ಕೋಲಾರ ಜಿಲ್ಲೆಯ ವೇಮಗಲ್ ಮತ್ತು ಕುರುಗಲ್ ಪಟ್ಟಣ ಪಂಚಾಯಿತಿ ಚುನಾವಣೆಯ ದಿನಾಂಕ ನಿಗದಿಯಾಗಿದ್ದು, ಚುನಾವಣೆ ಪ್ರದೇಶದಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ. ಮತದಾರರು ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೆ ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ. ಎಂ ಆರ್ ರವಿ ತಿಳಿಸಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ನೂತನವಾಗಿ ರಚನೆಯಾಗಿರುವ ವೇಮಗಲ್ ಕೂರಗಲ್ ಪಟ್ಟಣ ಪಂಚಾಯಿತಿ ಚುನಾವಣೆ ಕುರಿತು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದರು.
“ಜುಲೈ 29ರ ಮಂಗಳವಾರ ಚುನಾವಣೆ ವೇಳಾಪಟ್ಟಿ ಮತ್ತು ಚುನಾವಣಾ ಅಧಿಸೂಚನೆ ಹೊರಡಿಸಲಾಗಿದೆ. ನಾಮಪತ್ರಗಳನ್ನು ಸಲ್ಲಿಸಲು ಆಗಸ್ಟ್ 05ರ ಮಂಗಳವಾರ ಕೊನೆಯ ದಿನವಾಗಿರುತ್ತದೆ. ಮರುದಿನ ಅಂದರೆ 06ರ ಬುಧವಾರ ನಾಮಪತ್ರಗಳನ್ನು ಪರಿಶೀಲಿಸಲಾಗುತ್ತದೆ. ಆಗಸ್ಟ್ 8ರ ಶುಕ್ರವಾರ ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿರುತ್ತದೆ. ಆಗಸ್ಟ್ 17ರ ಭಾನುವಾರ ಬೆಳಿಗ್ಗೆ 7ರಿಂದ ಸಂಜೆ 5ರವರೆಗೆ ಮತದಾನ ನಡೆಯಲಿದೆ. 20ರ ಬುಧವಾರ ಬೆಳಿಗ್ಗೆ 8ರಿಂದ ತಾಲೂಕು ಕೇಂದ್ರ ಸ್ಥಳದಲ್ಲಿ ಮತದಾನದ ಎಣಿಕೆಯನ್ನು ನಡೆಸಲಾಗುವುದು, 20ರ ಬುಧವಾರಕ್ಕಿಂತ ಮುಂಚೆ ಚುನಾವಣೆಯನ್ನು ಮುಕ್ತಾಯಗೊಳಿಸಬೇಕಾಗಿದೆ. ಈ ಅವಧಿಯಲ್ಲಿ ಸದಾಚಾರ ಸಂಹಿತೆಯನ್ನು ಎಲ್ಲ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು, ಸರ್ಕಾರಿ ಅಧಿಕಾರಿಗಳು, ನೌಕರರು, ಉಲ್ಲಂಘನೆ ಆಗದಂತೆ ಪಾಲಿಸಬೇಕು” ಎಂದು ಸೂಚನೆ ನೀಡಿದರು.
“ವೇಮಗಲ್ ಕುರುಗಲ್ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು 17 ವಾರ್ಡುಗಳಿದ್ದು, ಇಬ್ಬರು ಚುನಾವಣಾಧಿಕಾರಿಗಳು ಮತ್ತು ಇಬ್ಬರು ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಒಟ್ಟು 22 ಮತಗಟ್ಟೆಗಳಿದ್ದು, ಅದರಲ್ಲಿ 6,555 ಪುರುಷ ಮತದಾರರು, 6,939 ಮಹಿಳಾ ಮತದಾರರು ಸೇರಿದಂತೆ ಒಟ್ಟು 13,494 ಮತದಾರರಿದ್ದಾರೆ” ಎಂದು ತಿಳಿಸಿದರು.
“ಪಟ್ಟಣ ಪಂಚಾಯಿತಿ ಚುನಾವಣೆಗಳಿಗೆ ಸಂಬಂಧಿಸಿದಂತೆ ಅಭ್ಯರ್ಥಿಗಳು ಚುನಾವಣಾ ವೆಚ್ಚದ ಗರಿಷ್ಠ ಮಿತಿಯೂ ಸರ್ಕಾರದ ಅಧಿಸೂಚನೆಯಂತೆ 1 ಲಕ್ಷ ರೂಪಾಯಿಯಾಗಿದ್ದು, ಈ ಸಂಬಂಧ ಅಭ್ಯರ್ಥಿಗಳು ಸಲ್ಲಿಸುವ ವೆಚ್ಚ ವಿವರಗಳನ್ನು ಪರಿಶೀಲಿಸಲು ಲೆಕ್ಕಪತ್ರ ಇಲಾಖೆಗೆ ಸಂಬಂಧಪಟ್ಟ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳಾಗಿ ನೇಮಿಸಲಾಗಿದೆ” ಎಂದರು.
“ಮತದಾನಕ್ಕಾಗಿ ರಾಜ್ಯ ಚುನಾವಣಾ ಆಯೋಗದ ವಿದ್ಯುನ್ಮಾನ ಮತಯಂತ್ರಗಳನ್ನು ಬಳಸಲಾಗುತ್ತದೆ. ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳ ಚುನಾವಣೆಗೂ ಕೂಡ ಮತಪತ್ರದಲ್ಲಿ ನೋಟ ಎಂದು ಮುದ್ರಿಸಲು ಅವಕಾಶ ಕಲ್ಪಿಸಲಾಗಿರುತ್ತದೆ ಹಾಗೂ ಅಭ್ಯರ್ಥಿಯ ಇತ್ತೀಚಿನ ಭಾವಚಿತ್ರ ಮುದ್ರಿಸಲು ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದರು.
“ವೇಮಗಲ್ ಕುರುಗಳ ಪಟ್ಟಣ ಪಂಚಾಯಿತಿಗೆ ಸಾರ್ವತ್ರಿಕ ಚುನಾವಣೆ 2025ಗೆ ಸಂಬಂಧಪಟ್ಟಂತೆ ಸಾರ್ವಜನಿಕರಿಂದ ದೂರುಗಳನ್ನು. ಸ್ವೀಕರಿಸಲು ಈ ಕಚೇರಿಯ ಕಂಟ್ರೋಲ್ ರೂಂ ದೂ. ಸಂಖ್ಯೆ 08152-243506 ಹಾಗೂ ತಾಲೂಕು ಕಚೇರಿಯ ಕಂಟ್ರೋಲ್ ದೂ. ಸಂಖ್ಯೆ 08152-222056 ಗಳು ಚಾಲನೆಯಲ್ಲಿರುತ್ತದೆ ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಕರಾವಳಿ ಜಿಲ್ಲೆಗಳ ಕಡಲು ಕೊರೆತ ತಡೆಗೆ 300 ಕೋಟಿ ರೂ. ಯೋಜನೆ: ಕಂದಾಯ ಸಚಿವ ಕೃಷ್ಣ ಭೈರೇಗೌಡ
“ರಾಜ್ಯ ಚುನಾವಣಾ ಆಯೋಗವು ಹೊರಡಿಸಿರುವ ವೇಳಾಪಟ್ಟಿಯಂತೆ ಪಟ್ಟಣ ಪಂಚಾಯಿತಿ ಸಾರ್ವತ್ರಿಕ ಚುನಾವಣೆಯನ್ನು ಶಾಂತಿ ಮತ್ತು ಸುವ್ಯವಸ್ಥೆಯಿಂದ ನಡೆಸಲು ಎಲ್ಲ ರಾಜಕೀಯ ಪಕ್ಷಗಳು ಅಭ್ಯರ್ಥಿಗಳು ಸಾರ್ವಜನಿಕರು ಸೂಕ್ತ ಸಹಕಾರವನ್ನು ನೀಡಬೇಕು” ಎಂದು ಜಿಲ್ಲಾಧಿಕಾರಿ ಕೋರಿದರು.
ಅಪರ ಜಿಲ್ಲಾಧಿಕಾರಿ ಮಂಗಳ, ಕೋಲಾರ ತಹಶೀಲ್ದಾರ್ ಡಾ. ನಯನ, ಮೀನುಗಾರಿಕೆ ಉಪ ನಿರ್ದೇಶಕ ರಾಜಣ್ಣ, ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ಬೈರೇಗೌಡ, ಸಹಾಯಕ ಕೃಷಿ ನಿರ್ದೇಶಕ ಮುರಳಿ, ತೋಟಗಾರಿಕೆ ಸಹಾಯಕ ನಿರ್ದೇಶಕ ಡಾ. ಶಿವಾರೆಡ್ಡಿ ಸೇರಿದಂತೆ ಇತರರು ಇದ್ದರು.