ಕರ್ನಾಟಕ ವಿಧಾನ ಪರಿಷತ್ತಿನ ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆಗೆ ಕೋಲಾರ ಜಿಲ್ಲೆಯಲ್ಲಿ ಶುಕ್ರವಾರ ಶಾಂತಿಯುತವಾಗಿ ಮತದಾನ ನಡೆಯಿತು. ಮತದಾನಕ್ಕಾಗಿ ಜಿಲ್ಲೆಯಲ್ಲಿ ಸ್ಥಾಪಿಸಿದ್ದ 43 ಮತಗಟ್ಟೆಗಳಲ್ಲಿ ಸುಸೂತ್ರವಾಗಿ ಮತದಾನ ಪ್ರಕ್ರಿಯೆ ಜರುಗಿತು. ಬೆಳಿಗ್ಗೆ ಎಂಟು ಗಂಟೆಗೆ ಮತದಾನ ಪ್ರಾರಂಭವಾಗುತ್ತಲೇ ಮತದಾರರು ಮತಗಟ್ಟೆಗಳಿಗೆ ಒಬ್ಬೊಬ್ಬರಾಗಿ ಬಂದು ಮತ ಚಲಾಯಿಸಲಾರಂಭಿಸಿದರು. ಬೆಳಿಗ್ಗೆ 10 ಗಂಟೆಯ ನಂತರ ಮತದಾನ ಚುರುಕುಗೊಂಡಿತು.
ಜಿಲ್ಲೆಯ ಗೌನಿಪಲ್ಲಿ ಸರ್ಕಾರಿ ಪಿಯು ಕಾಲೇಜು, ಲಕ್ಷ್ಮೀಪುರ ಹಾಗೂ ರೋಣೂರಿನ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಶ್ರೀನಿವಾಸಪುರ ಬಾಲಕಿಯರ ಸರ್ಕಾರಿ ಪಿಯು ಕಾಲೇಜು, ಯಲ್ದೂರು ನ್ಯಾಷನಲ್ ಪ್ರೌಢಶಾಲೆ, ಕೊಲದೇವಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಬೈರಕೂರು ಹಾಗೂ ತಾಯಲೂರು ನಾಡಕಚೇರಿ, ಮುಳಬಾಗಿಲು ಪಟ್ಟಣದ ಬಾಲಕರ ಸರ್ಕಾರಿ ಜೂನಿಯರ್ ಕಾಲೇಜು, ಆವಣಿಯ ರಾಮಲಿಂಗೇಶ್ವರ ಸರ್ಕಾರಿ ಜೂನಿಯರ್ ಕಾಲೇಜು, ಹುತ್ತೂರು, ಹೋಳೂರು, ಸುಗಟೂರು ಹಾಗೂ ವಕ್ಕಲೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳು, ವೇಮಗಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ನರಸಾಪುರದ ಕರ್ನಾಟಕ ಪಬ್ಲಿಕ್ ಶಾಲೆ, ಕೋಲಾರ ನಗರದ ಬಾಲಕಿಯರ ಸರ್ಕಾರಿ ಪಿಯು ಕಾಲೇಜು, ಮಾಲೂರು ಪಟ್ಟಣದ ಬಾಲಕಿಯರ ಸರ್ಕಾರಿ ಪಿಯು ಕಾಲೇಜು, ಲಕ್ಕೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಾಸ್ತಿಯ ಕರ್ನಾಟಕ ಪಬ್ಲಿಕ್ ಶಾಲೆ, ಟೇಕಲ್ ಸರ್ಕಾರಿ ಪಿಯು ಕಾಲೇಜು, ಬೂದಿಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಮಸಮುದ್ರದ ಸರ್ಕಾರಿ ಪ್ರೌಢಶಾಲೆ, ಬಂಗಾರಪೇಟೆ ಕ್ಯಾಂಪಿಂಗ್ ಗ್ರೌಂಡ್ನ ಕರ್ನಾಟಕ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಕೆ.ಜಿ.ಎಫ್ ತಾಲೂಕಿನ ರಾಬರ್ಟ್ಸನ್ಪೇಟೆಯ ಬಾಲಕಿಯರ ಸರ್ಕಾರಿ ಪಿಯು ಕಾಲೇಜು, ಬೇತಮಂಗಲ ಮತ್ತು ಕ್ಯಾಸಂಬಳ್ಳಿ ಗ್ರಾಮ ಪಂಚಾಯತ್ ಕಚೇರಿ ಸೇರಿದಂತೆ ಜಿಲ್ಲೆಯಲ್ಲಿ ಸ್ಥಾಪಿಸಿದ್ದ ಮತಗಟ್ಟೆಗಳಲ್ಲಿ ಮತದಾರರು ತಮ್ಮ ಹಕ್ಕು ಚಲಾಯಿಸಿದರು.
ಮತದಾನವು ನಿಗದಿತ ಸಮಯದಂತೆ ಬೆಳಿಗ್ಗೆ 8 ಗಂಟೆಗೆ ಸರಿಯಾಗಿ ಪ್ರಾರಂಭವಾಗಿದೆ. ಎಲ್ಲಾ ಪೋಲಿಂಗ್ ಪಾರ್ಟಿಗಳು ಮತ್ತು ಮೈಕ್ರೋ ಅಬ್ಸರ್ವರ್ಗಳು (ಸೂಕ್ಷ್ಮ ವೀಕ್ಷಕರು) ಸ್ಥಳದಲ್ಲಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದೆ ಶಾಂತಿಯುತವಾಗಿ ಮತದಾನ ಪ್ರಕ್ರಿಯೆ ನಡೆಯುತ್ತಿದೆ. ಮತದಾನವು ಸಂಜೆ 4 ಗಂಟೆಗೆ ಮುಕ್ತಾಯಗೊಳ್ಳಲಿದೆ. ಯಾವುದೇ ಕಾರಣಕ್ಕೂ ಸಂಜೆ 4 ಗಂಟೆಯ ನಂತರ ಮತದಾನಕ್ಕೆ ಅವಕಾಶವಿರುವುದಿಲ್ಲವಾದ್ದರಿಂದ, ಎಲ್ಲರೂ 4 ಗಂಟೆಯ ಮುಂಚೆಯೇ ಬಂದು ವೋಟ್ ಮಾಡಬೇಕು. ಗುರುವಾರ ಸಂಜೆ ಜಿಲ್ಲೆಯ ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಿ ಸಿದ್ಧತೆಗಳನ್ನು ಪರಿಶೀಲಿಸಲಾಗಿದೆ. ಆಯಾ ನಿಯೋಜಿತ ಅಧಿಕಾರಿಗಳಿಗೆ ಚುನಾವಣಾ ಕಾರ್ಯವನ್ನು ನಿಗಾವಹಿಸಲು ಸೂಚಿಸಲಾಗಿದೆ ಎಂದರು.
43 ಪೋಲಿಂಗ್ ಸ್ಟೇಷನ್ಗಳಲ್ಲಿ ವೆಬ್ ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದ್ದು, ಅದನ್ನು ನಿರಂತರವಾಗಿ ಮಾನಿಟರ್ ಮಾಡಲಾಗುತ್ತಿದೆ. ಪ್ರತಿ ಪೋಲಿಂಗ್ ಪಾರ್ಟಿಗೂ ನಾಲ್ವರು ಸಿಬ್ಬಂದಿ ಹಾಗೂ ಮೈಕ್ರೋ ಅಬ್ಸರ್ವರ್ಗಳನ್ನು ನಿಯೋಜಿಸಲಾಗಿದೆ. ಕೋಲಾರ ನಗರ, ಶ್ರೀನಿವಾಸಪುರ, ಮುಳಬಾಗಿಲು, ಮಾಲೂರು ಹಾಗೂ ಬಂಗಾರಪೇಟೆ ಸೇರಿದಂತೆ ಹೆಚ್ಚು ಮತದಾರರು ಇರುವ ಬೂತ್ಗಳಲ್ಲಿ, ಜನಸಂದಣಿ ಅಥವಾ ಇತರೆ ತುರ್ತು ಪರಿಸ್ಥಿತಿಗಳನ್ನು ನಿಭಾಯಿಸಲು ಹೆಚ್ಚುವರಿಯಾಗಿ ರಿಸರ್ವ್ ಪಾರ್ಟಿಗಳನ್ನು ಕೂಡ ನಿಯೋಜಿಸಲಾಗಿದೆ” ಎಂದು ತಿಳಿಸಿದ ಅವರು, ನಂತರ ಜಿಲ್ಲೆಯ ವಿವಿಧ ತಾಲೂಕಿನ ಮತದಾನ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಜಿಲ್ಲೆಯಲ್ಲಿ ಶೇ. 76.99 ರಷ್ಟು ಮತದಾನ:
ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆಯ ಮತದಾನ ಕಾರ್ಯವು ಅಕ್ಟೋಬರ್ 23ರಂದು ಕೋಲಾರ ಜಿಲ್ಲೆಯ ಎಲ್ಲ ಮತಗಟ್ಟೆಗಳಲ್ಲಿ ಸುಗಮವಾಗಿ ನಡೆಸಲಾಯಿತು. ಕೋಲಾರ ಜಿಲ್ಲೆಯಲ್ಲಿ ಒಟ್ಟು ಶೇ. 76.99 ರಷ್ಟು ಮತದಾನವಾಗಿದೆ ಎಂದು ಆಗ್ನೇಯ ಪದವೀಧರರ ಮತಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಾದ ಎಂ.ಆರ್. ರವಿಕುಮಾರ್ ಅವರು ತಿಳಿಸಿದ್ದಾರೆ.
ಕೋಲಾರ, ಶ್ರೀನಿವಾಸಪುರ, ಮುಳಬಾಗಿಲು, ಮಾಲೂರು, ಬಂಗಾರಪೇಟೆ ಹಾಗೂ ಕೆ.ಜಿ.ಎಫ್ ತಾಲೂಕುಗಳಲ್ಲಿನ ಒಟ್ಟು 43 ಮತದಾನ ಕೇಂದ್ರಗಳಲ್ಲಿ ಬೆಳಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆವರೆಗೆ ನಡೆದ ಮತದಾನದಲ್ಲಿ ಒಟ್ಟು 17,143 ಪುರುಷ ಮತದಾರರ ಪೈಕಿ 13,509 ಜನರು ಹಾಗೂ ಒಟ್ಟು 14,738 ಮಹಿಳಾ ಮತದಾರರ ಪೈಕಿ 11,037 ಜನರು ಮತಚಲಾಯಿಸಿದ್ದಾರೆ. ಒಟ್ಟಾರೆ ಜಿಲ್ಲೆಯ ಒಟ್ಟು 31,881 ಮತದಾರರ ಪೈಕಿ 24,546 ಜನರು ಮತದಾನ ಮಾಡಿದ್ದು, ಶೇ. 76.99 ರಷ್ಟು ಮತದಾನ ದಾಖಲಾಗಿದೆ ಎಂದು ಸಹಾಯಕ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಾದ ಎಂ.ಆರ್. ರವಿಕುಮಾರ್ ಅವರು ಮಾಹಿತಿ ನೀಡಿದ್ದಾರೆ.
ತಾಲೂಕುವಾರು ಮತದಾನದ ವಿವರ:
ಶ್ರೀನಿವಾಸಪುರ: ಒಟ್ಟು 5,940 ಮತದಾರರ ಪೈಕಿ 4,544 ಮಂದಿ ಮತ ಚಲಾಯಿಸಿದ್ದು, ಶೇ. 76.50 ರಷ್ಟು ಮತದಾನವಾಗಿದೆ. ಮುಳಬಾಗಿಲು: ಒಟ್ಟು 5,418 ಮತದಾರರ ಪೈಕಿ 4,163 ಮಂದಿ ಮತ ಚಲಾಯಿಸಿದ್ದು, ಶೇ. 76.84 ರಷ್ಟು ಮತದಾನವಾಗಿದೆ.
ಇದನ್ನು ಓದಿದ್ದೀರಾ..?ಬಾಗೇಪಲ್ಲಿ | ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆ ಬಹುತೇಕಶಾಂತಿಯುತ ಹಾಗೂ ಬಿರುಸಿನ ಮತದಾನ
ಕೋಲಾರ: ಒಟ್ಟು 9,713 ಮತದಾರರ ಪೈಕಿ 7,343 ಮಂದಿ ಮತ ಚಲಾಯಿಸಿದ್ದು, ಶೇ. 75.60 ರಷ್ಟು ಮತದಾನವಾಗಿದೆ.
ಮಾಲೂರು: ಒಟ್ಟು 4,392 ಮತದಾರರ ಪೈಕಿ 3,593 ಮಂದಿ ಮತ ಚಲಾಯಿಸಿದ್ದು, ಶೇ. 81.81 ರಷ್ಟು (ಜಿಲ್ಲೆಯಲ್ಲೇ ಅತಿ ಹೆಚ್ಚು) ಮತದಾನವಾಗಿದೆ.
ಬಂಗಾರಪೇಟೆ: ಒಟ್ಟು 3,613 ಮತದಾರರ ಪೈಕಿ 2,803 ಮಂದಿ ಮತ ಚಲಾಯಿಸಿದ್ದು, ಶೇ. 77.58 ರಷ್ಟು ಮತದಾನವಾಗಿದೆ.
ಕೆ.ಜಿ.ಎಫ್: ಒಟ್ಟು 2,805 ಮತದಾರರ ಪೈಕಿ 2,100 ಮಂದಿ ಮತ ಚಲಾಯಿಸಿದ್ದು, ಶೇ. 74.87 ರಷ್ಟು ಮತದಾನವಾಗಿದೆ.
ಕೋಲಾರ | ಆಗ್ನೇಯ ಪದವೀಧರರ ಕ್ಷೇತ್ರ : ಕೋಲಾರ ಜಿಲ್ಲೆಯಲ್ಲಿ ಶೇ. 76.99 ರಷ್ಟು ಮತದಾನ : ಚುನಾವಣಾಧಿಕಾರಿ ಎಂ.ಆರ್. ರವಿಕುಮಾರ್
ಪೋಸ್ಟ್ ಹಂಚಿಕೊಳ್ಳಿ:





