ಪಕ್ಷದ ಸಂಘಟನೆಯನ್ನು ಬಲಪಡಿಸುವ ಉದ್ದೇಶದಿಂದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಪದಾಧಿಕಾರಿಗಳನ್ನು ಕಾರ್ಯಕರ್ತರ ಅಭಿಪ್ರಾಯ ಪಡೆದು ಆಯ್ಕೆ ಮಾಡಲಾಗುವುದು. ಶಾಸಕರ ಶಿಫಾರಸು, ಜಾತಿ ಅಥವಾ ಹಣಬಲಕ್ಕೆ ಮನ್ನಣೆ ನೀಡದೆ, ಪಕ್ಷಕ್ಕಾಗಿ ಶ್ರಮಿಸುವ ಕಾರ್ಯಕರ್ತರಿಗೆ ಜವಾಬ್ದಾರಿ ನೀಡಲಾಗುವುದು ಎಂದು ಕೆಪಿಸಿಸಿ ಉಪಾಧ್ಯಕ್ಷ ಹಾಗೂ ಮಾಜಿ ಶಾಸಕ ಎನ್. ಸಂಪಂಗಿ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಭಾನುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರನ್ನು ಎಐಸಿಸಿ ಮೂಲಕ ಆಯ್ಕೆ ಮಾಡಿರುವುದು ಪಕ್ಷದ ಸಂಘಟನೆಯಲ್ಲಿ ಶಿಸ್ತು ಮತ್ತು ಸಮನ್ವಯಕ್ಕೆ ಆದ್ಯತೆ ನೀಡುವ ಉದ್ದೇಶದಿಂದ. ಶಾಸಕರು ಸೇರಿದಂತೆ ಪಕ್ಷದ ಎಲ್ಲರೂ ಜಿಲ್ಲಾ ಅಧ್ಯಕ್ಷರ ಮೂಲಕವೇ ಸಂಘಟನಾತ್ಮಕ ಕಾರ್ಯಗಳನ್ನು ನಡೆಸಬೇಕು ಎಂಬುದು ಹೈಕಮಾಂಡ್ನ ಸೂಚನೆಯಾಗಿದೆ. ಇದೇ ಮಾದರಿಯಲ್ಲಿ ಬ್ಲಾಕ್ ಮಟ್ಟದಲ್ಲಿಯೂ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿಯನ್ನು ರಚಿಸಿ ಸಂಘಟನೆಗೆ ಹೆಚ್ಚಿನ ಆಧ್ಯತೆ ನೀಡಲಾಗುತ್ತದೆ ಎಂದು ಹೇಳಿದರು.
ಅಕ್ಟೋಬರ್ 8ರಂದು ಆರಂಭವಾಗಿರುವ ಬ್ಲಾಕ್ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯನ್ನು ಅಕ್ಟೋಬರ್ 30ರೊಳಗೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಈ ಸಂಬಂಧ ಎಲ್ಲ ತಾಲ್ಲೂಕುಗಳಿಗೆ ಭೇಟಿ ನೀಡಿ ಶಾಸಕರು, ಮಾಜಿ ಶಾಸಕರು, ಕೆಪಿಸಿಸಿ ಪದಾಧಿಕಾರಿಗಳು ಹಾಗೂ ಸಂಘಟನೆಯ ಮುಖಂಡರು ಕಾರ್ಯಕರ್ತರನ್ನು ಭೇಟಿ ಮಾಡಿ ಅಭಿಪ್ರಾಯ ಸಂಗ್ರಹಿಸಲಾಗುವುದು. ಪ್ರತಿ ಕಾರ್ಯಕರ್ತರ ಅಭಿಪ್ರಾಯಕ್ಕೆ ಮೊದಲ ಆದ್ಯತೆ ನೀಡಿ ಆಯ್ಕೆ ಪ್ರಕ್ರಿಯೆ ನಡೆಸಲಾಗುವುದು. ಆಯ್ಕೆಯಾದವರ ಹೆಸರನ್ನು ಕೆಪಿಸಿಸಿಗೆ ಕಳುಹಿಸಿ, ಅಲ್ಲಿಂದ ಅನುಮೋದನೆ ಪಡೆದ ಬಳಿಕ ನೇಮಕ ಮಾಡಲಾಗುವುದು ಎಂದು ತಿಳಿಸಿದರು.
ಬ್ಲಾಕ್ ಕಾಂಗ್ರೆಸ್ ಸಮಿತಿಯಲ್ಲಿ ಎಲ್ಲಾ ಸಮುದಾಯಗಳಿಗೆ ಅವಕಾಶ ಕಲ್ಪಿಸುವ ಉದ್ದೇಶವಿದೆ. 60 ವರ್ಷ ದಾಟಿದವರಿಗೆ ಸಾಮಾನ್ಯವಾಗಿ ಕಡಿಮೆ ಅವಕಾಶ ನೀಡಲಾಗುತ್ತದೆಯಾದರೂ, ಕೆಲವು ಹಿರಿಯರಿಗೆ ಅವಕಾಶ ಸಿಗಲಿದೆ. ಮುಂದಿನ ದಿನಗಳಲ್ಲಿ ಪಟ್ಟಣ ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಚುನಾವಣೆಗಳು ಎದುರಾಗಲಿರುವುದರಿಂದ ಪಕ್ಷವನ್ನು ತಳಮಟ್ಟದಿಂದ ಸಂಘಟಿಸಲು ಸಿದ್ಧತೆ ನಡೆಸಲಾಗುತ್ತಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಯ ಸಂದರ್ಭದಲ್ಲಿ ಯಾವುದೇ ಸಮಸ್ಯೆ ಉಂಟಾಗಿಲ್ಲ. ಎಲ್ಲರ ಅಭಿಪ್ರಾಯ ಪಡೆದು, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಆಯ್ಕೆ ಮಾಡಲಾಗಿದೆ. ಪಕ್ಷದಲ್ಲಿ ಯಾವುದೇ ಪ್ರತ್ಯೇಕ ಬಣಗಳಿಲ್ಲ; ಎಲ್ಲರೂ ಕಾಂಗ್ರೆಸ್ನ ಭಾಗವಾಗಿದ್ದಾರೆ ರಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ವೀಕ್ಷಕಿ ಯೋಗೇಶ್ವರಿ ಮಾತನಾಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಆಯ್ಕೆಯಲ್ಲಿ ಮಹಿಳೆಯರಿಗೆ ಆದ್ಯತೆ ನೀಡಲಾಗುವುದು. ಸಾಮಾಜಿಕ ನ್ಯಾಯದ ತತ್ವದಡಿ ವಿವಿಧ ವರ್ಗಗಳಿಗೆ ಪ್ರಾತಿನಿಧ್ಯ ಕಲ್ಪಿಸಲಾಗುವುದು. ಪ್ರತಿ ಹತ್ತು ಬೂತ್ಗಳಿಗೆ ಒಬ್ಬ ಬೂತ್ ಸಮಿತಿ ಅಧ್ಯಕ್ಷರನ್ನು ನೇಮಿಸುವ ಮೂಲಕ ಪಕ್ಷದ ಸಂಘಟನೆಯನ್ನು ತಳಮಟ್ಟದಲ್ಲಿ ಬಲಪಡಿಸಲಾಗುವುದು ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಗಾಗಿ ಈ ಹಿಂದೆ ಎಐಸಿಸಿ ನಿಯೋಗ ಆಗಮಿಸಿ ಅಭಿಪ್ರಾಯ ಸಂಗ್ರಹಿಸಿತ್ತು. ಇದೀಗ ಬ್ಲಾಕ್ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯ ಭಾಗವಾಗಿ ಕೋಲಾರ ನಗರ ಮತ್ತು ಗ್ರಾಮಾಂತರ ಬ್ಲಾಕ್ಗಳ ಮುಖಂಡರು ಹಾಗೂ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹ ನಡೆಯಲಿದೆ ಎಂದು ತಿಳಿಸಿದರು.
ಇದನ್ನು ಓದಿದ್ದೀರಾ..?ಕೋಲಾರ | ಟಾಟಾ ಎಲೆಕ್ಟ್ರಾನಿಕ್ಸ್ನಲ್ಲಿ ಮಹಿಳಾ ಕಾರ್ಮಿಕರ ಸಾವು: ಸಮಗ್ರ ತನಿಖೆಗೆ ಸಿಐಟಿಯು ಒತ್ತಾಯ
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮ್ಯಾಕಲ ನಾರಾಯಣಸ್ವಾಮಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವೆಂಕಟೇಶ್, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಯದ್ ಆಫ್ಸರ್, ಗ್ರಾಮಾಂತರ ಬ್ಲಾಕ್ ಅಧ್ಯಕ್ಷ ಮೈಲಾಂಡಹಳ್ಳಿ ಮುರಳಿ, ಬೆಳಗಾನಹಳ್ಳಿ ಮುನಿವೆಂಕಟಪ್ಪ, ಖಾದ್ರಿಪುರ ಬಾಬು, ಚಿಕ್ಕ ಅಯ್ಯೂರು ರವೀಂದ್ರನಾಥ್ ಇದ್ದರು






