ಸಾರ್ವಜನಿಕರು ಸೇರಿದಂತೆ ಹಾಸ್ಟೆಲ್ ವಿದ್ಯಾರ್ಥಿಗಳು ಸಮಸ್ಯೆಗಳು ಹೇಳಿಕೊಂಡಾಗ ಅಧಿಕಾರಿಗಳು ಸ್ಪಂದಿಸಬೇಕು. ಅದಕ್ಕಾಗಿಯೇ ಸರ್ಕಾರ ನಿಮ್ಮನ್ನು ನೇಮಕ ಮಾಡಿರುವುದು, ನಿರ್ಲಕ್ಷ್ಯ ವಹಿಸಿದರೆ ಕ್ರಮ ವಹಿಸಬೇಕಾಗುತ್ತದೆ ಎಂದು ಶಾಸಕ ಕೊತ್ತೂರು ಮಂಜುನಾಥ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಕೋಲಾರ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಬುಧವಾರ ನಡೆದ ತಾಲೂಕು ಮಟ್ಟದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
“ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಇಲಾಖೆಯ ಹಾಸ್ಟೆಲ್ ವಿದ್ಯಾರ್ಥಿಗಳ ಊಟದಲ್ಲಿ ಗುಣಮಟ್ಟವಿರಬೇಕು. ಬೆಳಿಗ್ಗೆ ಬಿಸಿನೀರು ಸೇರಿದಂತೆ ಮೂಲ ಸೌಕರ್ಯಗಳ ಕೊರತೆಯ ಬಗ್ಗೆ ದೂರುಗಳು ಬಂದಿವೆ. ಕೂಡಲೇ ಸರಿಪಡಿಸಬೇಕು. ಆಹಾರ ವಿತರಣೆಯಲ್ಲಿ ವ್ಯತ್ಯಾಸವಾದರೆ ಸಂಬಂಧಿಸಿದ ಅಧಿಕಾರಿ ಮತ್ತು ಗುತ್ತಿಗೆದಾರನ ವಿರುದ್ಧ ಕ್ರಮ ವಹಿಸಲಾಗುತ್ತದೆ. ಹಾಸ್ಟೆಲ್ ಹಾಗೂ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಗುಣಮಟ್ಟದ ಆಹಾರವನ್ನು ಒದಗಿಸಬೇಕು. ಮಕ್ಕಳಿಂದಾಗಲಿ, ಪೋಷಕರಿಂದಾಗಲಿ ದೂರುಗಳು ಬರಬಾರದು. ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು” ಎಂದು ಸೂಚಿಸಿದರು.
“ತೋಟಗಾರಿಕೆ ಮತ್ತು ಕೃಷಿ ಇಲಾಖೆಗಳಿಂದ ರೈತರಿಗೆ ಸಾಕಷ್ಟು ಯೋಜನೆಗಳಿವೆ. ಈ ಬಗ್ಗೆ ರೈತರಿಗೆ ಮೊದಲು ಮಾಹಿತಿ ಕೊಡಬೇಕು. ನೈಜ ರೈತರನ್ನು ಗುರುತಿಸಿ ಅವಕಾಶ ಕಲ್ಪಿಸಬೇಕು. ರೈತರಿಗೆ ಯಂತ್ರೋಪಕರಣಗಳು ಸೇರಿದಂತೆ ಸಹಾಯಧನವನ್ನು ಪಡೆಯಲು ಒಂದಷ್ಟು ಗ್ಯಾಂಗ್ ಹುಟ್ಟಿಕೊಂಡಿದೆ. ಬರುವ ಅಷ್ಟು ಸೌಲಭ್ಯಗಳು ಇಂಥವರಿಗೆ ಸಿಗುತ್ತಿದ್ದು, ನಾಮಕಾವಸ್ಥೆಗೆ ಬಡ ರೈತನ ಹೆಸರು ಬರುತ್ತಿದೆ. ಇದಕ್ಕೆ ಅಧಿಕಾರಿಗಳ ಬೆಂಬಲ ಇದೆ. ಇಂತಹ ಪ್ರವೃತ್ತಿ ಕೂಡಲೇ ನಿಲ್ಲಬೇಕು. ಇಲ್ಲದೇ ಹೋದರೆ ನಾವೇ ನೇರವಾಗಿ ಅ ಗ್ಯಾಂಗನ್ನು ತೋರಿಸಬೇಕಾಗುತ್ತದೆ” ಎಂದರು.
“ರೈತರು ಕೃಷಿಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಇಲಾಖೆಯ ಅಧಿಕಾರಿಗಳಿಗೆ ಯಾರಾದರೂ ತಿಳಿಸಿದರೆ ಸ್ಪಂದಿಸುವುದಿಲ್ಲವೆಂಬ ದೂರುಗಳು ಹೆಚ್ಚು ಕೇಳಿಬಂದಿದೆ. ಇದುವರೆಗೂ ರೈತರ ಸಮಸ್ಯೆಗಳ ಬಗ್ಗೆ ಎಷ್ಟು ಅರ್ಜಿಗಳು ಬಂದಿದೆ, ಎಷ್ಟಕ್ಕೆ ಪರಿಹಾರ ಸಿಕ್ಕಿವೆ, ಎಷ್ಟು ಜನ ಸೌಲಭ್ಯಗಳನ್ನು ಪಡೆದಿದ್ದಾರೆ ಎಂಬುದರ ಬಗ್ಗೆ ಪಲಾನುಭವಿಗಳ ಪಟ್ಟಿಯನ್ನು ಕೊಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸಬೇಕು. ಮಳೆಗಾಲ ಪ್ರಾರಂಭವಾಗಿದೆ. ಬಿತ್ತನೆ ಬೀಜ ಗೊಬ್ಬರ ಕೊರತೆ ಉಂಟಾಗದಂತೆ ಎಚ್ಚರಿಕೆ ವಹಿಸಬೇಕು” ಎಂದರು.
“ಆರೋಗ್ಯ ಇಲಾಖೆಯಲ್ಲಿ ಸರ್ಕಾರದಿಂದ ಆಗಬೇಕಾದ ಕೆಲಸಗಳ ಬಗ್ಗೆ ಗಮನಕ್ಕೆ ತನ್ನಿ, ಕೆಲವು ಆಸ್ಪತ್ರೆಯಲ್ಲಿ ಔಷಧಿಗಳಿಗಾಗಿ ಹೊರಕ್ಕೆ ಚೀಟಿ ಬರೆಯುತ್ತಾರೆ ಎನ್ನಲಾಗುತ್ತಿದೆ. ಮುಂದೆ ಇಂತಹ ಯಾವುದೇ ದೂರುಗಳು ಬರಬಾರದು. ಈಗಾಗಲೇ ಹೋಬಳಿ ಕೇಂದ್ರಗಳಲ್ಲಿ ಹೊಸ ಕಟ್ಟಡಗಳು ಆದಷ್ಟು ಬೇಗ ಕಾಮಗಾರಿ ಮುಗಿಸಿ ಸೇವೆಗೆ ಲಭ್ಯವಿರಬೇಕು. ಸಿಬ್ಬಂದಿ ಕೊರತೆಯಾಗಬಾರದು” ಎಂದು ತಾಲೂಕು ಆರೋಗ್ಯ ಅಧಿಕಾರಿ ನಾರಾಯಣಸ್ವಾಮಿಗೆ ಸೂಚನೆ ನೀಡಿದರು.
“ಯಾವುದೇ ಕಾಮಗಾರಿಯಾಗಲಿ ಪೂರ್ಣಗೊಂಡ ನಂತರವೇ ಹಣ ಬಿಡುಗಡೆ ಮಾಡಬೇಕು. ಜಲಜೀವನ್ ಮಿಷನ್‌ನಿಂದ ಆದಷ್ಟು ಬೇಗ ಕೆಲಸ ಮುಗಿಸಬೇಕು. ಮೀನುಗಾರಿಕೆ ಇಲಾಖೆಯಿಂದ ಮನೆಗಳು ಸೇರಿದಂತೆ ಪೋತ್ಸಾಹಧನ ಸಿಗುತ್ತದೆ. ಇದರ ಸದುಪಯೋಗ ಪಡಿಸಿಕೊಳ್ಳಬೇಕು. ನಗರ ಸಾರಿಗೆಯನ್ನು ಮಾಲೂರು ಮಾರ್ಗದ ಮಂಗಸಂದ್ರ ಪಿಜಿ ಕೇಂದ್ರ ಹಾಗೂ ಬಂಗಾರಪೇಟೆ ರಸ್ತೆಯ ದಿಂಬವರೆಗೂ ವಿಸ್ತರಿಸಬೇಕು” ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಶಾಲಾ ಮಕ್ಕಳಿಗೆ ಶೂ ವಿತರಣೆ ಮಾಡದಿರುವುದನ್ನು ಖಂಡಿಸಿ ಕರುನಾಡ ವಿಜಯಸೇನೆ ಪ್ರತಿಭಟನೆ
ಸಭೆಯಲ್ಲಿ ಎಂಎಲ್‌ಸಿ ಎಂ ಎಲ್ ಅನಿಲ್ ಕುಮಾರ್, ತಾಲೂಕು ಪಂಚಾಯಿತಿ ಆಡಳಿತಾಧಿಕಾರಿ ಹಾಗೂ ಉಪ ವಿಭಾಗಾಧಿಕಾರಿ ಡಾ. ಮೈತ್ರಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ್ ತಾಲೂಕು ಮಟ್ಟದ ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಅಧ್ಯಕ್ಷ ವೇಮಗಲ್ ಮುನಿಯಪ್ಪ, ತಹಶೀಲ್ದಾರ್ ನಯನ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.