ಸವರ್ಣೀಯ ಮಹಿಳೆಯೊಬ್ಬರು ಪೊರಕೆಯಿಂದ ಹಲ್ಲೆ ನಡೆಸಿದರೆಂಬ ಕಾರಣಕ್ಕೆ ಮನನೊಂದ ದಲಿತ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಉಳಗೆರೆ ಗ್ರಾಮದಲ್ಲಿ ನಡೆದಿದ್ದು, ನಾಲ್ವರ ವಿರುದ್ಧ ಆತ್ಮಹತ್ಯೆ ಪ್ರಕರಣ ಮತ್ತು ಎಸ್‌ಸಿ/ಎಸ್‌ಟಿ ದೌರ್ಜನ್ಯ ಪ್ರಕರಣ ದಾಖಲಾಗಿದೆ.
ದಲಿತ ಯುವಕ ಶ್ರೀನಿವಾಸ್ (32) ಮತ್ತು ಮೇಲ್ಜಾತಿಗೆ ಸೇರಿದ ಅಶೋಕ್ (32) ಇಬ್ಬರೂ ಸ್ನೇಹಿತರಾಗಿದ್ದು, ದಿನಗೂಲಿ ಕಾರ್ಮಿಕರಾಗಿದ್ದರು.
“ಶ್ರೀನಿವಾಸ್ ಎಂಬಾತ ಅಶೋಕ್ ಹೆಂಡತಿಯ ಶೀಲದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು, ಅಶೋಕ್ ವಿರುದ್ಧ ಗದರಿದ್ದರು. ಇದರಿಂದ ಅಶೋಕ್ ತನ್ನ ಹೆಂಡತಿಯೊಂದಿಗೆ ಜಗಳವಾಡಿದ್ದಾನೆ. ಇದರಿಂದ ಕೋಪಗೊಂಡ ಮಂಜುಳಾ ತನ್ನ ಪತಿಯನ್ನು ಕರೆದುಕೊಂಡು ಶ್ರೀನಿವಾಸ್ ಮನೆ ಬಳಿ ಹೋಗಿ ನಿನ್ನಿಂದಲೇ ತಮ್ಮ ಕುಟುಂಬದಲ್ಲಿ ಸಮಸ್ಯೆ ಸೃಷ್ಟಿಯಾಗುತ್ತಿದೆ. ಇದಕ್ಕೆ ನೀನೆ ಕಾರಣವೆಂದು ಪೊರಕೆಯಿಂದ ಹಲ್ಲೆ ನಡೆಸಿದ್ದು, ಜಗಳ ಮಾಡಿ ಬಂದಿದ್ದಾರೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಗದಗ | ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ ಬಾಲಕ; ಪ್ರಕರಣ ಮುಚ್ಚಿಹಾಕುವ ಹುನ್ನಾರ?
“ಘಟನೆಯ ನಂತರ ಅವಮಾನ ಸಹಿಸಲಾಗದೆ ಮನನೊಂದ ಶ್ರೀನಿವಾಸ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಿಗಳ ಸಮುದಾಯದ ಅಶೋಕ್ ಹಾಗೂ ಅವರ ಪತ್ನಿ ಮಂಜುಳಾ ಅವರನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ” ಎಂದು ಪೊಲೀಸರು ತಿಳಿಸಿರುವುದು ವರದಿಯಾಗಿದೆ.