2027ರ ಗೋವಾ ವಿಧಾನಸಭೆ ಚುನಾವಣೆಗೆ ಭರ್ಜರಿ ತಳಹದಿ ನಿರ್ಮಿಸಲು ಮುಂದಾಗಿರುವ ಕಾಂಗ್ರೆಸ್, ರಾಜ್ಯಾದ್ಯಂತ ಹಮ್ಮಿಕೊಂಡಿದ್ದ ‘ಗೋಯ್ ರಖೊಣ್ ಯಾತ್ರೆ’ (ಸೇವ್ ಗೋವಾ ಅಭಿಯಾನ) ಸಮಾರೋಪ ಹಂತ ತಲುಪಿದೆ. ಈ ನಡುವೆ ಸಂಸದ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರೂ ಈ ಪಾದಯಾತ್ರೆಯಲ್ಲಿ ಭಾಗವಹಿಸಿದ್ದಾರೆ.
ಸೌತ್ ಗೋವಾದ ಕಲ್ಕೊಂಡದಿಂದ ಆರಂಭವಾದ ಈ ಸಮಾರೋಪ ಯಾತ್ರೆಯು ಮಡಗಾಂವ್ನ ಡಾ. ರಾಜೇಂದ್ರ ಪ್ರಸಾದ್ ಕ್ರೀಡಾಂಗಣದವರೆಗೆ ಸಾಗಿಬಂದಿದೆ. ಅಲ್ಲಿ ಆಯೋಜಿಸಲಾದ ಬೃಹತ್ ಬಹಿರಂಗ ಸಭೆಯನ್ನು ಉದ್ದೇಶಿಸಿ ರಾಹುಲ್ ಗಾಂಧಿ ಮಾತನಾಡಲಿದ್ದಾರೆ.
ಇದನ್ನೂ ಓದಿ: ‘ಸಂವಿಧಾನವನ್ನು ಬಲವಂತವಾಗಿ ಹೇರಲಾಗಿದೆ’; ಗೋವಾ ಕಾಂಗ್ರೆಸ್ ಅಭ್ಯರ್ಥಿ ವಿವಾದಾತ್ಮಕ ಹೇಳಿಕೆ
ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ (X) ವಿಷಯ ಹಂಚಿಕೊಂಡಿದ್ದ ರಾಹುಲ್ ಗಾಂಧಿ, “ಗೋವಾದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರದ ಕಳೆದ 15 ವರ್ಷಗಳ ಆಡಳಿತವು ಲೂಟಿ ಮತ್ತು ದುರಾಡಳಿತದಿಂದ ಕೂಡಿದೆ. ಭೂಮಿ, ಹಣ, ಉದ್ಯೋಗ ಮತ್ತು ಶಾಸಕರನ್ನಷ್ಟೇ ಅಲ್ಲದೆ ಮತಗಳನ್ನೂ ಕದಿಯಲಾಗಿದೆ. ಗೋವಾ ಯಾರೊಬ್ಬರ ಸ್ವತ್ತಲ್ಲ, ಅದು ಇಲ್ಲಿನ ಜನರಿಗೆ ಸೇರಿದ್ದು ಎಂಬ ಸಂದೇಶವನ್ನು ನೀಡಲು ನಾವು ಈ ಯಾತ್ರೆಯಲ್ಲಿ ಒಂದಾಗಿದ್ದೇವೆ” ಎಂದು ಬಿಜೆಪಿ ವಿರುದ್ಧ ನೇರ ವಾಗ್ದಾಳಿ ನಡೆಸಿದ್ದಾರೆ.
ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಸೇರಿದಂತೆ ದೆಹಲಿಯಲ್ಲಿ ನಡೆದ ಹಲವು ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಈ ಹಿಂದೆ ರಾಹುಲ್ ಗಾಂಧಿ ಅವರ ಗೋವಾ ಭೇಟಿ ಮುಂದೂಡಲ್ಪಟ್ಟಿತ್ತು. ಆದರೆ, ಸೆಪ್ಟೆಂಬರ್ 22ರಂದು ಪಣಜಿಯಿಂದ ಆರಂಭಗೊಂಡಿದ್ದ ಈ 27 ದಿನಗಳ ಬೃಹತ್ ಯಾತ್ರೆಯ ಮುಕ್ತಾಯದ ವೇಳೆಗೆ ಅವರು ಆಗಮಿಸಿರುವುದು ರಾಜ್ಯ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ತುಂಬಿದೆ.
2022ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 20 ಸ್ಥಾನಗಳನ್ನು ಗೆದ್ದು ಆಡಳಿತ ಹಿಡಿದಿದ್ದರೆ, ಕಾಂಗ್ರೆಸ್ 11 ಸ್ಥಾನಗಳಿಗೆ ಕುಸಿದಿತ್ತು. ಮುಂಬರುವ 2027ರ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿರುವ ಕಾಂಗ್ರೆಸ್, ಗೋವಾದ ಗುರುತು ಮತ್ತು ಸಂಸ್ಕೃತಿಯನ್ನು ರಕ್ಷಿಸುವ ಭರವಸೆಯೊಂದಿಗೆ ಈ ಜನಸಂಪರ್ಕ ಯಾತ್ರೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.





