ರಾಜ್ಯ ಸರ್ಕಾರವು ಎಸ್‌ಸಿಎಸ್‌ಪಿ, ಟಿಎಸ್‌ಪಿ-2013ರ ಕಾಯ್ದೆಯನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು, ಪರಿಶಿಷ್ಟರ ಹಣ ಪರಿಶಿಷ್ಟರಿಗೆ ಮಾತ್ರ ಬಳಸಬೇಕು ಎಂದು ಒತ್ತಾಯಿಸಿ, ಕರ್ನಾಟಕ ದಲಿತ ಸಂಘರ್ಷ ಸಮಿತಿ ಪ್ರೊಫೆಸರ್ ಕೃಷ್ಣಪ್ಪ ಸ್ಥಾಪಿತ ಸಂಘಟನೆಯಿಂದ ಕೋಲಾರ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಮುಖಂಡರು ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಮುಖ್ಯಮಂತ್ರಿಗಳಿಗೆ ಮನವಿ ರವಾನಿಸಿದರು.
ದಸಂಸ ರಾಜ್ಯ ಸಂಘಟನಾ ಸಂಚಾಲಕ ಸೂಲಿಕುಂಟೆ ರಮೇಶ್ ಮಾತನಾಡಿ, “ರಾಜ್ಯ ಸರಕಾರ ಕಲಂ 7ಸಿ ರದ್ದು ಪಡಿಸಿ, ವಿವಿಧ ಇಲಾಖೆಗಳ ಮೂಲಕ ಗ್ಯಾರಂಟಿ ಯೋಜನೆಗಳಿಗೆ ಎಸ್ಸಿ ಎಸ್ಟಿ ಸಮುದಾಯದ ಅನುದಾನ ಬಳಕೆಗೆ ಅವಕಾಶ ನೀಡುತ್ತಿರುವುದನ್ನು ತತ್‌ಕ್ಷಣ ತಡೆಯಬೇಕು. ಎಸ್‌ಸಿಎಸ್‌ಪಿ, ಟಿಎಸ್‌ಪಿ-2013 ರ ಕಾಯ್ದೆಯಡಿ ಸಮುದಾಯದ ಜನರು ಆರ್ಥಿಕವಾಗಿ ಹಾಗೂ ಶೈಕ್ಷಣಿಕವಾಗಿ ಅಭಿವೃದ್ಧಿ ಅವಕಾಶಗಳನ್ನು ಶಾಸನಬದ್ದವಾಗಿ ಹೊಂದಲು ರಾಜ್ಯ ಸರ್ಕಾರಗಳು ಕಾಯ್ದೆ ರೂಪಿಸಿವೆ. ಈ ಕಾಯ್ದೆಯ ಕಲಂ 73 ಮತ್ತು 7ಸಿ ರಲ್ಲಿ ಕಾಯ್ದೆಯಡಿ ನಿಗದಿಪಡಿಸಿದ ಅನುದಾನವನ್ನು ಆನ್ಯ ಉದ್ದೇಶಗಳಿಗೆ ಬಳಸಿಕೊಂಡು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳನ್ನು ಸರ್ಕಾರಗಳು ವಂಚಿಸುತ್ತಿದೆ” ಎಂದು ದೂರಿದರು.
ದಸಂಸದ ಜಿಲ್ಲಾ ಸಂಚಾಲಕ ನಾಗನಾಳ ಮುನಿಯಪ್ಪ ಮಾತನಾಡಿ, “ಅನ್ಯ ಯೋಜನೆಗಳಿಗೆ ಎಸ್‌ಸಿಎಸ್‌ಪಿ, ಟಿಎಸ್‌ಪಿ ಹಣ ಉಪಯೋಗಿಸುವಂತೆ ಅವಕಾಶ ನೀಡುವ ಮೂಲಕ ಪರಿಶಿಷ್ಟರಿಗೆ ಆರ್ಥಿಕ ಮತ್ತು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದುವ ಅವಕಾಶವನ್ನು ಸರ್ಕಾರಗಳೇ ನೇರವಾಗಿ ಕಸಿಯುತ್ತಿವೆ. ಅಸ್ಪೃಶ್ಯ ಆಚರಣೆಯನ್ನೂ ಮಾಡಿ ಮತ್ತೆ ಮೊಸಳೆ ಕಣ್ಣೀರು ಸುರಿಸುತ್ತಿದೆ. ಈ ನಯ ವಂಚಕತನ ಬಿಟ್ಟು ಪರಿಶಿಷ್ಟರ ಹಣವನ್ನು ಪರಿಶಿಷ್ಟರಿಗೆ ಮೀಸಲಿಡಬೇಕೆಂದು” ಒತ್ತಾಯಿಸಿದರು.
ಇದನ್ನೂ ಓದಿ: ಕೋಲಾರ | ವ್ಯಸನಮುಕ್ತ ಸಮಾಜಕ್ಕೆ ಎಲ್ಲರೂ ಕೈ ಜೋಡಿಸಿ: ಜಿಲ್ಲಾಧಿಕಾರಿ ಎಂ ಆರ್ ರವಿ
ಸಂಘಟನೆಯ ತಾಲೂಕು ಸಂಚಾಲಕ ಎಸ್. ಎಂ. ವೆಂಕಟೇಶ್ ಮಾತನಾಡಿ, “ಕಳೆದ 2023ರ ಚುನಾವಣೆಯಲ್ಲಿ ಹಿಂದಿನ ಬಿಜೆಪಿ ಸರ್ಕಾರ ದಲಿತ ವಿರೋಧಿ ಧೋರಣೆಯನ್ನು ಅನುಸರಿಸುತ್ತಿದ್ದ ಹಿನ್ನೆಲೆಯಲ್ಲಿ ಬಹುತೇಕ ಎಲ್ಲಾ ಒಳ ಮೀಸಲಾತಿ ಹೋರಾಟಗಾರರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ ಕಾರಣ ಸರ್ಕಾರ ರಚನೆಯಾಗಿರುವುದನ್ನು ಕಾಂಗ್ರೆಸ್ ನಾಯಕರು ಮರೆಯಬಾರದು” ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ದಸಂಸ ಮುಖಂಡ ಚವ್ವೆನಹಳ್ಳಿ ವಿಜಿ, ಮದನಳ್ಳಿ ವೆಂಕಟೇಶ್, ಮುನಿಚೌಡಪ್ಪ, ಸಂಪತ್ ಕುಮಾರ್, ಗೋವಿಂದರಾಜು, ಗನ್ ವೆಂಕಟರಮಣಪ್ಪ, ಮುದುವತ್ತಿ ಕೇಶವ, ಕೋಸಂದ್ರ ರೆಡ್ಡಪ್ಪ, ದೇಶಿಹಳ್ಳಿ ಶ್ರೀನಿವಾಸ್ ಹಾಗೂ ಇತರರು ಇದ್ದರು.