ಮುಂಬರುವ ಜಿ.ಪಂ, ತಾ.ಪಂ. ಗ್ರಾ.ಪಂ.ಗೆ ಈ ಚುನಾವಣೆಯೇ ಪ್ರಮುಖ ದಾರಿ. ನಂತರ ವಿಧಾನಸಭೆ ಚುನಾವಣೆಯೂ ಬರಲಿದೆ. ಹೀಗಾಗಿ, ಪ್ರತಿ ಕಾರ್ಯಕರ್ತ ತಾನೇ ಅಭ್ಯರ್ಥಿ ಶಶಿ ಹುಲಿಕುಂಟೆಮಠ್ ಎಂದು ಭಾವಿಸಿಕೊಂಡು ಪ್ರಚಾರ ನಡೆಸಿ ಮತಯಾಚಿಸಬೇಕು. ನಾನು ಕೂಡ ಅಭ್ಯರ್ಥಿಯೇ ಎಂದು ಶಾಸಕ ಕೊತ್ತೂರು ಮಂಜುನಾಥ್ ತಿಳಿಸಿದರು.
ನಗರದ ಹೊರವಲಯದ ಒಲಿವಿಯಾ ರೆಸಾರ್ಟ್ ನಲ್ಲಿ ಶನಿವಾರ ನಡೆದ ಆಗ್ನೇಯ ಪದವೀಧರ ಕ್ಷೇತ್ರದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಪಕ್ಷದ ಅಭ್ಯರ್ಥಿ ಶಶಿ ಹುಲಿಕುಂಟೆಮಠ್ ಪರವಾಗಿ ಮತ ಯಾಚಿಸಿ ಅವರು ಮಾತನಾಡಿದರು.
ಈ ಚುನಾವಣೆಯಲ್ಲಿ ಏನಾದರೂ ಹೆಚ್ಚುಕಡಿಮೆಯಾದರೆ ನಾವೇ ಹೊಣೆ. ಹೀಗಾಗಿ, ಎಚ್ಚರಿಕೆಯಿಂದ ಕೆಲಸ ಮಾಡಬೇಕು. ಸಾಮಾಜಿಕ ಜಾಲತಾಣ ನೆಚ್ಚಿಕೊಳ್ಳದೆ ಪ್ರತಿಯೊಬ್ಬರೂ ಮನೆಮನೆಗೆ ಹೋಗಿ ಮತದಾರರ ಮನ ವೊಲಿಸಬೇಕು. ಈ ಭಾಗದಲ್ಲಿ ಅತಿ ಹೆಚ್ಚು ಮತಹಾಕಿಸಿ ಶಶಿ ಹುಲಿಕುಂಟೆಮಠ್ ಗೆಲ್ಲಿಸುವ ಜವಾಬ್ದಾರಿ ನಮ್ಮದು ಎಂದರು.
ವಿಧಾನ ಪರಿಷತ್ ಸದಸ್ಯ ನಸೀರ್ ಅಹ್ಮದ್ ಮಾತನಾಡಿ, ಈ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಕಾಲ ಕೂಡಿಬಂದಿದೆ, ಗೆಲ್ಲಲು ಅವಕಾಶವಿದೆ. ಇಂಥ ಅವಕಾಶ ಮತ್ತೆ ಸಿಗಲ್ಲ. ಹೀಗಾಗಿ, ಇನ್ನು ನಾಲ್ಕೈದು ದಿನ ಕಾರ್ಯಕರ್ತರು ಮನಪೂರ್ವಕವಾಗಿ, ಶ್ರಮಪಟ್ಟು ಕೆಲಸ ಮಾಡಬೇಕು ಎಂದು ಮನವಿ ಮಾಡಿದರು. ಈ ಚುನಾವಣೆ ಮುಂಬರುವ ಎಲ್ಲಾ ಚುನಾವಣೆಗಳಿಗೆ ಮುನ್ನುಡಿಯಾಗಲಿದೆ. ಹೀಗಾಗಿ ಉತ್ತಮ ಆರಂಭ ಮುಖ್ಯ ಎಂದರು.
ವಿಧಾನ ಪರಿಷತ್ ಸದಸ್ಯ ಎಂ.ಎಲ್. ಅನಿಲ್ ಕುಮಾರ್ ಮಾತನಾಡಿ, ಈ ಚುನಾವಣೆಯನ್ನು ಕಾಂಗ್ರೆಸ್ ಪಕ್ಷ ಗಂಭೀರವಾಗಿ ತೆಗೆದುಕೊಂಡಿದೆ. ಕಳೆದ ಬಾರಿ ಶಿಕ್ಷಕರ ಕ್ಷೇತ್ರ ಗೆಲ್ಲಲು ಸಾಧ್ಯವಾಯಿತು. ಒಂದು ವರ್ಷದಿಂದ ಆಗ್ನೇಯ ಪದವೀಧರರ ಕ್ಷೇತ್ರಕ್ಕೆ ಸಿದ್ಧತೆ ನಡೆಲಾಗುತ್ತಿದೆ. ಅಭ್ಯರ್ಥಿಯನ್ನೂ ಘೋಷಣೆ ಮಾಡಿ 11 ತಿಂಗಳಾಯಿತು ಎಂದರು.
ಕಳೆದ ಬಾರಿ ೧ ಲಕ್ಷ ಇದ್ದ ಮತದಾರರ ಕ್ಷೇತ್ರ ಈ ಸಲ ೧.೯೨ ಲಕ್ಷಕ್ಕೆ ತಲುಪಿದೆ. ಕೋಲಾರ ಜಿಲ್ಲೆಯಲ್ಲಿ ೩೧,೩೦೦ ಮತಗಳಿವೆ. ಹೀಗಾಗಿ, ಹಗುರವಾಗಿ ತೆಗೆದುಕೊಳ್ಳಬಾರದು. 2027ರ ಜೂನ್ ಒಳಗೆ ಜಿ.ಪಂ., ತಾ.ಪಂ, ಗ್ರಾ.ಪಂ., ನಗರಸಭೆ, ಪುರಸಭೆ, ಎಪಿಎಂಸಿ ಮುಗಿಯಲಿದೆ. ನಂತರ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಚುನಾವಣೆ, ವಿಧಾನಸಭೆ ಚುನಾವಣೆ, ಲೋಕಸಭೆ ಚುನಾವಣೆ ಬರಲಿದೆ ಎಂದು ಹೇಳಿದರು.
ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಮಾತನಾಡಿ, ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಯಾವತ್ತೂ ಗೆದ್ದಿಲ್ಲ. ಈ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕೆಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ ಎಂದು ಹೇಳಿದರು.
ಒಂದೂವರೆ ವರ್ಷದಲ್ಲಿ ವಿಧಾನಸಭೆ ಚುನಾವಣೆ ಬರಲಿದೆ. ಹೀಗಾಗಿ, ಈ ಚುನಾವಣಾ ಮಹತ್ವದ್ದು. ಶಶಿ ಹುಲಿಕುಂಟೆಮಠ್ ಅವರಿಗೆ ಈ ಬಾರಿ ಅವಕಾಶವಿದೆ ಎಂದು ತಿಳಿಸಿದರು. ವಿಧಾನಸಭೆ, ಲೋಕಸಭೆ ಕ್ಷೇತ್ರಗಳ ರೀತಿ ವಿಧಾನ ಪರಿಷತ್ ಕ್ಷೇತ್ರಗಳ ಬಗ್ಗೆಯೂ ಕ್ಷೇತ್ರ ಪುನರ್ ವಿಂಗಡಣೆ ಆಗಬೇಕು. ಅಲ್ಲದೇ, ರಾಷ್ಟ್ರ ವ್ಯಾಪಿ ಒಂದು ನೀತಿ ರೂಪಿಸಬೇಕಿದೆ ಎಂದು ಸಲಹೆ ನೀಡಿದರು.
ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಚುನಾವಣೆ ಇನ್ನು ಯಾವುದೇ ಕಾರಣಕ್ಕೆ ತಡ ಆಗಬಾರದು. ಹಿಂದಿನ ಸರ್ಕಾರ ಚುನಾವಣೆ ನಡೆಸಲು ಪ್ರಯತ್ನವನ್ನೇ ಮಾಡಲಿಲ್ಲ. ನಮ್ಮ ಸರ್ಕಾರದಲ್ಲೂ ತಡವಾಗಿದೆ ಎಂದು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮ್ಯಾಕಲ ನಾರಾಯಣಸ್ವಾಮಿ ಮಾತನಾಡಿ, ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಗೆ ವಿಧಾನಸಭೆಯಷ್ಟೇ ಮಹತ್ವ ನೀಡಬೇಕು. ಇದು ಜಿ.ಪಂ, ತಾ.ಪಂ ಚುನಾವಣೆಗೆ ದಿಕ್ಸೂಚಿ. ಎಲ್ಲಾ ಆಕಾಂಕ್ಷಿಗಳು, ಕಾರ್ಯಕರ್ತರು,ಮುಖಂಡರು ಮನಃಪೂರ್ವಕವಾಗಿ ತೊಡಗಿಸಿಕೊಳ್ಳಬೇಕು. ಮತದಾನದ ಹಿಂದಿನ ದಿನವೇ ಮತಗಟ್ಟೆ ಬಳಿ ಶಾಮಿಯಾನ ಹಾಕಿ ಸಿದ್ದತೆ ಮಾಡಿಕೊಳ್ಳಬೇಕು ಎಂದರು.
ಅಭ್ಯರ್ಥಿ ಶಶಿ ಹುಲಿಕುಂಟೆಮಠ್ ಮಾತನಾಡಿ, ಮನೆ ಬಿಟ್ಟು ಒಂದೂವರೆ ವರ್ಷವಾಗಿದೆ. ಎಲ್ಲಾ ಕ್ಷೇತ್ರದಲ್ಲಿ ಸುತ್ತಾಡುತ್ತಿದ್ದು, ಕಾಂಗ್ರೆಸ್ ಬಾವುಟ ಹಾರಿಸಲು ಪಣ ತೊಟ್ಟಿದ್ದೇನೆ. ಎಂಟು ಬಾರಿ ಬಿಜೆಪಿ, ಜೆಡಿಎಸ್ ಎರಡು ಬಾರಿ ಗೆದ್ದಿದೆ. ಆ ವಿಚಾರವನ್ನು ಕಾಂಗ್ರೆಸ್ಸಿಗರ ತಲೆಗೆ ತುಂಬಿದ್ದಾರೆ. ನನಗೆ ೧೧ ತಿಂಗಳ ಹಿಂದೆಯೇ ಟಿಕೆಟ್ ಘೋಷಿಸಿ ಪಕ್ಷದ ಮುಖಂಡರು ಹುಮ್ಮಸ್ಸು ತುಂಬಿದ್ದಾರೆ. ಹಿಂದೆಲ್ಲಾ ಹೆಚ್ಚು ಆಸಕ್ತಿ ವಹಿಸದ ಕಾರಣ ಸೋಲು ಎದುರಾಗುತಿತ್ತು ಎಂದರು.
ಶಿಕ್ಷಕರಿಗೆ ಟಿಆರ್ ಬಿರುದು ಕೊಟ್ಟಿದ್ದು ಕಾಂಗ್ರೆಸ್ ಸರ್ಕಾರ. ಅನೇಕ ಪದವೀಧರರು ಇದ್ದು, ಬಹಳಷ್ಟು ಇಲಾಖೆಗಳಲ್ಲಿ ಖಾಲಿ ಇರುವ ೭೫ ಸಾವಿರ ಉದ್ಯೋಗ ಭರ್ತಿಗೆ ಮುಂದಾಗಿದೆ. ಬಿಜೆಪಿ ಎರಡು ಕೋಟಿ ಉದ್ಯೋಗ ನೀಡುವ ಭರವಸೆ ನೀಡಿದ್ದು ಏನಾಯಿತು? ಕೆಲಸ ಕೇಳಿದರೆ ಪಕೋಡ ಮಾಡಿ ಎನ್ನುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ಹಿಂದೆ ಈ ಭಾಗದಿಂದ ಗೆದ್ದು ಹೋದವರು ಒಮ್ಮೆಯೂ ಈ ಕ್ಷೇತ್ರಕ್ಕೆ ಬಂದಿಲ್ಲ. ಪರಿಷತ್ತಿನಲ್ಲಿ ಒಂದು ಪ್ರಶ್ನೆಯನ್ನೂ ಕೇಳಿಲ್ಲ. ಇಂಥವರು ಯಾವ ರೀತಿ ಜನರ ದನಿಯಾಗುತ್ತಾರೆ ಎಂದು ಪ್ರಶ್ನಿಸಿದರು.
ಇದನ್ನು ಓದಿದ್ದೀರಾ..?ಕೋಲಾರ | ಟಾಟಾ ಎಲೆಕ್ಟ್ರಾನಿಕ್ಸ್ನಲ್ಲಿ ಮಹಿಳಾ ಕಾರ್ಮಿಕರ ಸಾವು: ಸಮಗ್ರ ತನಿಖೆಗೆ ಸಿಐಟಿಯು ಒತ್ತಾಯ
ಸಭೆಯಲ್ಲಿ ಮುಖಂಡರಾದ ಕೆ.ವಿ.ಗೌತಮ್, ಬೆಳಗಾನಹಳ್ಳಿ ಮುನಿವೆಂಕಟಪ್ಪ, ವೈ.ಶಿವಕುಮಾರ್, ಖಾಜಿಕಲ್ಲಹಳ್ಳಿ ಮುನಿರಾಜು, ಮಹಮ್ಮದ್ ಹನೀಫ್, ಸೀಸಂದ್ರ ಗೋಪಾಲಗೌಡ, ವೇಮಗಲ್ ಮುನಿಯಪ್ಪ, ಚಂಜಿಮಲೆ ರಮೇಶ್, ಮೈಲಾಂಡಹಳ್ಳಿ ಮುರಳಿ, ಸೈಯದ್ ಆಫ್ಸರ್, ಸೈಯದ್ ಅಫ್ಸರ್, ಸಂಗೀತಾ, ಮಂಜುಳಾ ಇದ್ದರು.





