ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿಧನದ ಹಿನ್ನೆಲೆಯಲ್ಲಿ ಶುಕ್ರವಾರ ರಾಜ್ಯ ಸರ್ಕಾರವು ಶಾಲೆ ಕಾಲೇಜು, ಕಚೇರಿಗಳಿಗೆ ರಜೆ ಘೋಷಿಸಿದ್ದರೂ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದಲ್ಲಿ ಪರೀಕ್ಷೆ ನಡೆಸಲಾಗಿದೆ.
ಉತ್ತರ ವಿಶ್ವವಿದ್ಯಾಲಯ ವ್ಯಾಪ್ತಿಯ ಬೆಂಗಳೂರಿನ ಕೆ ಆರ್ ಪುರ ಬಳಿಯ ಎರಡು ಕಾಲೇಜುಗಳಲ್ಲಿ ಸ್ನಾತಕ ಪದವಿ(ಯುಜಿ)ಯ ಬಿಬಿಎ ಕೋರ್ಸ್‌ನ ಪ್ರವಾಸೋದ್ಯಮ ಹಾಗೂ ಹೋಟೆಲ್ ಮ್ಯಾನೇಜ್‌ಮೆಂಟ್‌ಗೆ ಸಂಬಂಧಿಸಿದ ವಿಷಯಗಳ ಪರೀಕ್ಷೆ ನಡೆಸಲಾಗಿದೆ.
ಮನಮೋಹನ್ ಸಿಂಗ್ ನಿಧನದ ಗೌರವಾರ್ಥ ಸರ್ಕಾರಿ ರಜೆ ಇದ್ದರೂ ಪರೀಕ್ಷೆ ನಡೆಸಿದ್ದು, ಅಗೌರವ ತೋರಲಾಗಿದೆ ಎಂದು ಕೆಲ ಪೋಷಕರು ಹಾಗೂ ಉಪನ್ಯಾಸಕರು ಆರೋಪಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಸಚಿವ(ಮೌಲ್ಯಮಾಪನ) ಪ್ರೊ. ಕೆ ತಿಪ್ಪೇಸ್ವಾಮಿ, “ಪ್ರಶ್ನೆ ಪತ್ರಿಕೆಯನ್ನು ಗುರುವಾರವೇ ಯುಯುಸಿಎಂಎಸ್ ಆನ್‌ಲೈನ್ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಲಾಗಿತ್ತು. ಪರೀಕ್ಷಾ ಕೇಂದ್ರಗಳಿಗೆ ತಲುಪಿಯೂ ಆಗಿತ್ತು. ಹೀಗಾಗಿ, ಶುಕ್ರವಾರ ಪರೀಕ್ಷೆ ನಡೆಸಲೇಬೇಕಾದ ಅನಿವಾರ್ಯ ಸೃಷ್ಟಿಯಾಯಿತು. ಎರಡು ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆದಿದ್ದು, ಸುಮಾರು 40 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ” ಎಂದರು.
ಈ ಸುದ್ದಿ ಓದಿದ್ದೀರಾ? ಚಿಕ್ಕನಾಯಕನಹಳ್ಳಿ | ಲೇಖನಿಯನ್ನು ಪರಿಣಾಮಕಾರಿಯಾಗಿ ಬಳಸಿ ದೇಶ ಮುನ್ನಡೆಸಿದ ಡಾ.ಸಿಂಗ್: ಮಾಜಿ ಶಾಸಕ ಕೆ ಎಸ್ ಕಿರಣಕುಮಾರ್
ಬೇರೆ ವಿವಿಗಳಲ್ಲಿ ಮುಂದೂಡಿಕೆ: “ಶುಕ್ರವಾರ(ಡಿ.27)ದಂದು ನಿಗದಿಯಾಗಿದ್ದ ಪರೀಕ್ಷೆಗಳನ್ನು ರಾಜ್ಯದ ಬಹುತೇಕ ವಿಶ್ವವಿದ್ಯಾಲಯಗಳು ಮುಂದಕ್ಕೆ ಹಾಕಿವೆ. ಬೆಂಗಳೂರು ವಿಶ್ವವಿದ್ಯಾಲಯದ ಎಂಬಿಎ ದ್ವಿತೀಯ ಸೆಮಿಸ್ಟರ್ ಪರೀಕ್ಷೆಯನ್ನು ಮುಂದೂಡಲಾಗಿದೆ. ಮೈಸೂರು ವಿಶ್ವವಿದ್ಯಾಲಯದ ಪರೀಕ್ಷೆಗಳನ್ನೂ ಮುಂದೂಡಲಾಗಿದೆ. ಈ ಸಂಬಂಧ ವೆಬ್‌ಸೈಟ್‌ನಲ್ಲೂ ಪ್ರಕಟಣೆ ನೀಡಿದೆ. ಕುವೆಂಪು ವಿಶ್ವವಿದ್ಯಾಲಯದ ಸ್ನಾತಕೋತ್ತರ ಪರೀಕ್ಷೆ ಮುಂದೂಡಲಾಗಿದೆ. ಪರಿಷ್ಕೃತ ಪರೀಕ್ಷಾ ದಿನಾಂಕವನ್ನು ವಿಶ್ವವಿದ್ಯಾಲಯದ ವೆಬ್‌ಸೈಟ್‌ನಲ್ಲಿ ಸದ್ಯದಲ್ಲೇ ಪ್ರಕಟಿಸಲಾಗುತ್ತದೆ ಎಂಬುದಾಗಿಯೂ ಆಯಾಯ ವಿಶ್ವವಿದ್ಯಾಲಯಗಳ ಕುಲಸಚಿವರು ತಿಳಿಸಿದ್ದಾರೆ” ಎಂದು ಉಪನ್ಯಾಸಕರೊಬ್ಬರು ತಿಳಿಸಿದರು.