ಕಳೆದ 15 ವರ್ಷಗಳಿಂದ 24 ಟಿಎಂಸಿ ನೀರು ಲಭ್ಯವಾಗುತ್ತದೆ ಎಂಬ ಕಾಲ್ಪನಿಕ ಸಂಖ್ಯೆಯನ್ನು ಇಟ್ಟುಕೊಂಡು ಜಿಲ್ಲಾವಾರು ನೀರಿನ ಹಂಚಿಕೆ ಮಾಡಲಾಗಿದೆ. ಆದರೆ, ವರದಿಗಳ ಪ್ರಕಾರ ಎತ್ತಿನಹೊಳೆ ಯೋಜನೆಯ ನೀರಿನ ಇಳುವರಿ ಕೇವಲ 8.5 ಟಿಎಂಸಿ ಇದ್ದು, ಕಟ್ಟ ಕಡೆಯ ಜಿಲ್ಲೆಗಳಾದ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಿಗೆ ನೀರು ತಲುಪುವುದು ಅಸಾಧ್ಯ ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್ ಆಂಜನೇಯ ರೆಡ್ಡಿ ಕಿಡಿಕಾರಿದ್ದಾರೆ.
ಹಠ ಹಿಡಿದು ಬೆಟ್ಟ ಅಗೆದು ಇಲಿ ಹಿಡಿದಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರು 21ನೇ ಶತಮಾನ ಕಂಡ ಬಹುದೊಡ್ಡ ಮೋಸದ ಎತ್ತಿನಹೊಳೆ ಯೋಜನೆಗೆ ಇಂದು ಸಕಲೇಶಪುರದಲ್ಲಿ ಗುಂಡಿ ಒತ್ತಿ ಚಾಲನೆ ಕೊಡಲಿದ್ದಾರೆಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಸರ್ಕಾರದಿಂದ ಅನುಮೋದಿಸಲ್ಪಟ್ಟ ಮೂಲ ವಿಸ್ತೃತ ಯೋಜನಾ ವರದಿಯಯಂತೆ (DPR) ಪೂರ್ವಾಭಿಮುಖವಾಗಿ ಹರಿಯಬೇಕಿದ್ದ ಎತ್ತಿನಹೊಳೆಯನ್ನು ಉದ್ದೇಶಿತ ಮೂಲ ಪಥವನ್ನೇ ಬದಲಿಸಿ ವೇದಾವತಿ ವ್ಯಾಲಿ ಮೂಲಕ ವಾಣಿ ವಿಲಾಸ ಸಾಗರಕ್ಕೆ ಹರಿಸುತ್ತೇವೆಂದು ಉಪಮುಖ್ಯಮಂತ್ರಿಗಳು ಹಾಗೂ ಜಲಸಂಪನ್ಮೂಲ ಸಚಿವರು ಆಗಿರುವ ಡಿಕೆ ಶಿವಕುಮಾರ್ ಅವರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಇಷ್ಟಾದರೂ ಎತ್ತಿನಹೊಳೆಯಿಂದ ಎರಡೇ ವರ್ಷದಲ್ಲಿ, ಮೂರೇ ವರ್ಷದಲ್ಲಿ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಜನರಿಗೆ ಶುದ್ಧ ಕುಡಿಯುವ ನೀರು ಹರಿಸುತ್ತೇವೆಂದು ಪುಂಖಾನುಪುಂಖವಾಗಿ ಭಾಷಣಗಳನ್ನು ಬಿಗಿದ ರಾಜಕಾರಣಿಗಳು ಈಗ ಎಲ್ಲಿದ್ದಾರೆ, ಯಾವ ಬಿಲ ಸೇರಿದ್ದಾರೋ ಗೊತ್ತಿಲ್ಲ ಎಂದು ಆಂಜನೇಯ ರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಿಮಗೆ ಬದ್ಧತೆ ಇದ್ದಿದ್ದರೆ ಎತ್ತಿನಹೊಳೆ ಯೋಜನೆಯ ಪೂಜೆಯನ್ನು ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ನಂಗಲಿ ಕೆರೆಯನ್ನು ತುಂಬಿಸಿ, ನಂಗಲಿ ಗ್ರಾಮದ ಜನರಿಗೆ ಕುಡಿಯುವ ನೀರನ್ನು ಪೂರೈಸಿ ಅಲ್ಲಿ ಪೂಜೆ ಮಾಡಬೇಕಿತ್ತು. ಆಗ ಈ ಯೋಜನೆ ಸಾಕಾರಗೊಳುತ್ತಿತ್ತು. ಅದು ಅಸಾಧ್ಯ ಎಂಬುದು ಮುಖ್ಯಮಂತ್ರಿಗಳಿಗೂ ಗೊತ್ತಿದೆ ಎಂದು ಗುಡುಗಿದ್ದಾರೆ.

2009ರ ಲೋಕಸಭಾ ಚುನಾವಣೆಯ ಸಮಯದಲ್ಲಿ ಎತ್ತಿನಹೊಳೆ ಸೇರಿದಂತೆ ಮತ್ತಿತರೆ ಕೆಲವು ಹಳ್ಳಗಳಿಂದ 8 ಟಿಎಂಸಿ ನೀರನ್ನು ತಂದು ಕೇವಲ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಶಾಶ್ವತವಾದ ಶುದ್ಧ ಕುಡಿಯುವ ನೀರನ್ನು ಪೂರೈಸುವ ಉದ್ದೇಶದಿಂದ ಆರಂಭವಾದ ಯೋಜನೆ, 2014ರ ಲೋಕಸಭಾ ಚುನಾವಣೆಯ ಮುಂದೆ ಚಿಕ್ಕಬಳ್ಳಾಪುರದಲ್ಲಿ ಗುದ್ದಲಿ ಪೂಜೆ ನೆರವೇರಿಸುವ ವೇಳೆಗೆ ಯೋಜನೆಯ ವ್ಯಾಪ್ತಿ 7 ಜಿಲ್ಲೆಗಳಿಗೆ ಹರಡಿತ್ತು. ಅದರ ಪ್ರಕಾರ ಹಾಸನ, ಚಿಕ್ಕಮಗಳೂರು, ತುಮಕೂರು, ರಾಮನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳ 38 ಪಟ್ಟಣಗಳ, 6,657 ಗ್ರಾಮಗಳ ಸುಮಾರು 75 ಲಕ್ಷ ಜನರಿಗೆ ಶಾಶ್ವತ ಶುದ್ಧ ಕುಡಿಯುವ ನೀರು ಸರಬರಾಜು ಮಾಡುವುದು ಮತ್ತು 527 ಕೆರೆಗಳನ್ನು ತುಂಬಿಸಿ ಅಂತರ್ಜಲ ಮರುಪೂರಣ ಮಾಡುವುದಾಗಿ ಬದಲಾಗಿತ್ತು. ಯೋಜನೆಯ ಆರಂಭಿಕ ಯೋಜನಾ ವೆಚ್ಚ 8,323 ಕೋಟಿ ಇದ್ದದ್ದು, ನಂತರ 2013ರಲ್ಲಿ 12,912 ಕೋಟಿಗಳಿಗೆ ಏರಿಕೆಯಾಗಿತ್ತು. ಈಗ ಮತ್ತೊಮ್ಮೆ 2023ರಲ್ಲಿ 23,251 ಕೋಟಿಗಳಿಗೆ ಹೆಚ್ಚಳವಾಗಿದೆ ಎಂದು ತಿಳಿಸಿದ್ದಾರೆ.

ಎತ್ತಿನಹೊಳೆ ಯೋಜನಾ ವ್ಯಾಪ್ತಿಯಲ್ಲಿ ಬರುವ ವಾರ್ಷಿಕ ಸರಾಸರಿ ಮಳೆ ಪ್ರಮಾಣದ ಆಧಾರದಲ್ಲಿ 8 ಟಿಎಂಸಿ ನೀರಿನ ಲಭ್ಯತೆ ಇದೆ ಎಂದು ಮೂಲ ವರದಿ ಹೇಳಿತ್ತು. ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳೂ ಸಹ 8 ಟಿಎಂಸಿ ಎಂಬುದನ್ನು ಖಚಿತಪಡಿಸಿದ್ದರು. ಆದರೆ ಸರ್ಕಾರವು 24 ಟಿಎಂಸಿ ನೀರು ಲಭ್ಯವಿದೆ ಎಂದು ಲಾಭಕೋರ ಗುತ್ತಿಗೆದಾರರ ವರದಿಯನ್ನೇ ನಂಬಿಕೊಂಡು, 15 ವರ್ಷಗಳಿಂದ ಬರಪೀಡಿತ ಜಿಲ್ಲೆಯ ಜನರಿಗೆ ಹಸಿ ಹಸಿ ಸುಳ್ಳು ಹೇಳಿಕೊಂಡು ಮೋಸ ಮಾಡಿಕೊಂಡು ಬರಲಾಗಿದೆ. ಸೆಂಟ್ರಲ್ ವಾಟರ್ ಕಮಿಷನ್ (ಕೇಂದ್ರೀಯ ಜಲ ಆಯೋಗ) ವರದಿಯ ಪ್ರಕಾರ 24 ಟಿಎಂಸಿ ನೀರು ಲಭ್ಯವಿಲ್ಲ ಎಂದು 2012ರಲ್ಲಿಯೇ ಕರ್ನಾಟಕ ಸರ್ಕಾರಕ್ಕೆ ಪತ್ರ ಬರೆದಿತ್ತು. 2015ರಲ್ಲಿಯೇ ಭಾರತೀಯ ವಿಜ್ಞಾನ ಸಂಸ್ಥೆಯು 24 ಟಿಎಂಸಿ ನೀರು ಇಳುವರಿ ಸಾಧ್ಯವಿಲ್ಲ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿತ್ತು. ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೈಡ್ರಾಲಜಿ ಸಂಸ್ಥೆಯೂ ಸಹ ನೀರಿನ ಇಳುವರಿಯ ಬಗ್ಗೆ ಸಂಶಯವನ್ನು ವ್ಯಕ್ತಪಡಿಸಿ, ಮರು ಅಧ್ಯಯನ ನಡೆಸುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡಿತ್ತು. ಇಂತಹ ವೈಜ್ಞಾನಿಕ ಸಂಸ್ಥೆಗಳನ್ನು ಪರಿಗಣಿಸದೆ ಸಾವಿರಾರು ಕೋಟಿಗಳ ಹಣ ಖರ್ಚು ಮಾಡಿದ ನಂತರ ಸರ್ಕಾರವೇ ನಿಯೋಜನೆ ಮಾಡಿರುವ ಸಂಸ್ಥೆಯು ತನ್ನ ಟೆಲಿಮೆಟ್ರಿಕ್ ಮಾಪನಾ ವರದಿಯಲ್ಲಿ 2023 ರ ಮಳೆಗಾಲದ ಎತ್ತಿನಹೊಳೆ ಯೋಜನೆಯ ನೀರಿನ ಇಳುವರಿ ಕೇವಲ 8.5 ಟಿಎಂಸಿ ಮಾತ್ರ ಲಭ್ಯವಿದೆ ಎಂದು ಹೇಳಿದ ಮೇಲೂ ಬಯಲುಸೀಮೆಗೆ ನೀರು ಹರಿಸುತ್ತೇವೆಂದು ಅದ್ಯಾವ ನೈತಿಕತೆ ಇಟ್ಟುಕೊಂಡು ಗುಂಡಿ ಒತ್ತುತ್ತಾರೆಂದು ಮಾನ್ಯ ಮುಖ್ಯಮಂತ್ರಿಗಳು ರಾಜ್ಯದ ಜನತೆಯ ಮುಂದೆ ಉತ್ತರ ಹೇಳಬೇಕಾಗಿದೆ ಎಂದು ಆಂಜನೇಯ ರೆಡ್ಡಿ ಆಗ್ರಹಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಚಿಂತಾಮಣಿ | ನಗರಸಭಾ ಸದಸ್ಯನ ಕೊಲೆಗೆ ಯತ್ನ: ಆರೋಪಿಯ ಬಂಧನ
ಆದ್ದರಿಂದ, ಈಗಲಾದರೂ ವೈಜ್ಞಾನಿಕ ಸಂಸ್ಥೆಗಳಿಂದ ನೈಜವಾದಂತಹ ನೀರಿನ ಇಳುವರಿಯ ಬಗ್ಗೆ ಮರು ಅಧ್ಯಯನ ಮಾಡಿಸುವಂತ ಬದ್ಧತೆಯನ್ನು ಸರ್ಕಾರ ತೋರಬೇಕಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಹಠಮಾರಿತನವನ್ನು ಬಿಟ್ಟು ಬರಪೀಡಿತ ಜಿಲ್ಲೆಗಳಿಗೆ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳುವ ಕಡೆಗೆ ಮುಕ್ತವಾಗಿ ತೆರೆದುಕೊಳ್ಳಲಿ ಎಂದು ಆಗ್ರಹಿಸುತ್ತೇವೆ. ತಪ್ಪಿದಲ್ಲಿ ಎತ್ತಿನಹೊಳೆ ಯೋಜನೆಯ ಮೋಸವನ್ನು ಹಳ್ಳಿ ಹಳ್ಳಿಗೂ ತಲುಪಿಸುತ್ತೇವೆ ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿಯ ಅಧ್ಯಕ್ಷರಾದ ಆಂಜನೇಯ ರೆಡ್ಡಿ ಆರ್ ಎಚ್ಚರಿಕೆ ನೀಡಿದ್ದಾರೆ.

ಐಏಎಸ್‌ಸಿ ಮುಂತಾದ ಸಂಸ್ಥೆಗಳು ನೀಡಿರುವ ವರದಿಗಳ ಪುಟ ಸಂಖ್ಯೆ ಮತ್ತು ಫೋಟೋಗಳನ್ನಾದರೂ ಕೊಡಬೇಕಿತ್ತು ಆಗ ಆಂಜನೇಯ ರೆಡ್ಡಿ ಅವರ ಮಾತಿಗೆ ಮತ್ತಷ್ಟು ಶಕ್ತಿ ಇರುತ್ತಿತ್ತು. ಸಿದ್ದರಾಮಯ್ಯನವರ ಮೋಸವನ್ನು ಬಯಲಿಗೆ ಎಳೆದಿರುವ ಈ ದಿನ ಪತ್ರಿಕೆಗೆ ಅಭಿನಂದನೆಗಳು