ಮುಜರಾಯಿ ಇಲಾಖೆಯ ಅಡಿಯಲ್ಲಿರುವ ದೇವಾಲಯಗಳಲ್ಲಿ ಎಲ್ಲ ಜಾತಿ, ಧರ್ಮದವರಿಗೂ ಮುಕ್ತ ಪ್ರವೇಶ ಕಲ್ಪಿಸುವ ಅಭಿಯಾನ ನಡೆಯುತ್ತಿದೆ. ಕೋಲಾರ ಜಿಲ್ಲೆಯಲ್ಲಿಯೂ ಅಭಿಯಾನ ಆರಂಭವಾಗಿದ್ದು, ಜಿಲ್ಲೆಯ 1,351 ದೇವಾಲಯಗಳ ಪೈಕಿ 507 ದೇವಾಲಯಗಳಲ್ಲಿ ‘ಎಲ್ಲರಿಗೂ ಮುಕ್ತ ಪ್ರವೇಶ’ದ ಬ್ಯಾನರ್‌ಗಳನ್ನು ಅಳವಡಿಸಲಾಗಿದೆ.
ಇಲಾಖೆಯ ಅಧೀನದಲ್ಲಿರುವ ಜಿಲ್ಲೆಯ ‘ಎ’ ಮತ್ತು ‘ಬಿ’ ದರ್ಜೆಯ ಎಲ್ಲ ದೇವಾಲಯಗಳಲ್ಲಿ ಫಲಕ ಅಳವಡಿಸಲಾಗಿದೆ. ಇನ್ನು, ‘ಸಿ’ ದರ್ಜೆಯ 844 ದೇವಾಲಯಗಳಿಗೆ ಫಲಕ ಅಳವಡಿಕೆ ಬಾಕಿ ಇದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.
ರಾಜ್ಯಾದ್ಯಂತ ದಲಿತರು ಮತ್ತು ಇತರ ಪರಿಶಿಷ್ಟ ಜನಾಂಗದವರಿಗೆ ದೇವಾಲಯ ಪ್ರವೇಶಕ್ಕೆ ಅವಕಾಶ ನೀಡಬೇಕಂದು ಪ್ರತಿಭಟನೆಗಳು ನಡೆಯುತ್ತಿವೆ. ಹಲವೆಡೆ ದಲಿತರು ದೇವಾಲಯ ಪ್ರವೇಶಕ್ಕೆ ಯತ್ನಿಸಿದ್ದು, ಹಲವೆಡೆ ಸಫಲರಾಗಿದ್ದಾರೆ. ಇನ್ನೂ ಹೆಚ್ಚಿನ ಸಂದರ್ಭಗಳಲ್ಲಿ ಪ್ರಬಲ ಜಾತಿಗರು ದಲಿತರ ಮೇಲೆ ದಾಳಿ ಮಾಡಿರುವ ಘಟನೆಗಳು ನಡೆದಿವೆ. ಇತ್ತೀಚೆಗೆ, ಉಳ್ಳೇರಹಳ್ಳಿ ದೇವಲಾಯದಲ್ಲಿ ದಲಿತ ಬಾಲಕ ಗುಜ್ಜಕೋಲು ಮುಟ್ಟಿದ್ದಕ್ಕೆ ಆತನ ಕುಟುಂಬಕ್ಕೆ 60 ರೂ. ದಂಡ ವಿಧಿಸಲಾಗಿತ್ತು.
ಆ ಘಟನೆ ಬಳಿಕ ಎಲ್ಲ ಸಮುದಾಯದವರಿಗೆ ದೇವಾಲಯಗಳಲ್ಲಿ ಮುಕ್ತ ಅವಕಾಶ ನೀಡಬೇಕೆಂಬ ಕೂಗು ಹೆಚ್ಚಾಗಿತ್ತು. ಇಂತಹ ಸಂದರ್ಭದಲ್ಲಿ ಪ್ರತಿಯೊಬ್ಬರ ಧಾರ್ಮಿಕ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯುವ ಕೆಲಸ ಕೋಲಾರ ಜಿಲ್ಲೆಯಲ್ಲಿ ಆರಂಭವಾಗಿದೆ.

ಈ ಹಿಂದೆ, 2016ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಉಪನ್ಯಾಸಕ ಡಾ. ಶಿವಪ್ಪ ಅರಿವು ಅವರ ತಂಡ ಮುಖ್ಯಮಂತ್ರಿಗೆ ಪತ್ರ ಬರೆದು ಎಲ್ಲ ದೇಗುಲಗಳಲ್ಲಿ ‘ಎಲ್ಲರಿಗೂ ಮುಕ್ತ ಪ್ರವೇಶ’ವೆಂಬ ಫಲಕ ಹಾಕಬೇಕೆಂದು ಒತ್ತಾಯಿಸಿತ್ತು. ಅಲ್ಲದೆ, ಮುಳಬಾಗಿಲು ತಾಲೂಕಿನ ಕಾಡೇನಹಳ್ಳಿಯಲ್ಲಿ ನಿವೃತ್ತ ನ್ಯಾಯಮೂರ್ತಿ ಎಚ್.ಎನ್ ನಾಗಮೋಹನದಾಸ್ ಮತ್ತು ಕೋಲಾರ ಜಿಲ್ಲಾಧಿಕಾರಿ ಸಮ್ಮುಖದಲ್ಲಿ ಸೋಮೇಶ್ವರ ದೇವಾಲಯಕ್ಕೆ ದಲಿತರು ಪ್ರವೇಶಿದ್ದರು.