ಅಮೇರಿಕಾದ ರಿಚ್‌ಮಂಡ್ ನಗರದಲ್ಲಿ 3 ದಿನಗಳ ಕಾಲ ನಡೆಯಲಿರುವ ವಿಶ್ವ ಕನ್ನಡ ಅಕ್ಕ ಸಮ್ಮೇಳದಲ್ಲಿ ಕೋಲಾರ ಜಿಲ್ಲೆಯವರಾದ ಅಂತರಾಷ್ಟ್ರೀಯ ಕಲಾವಿದ ಗೋ.ನಾ.ಸ್ವಾಮಿ ಅವರು ಭಾಗವಹಿಸಲಿದ್ದು, ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ಕೋಲಾರ ತಾಲೂಕಿನ ಸುಗಟೂರು ಗ್ರಾಮದವರಾದ ಗೋ.ನಾ ಸ್ವಾಮಿ ಅವರು ಅಮೇರಿಕಾದಲ್ಲಿ ಆಯೋಜಿಸಿರುವ 12ನೇ ವರ್ಷದ ಅಕ್ಕ ಸಮ್ಮೇಳನದಲ್ಲಿ ಜಾನಪದ ಗಾಯನ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

ಅಮೆರಿಕದಲ್ಲಿರುವ ಸುಮಾರು 42 ಕನ್ನಡ ಸಂಘಗಳು ಸೇರಿ ಈ ಸಮ್ಮೇಳನವನ್ನು ಆಯೋಜಿಸುತ್ತಿದ್ದು, ವಿಶ್ವ ಕನ್ನಡ ಅಕ್ಕ ಸಮ್ಮೇಳನವು ಆಗಸ್ಟ್ 30, 31 ಹಾಗೂ ಸೆಪ್ಟೆಂಬರ್ 1ರವರೆಗೆ ಮೂರು ದಿನಗಳ ಕಾಲ ನಡೆಯಲಿದೆ. ಕರ್ನಾಟಕದಿಂದ ಹೃದಯವಾಹಿನಿ ಬಳಗದ ಜಾನಪದ ಕಲಾವಿದರು ಸೇರಿದಂತೆ ಬೊಂಬೆ ಕುಣಿತ, ಕವಿಗೋಷ್ಠಿ ಮುಂತಾದ ಕಲಾತಂಡಗಳು ಸಮ್ಮೇಳನದಲ್ಲಿ ಭಾಗವಹಿಸಲಿವೆ.
ಈ ಸುದ್ದಿ ಓದಿದ್ದೀರಾ? ಚಿಕ್ಕಬಳ್ಳಾಪುರ | ಕೆಪಿಸಿಸಿ ಕಾರ್ಮಿಕ ಘಟಕದ ರಾಜ್ಯಾಧ್ಯಕ್ಷರಾಗಿ ನಂದಕುಮಾರ್: ಕಾರ್ಯಕರ್ತರಲ್ಲಿ ಸಂಭ್ರಮ
ಅಕ್ಕ ಸಮ್ಮೇಳನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು, ವಿವಿಧ ಸ್ಪರ್ಧೆಗಳು, ಫ್ಯಾಶನ್ ಶೋ, ಸಾಹಿತ್ಯ ಗೋಷ್ಠಿ, ನಾಡಿನ ವಿಶಿಷ್ಟ ಖಾದ್ಯಗಳ ಭೋಜನ, ಹೆಸರಾಂತ ಕಲಾವಿದರಿಂದ ಸಂಗೀತ ಕಾರ್ಯಕ್ರಮಗಳು, ನಾಡಿನ ಪಾರಂಪರಿಕ ನೃತ್ಯ ಶೈಲಿಗಳಾದ ಡೊಳ್ಳು ಕುಣಿತ, ಯಕ್ಷಗಾನ ಪ್ರದರ್ಶನ, ಕನ್ನಡ ನಾಟಕಗಳ ಪ್ರದರ್ಶನ ಹೀಗೆ ಬಗೆಬಗೆಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಅಕ್ಕ ಸಮ್ಮೇಳನದಲ್ಲಿ ಕರ್ನಾಟಕದ ವಿವಿಧ ಇಲಾಖೆಗಳ ಸಚಿವರು, ಆಧ್ಯಾತ್ಮಿಕ ಕ್ಷೇತ್ರದ ಪ್ರಮುಖರು, ಖ್ಯಾತ ಚಿತ್ರ ತಾರೆಯರು, ಸಾಹಿತಿಗಳು, ಉದ್ಯಮಿಗಳು ಭಾಗವಹಿಸಲಿದ್ದಾರೆ.