರು ನೀಡಲಾಗುವುದು” ಎಂದು ಸ್ಥಳೀಯ ನಿವಾಸಿಗಳು ಎಚ್ಚರಿಸಿದ್ದಾರೆ.