ಕೋಲ್ಕತ್ತಾದ ವೈದ್ಯೆಯ ಮೇಲೆ ನಡೆದ ಅತ್ಯಾಚಾರ-ಕೊಲೆ ಕೃತ್ಯವನ್ನು ಖಂಡಿಸಿ ಶನಿವಾರ ದೇಶದಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ರಾಜ್ಯ ರಾಜಧಾನಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿಯೂ ನಾನಾ ಸಂಘಟನೆಗಳು ಒಗ್ಗೂಡಿ ಪ್ರತಿಭಟನೆ ನಡೆಸಿದ್ದಾರೆ. ಆರೋಪಿಗಳನ್ನು ತಕ್ಷಣವೇ ಬಂಧಿಸಿ, ಅವರಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಮಹಿಳೆಯರಿಗೆ ರಕ್ಷಣೆ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.
ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕತ್ತಾದ ಆರ್ಜಿ ಕರ್ ವೈದ್ಯಕೀಯ ಕಾಲೇಜಿನಲ್ಲಿ ಟ್ರೈನಿ ವೈದ್ಯೆಯ ಮೇಲೆ ಅತ್ಯಾಚಾರ ಎಸಗಿ, ಕೊಲೆ ಮಾಡಲಾಗಿದೆ. ಕೃತ್ಯವನ್ನು ಖಂಡಿಸಿ ಕೋಲ್ಕತ್ತಾದ ವೈದ್ಯರು ಹಲವಾರು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನಾನಿರತ ವೈದ್ಯರಿಗೆ ಬೆಂಬಲ ಸೂಚಿಸಿ, ದೇಶದಾದ್ಯಂತ ಶನಿವಾರ ಪ್ರತಿಭಟನೆಗಳು ನಡೆಯುತ್ತಿವೆ.
ಜನವಾದಿ ಮಹಿಳಾ ಸಂಘಟನೆಯ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆದಿದೆ. “2012ರ ನಿರ್ಭಯಾ ಪ್ರಕರಣವನ್ನು ವಿರೋಧಿಸಿ ಇಡೀ ದೇಶವೇ ಎದ್ದು ಪ್ರತಿಭಟನೆ ನಡೆಸಿತ್ತು. ಇದೀಗ ಕೋಲ್ಕತ್ತಾದಲ್ಲಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಕಿರಿಯ ವೈದ್ಯೆಯ ಮೇಲೆ ನಡೆದ ದಾರುಣ ಅತ್ಯಾಚಾರ, ಕೊಲೆ ಹಾಗೂ ಪ್ರಕರಣವನ್ನು ಮುಚ್ಚಿ ಹಾಕಲು ಹೂಡಿದ್ದ ಸಂಚು ದೇಶವನ್ನು ಆತಂಕಕ್ಕೆ ದೂಡಿದೆ. ಇದೇ ಸಮಯದಲ್ಲಿ ಆಸ್ಪತ್ರೆಗೆ ನುಗ್ಗಿ ದಾಂಧಲೆ ಎಬ್ಬಿಸಿ ಅಳಿದುಳಿದ ಸಾಕ್ಷಿಗಳನ್ನು ನಾಶಪಡಿಸುವ ಯತ್ನವೂ ನಡೆದಿದ್ದು, ಇದು ಹಲವು ಅನುಮಾನಗಳನ್ನು ಮೂಡಿಸಿದೆ. ಆ ಹಿಂಸಾಚಾರದ ಕೃತ್ಯವು ರಾಜ್ಯ ಸರ್ಕಾರದ ವೈಫಲ್ಯವನ್ನೂ ಎತ್ತಿ ತೋರಿಸಿದೆ” ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಎನ್‌ಸಿಆರ್‌ಬಿ ವರದಿಯ ಪ್ರಕಾರ ದೇಶದಲ್ಲಿ ದಿನನಿತ್ಯ ಸರಾಸರಿ 86 ರಿಂದ 90 ಅತ್ಯಾಚಾರ ಪ್ರಕರಣಗಳು ವರದಿಯಾಗುತ್ತವೆ. ದೂರು ದಾಖಲಾಗದ ಪ್ರಕರಣಗಳು ಇನ್ನೂ ಎಷ್ಟೋ ಪಟ್ಟು ಹೆಚ್ಚಿದೆ. ಕೊಲ್ಕತ್ತಾದ ಘಟನೆ ಮಾತ್ರವಲ್ಲದೆ, ಬಿಹಾರದಲ್ಲಿ ದಲಿತ ಬಾಲಕಿಯ ಮೇಲಿನ ಬರ್ಬರ ಅತ್ಯಾಚಾರ-ಕೊಲೆ, ಕೊಯಮತ್ತೂರು, ಉತ್ತರಕಾಂಡಗಳಲ್ಲಿ ನರ್ಸ್ ಮತ್ತು ವೈದ್ಯಕೀಯ ವಿದ್ಯಾರ್ಥಿನಿಯರ ಮೇಲೆ ನಡೆದ ಲೈಂಗಿಕ ದಾಳಿ ಹಾಗೂ ಕರ್ನಾಟಕದ ಹಲವು ಕಡೆ ಪ್ರತಿನಿತ್ಯ ವರದಿಯಾಗುತ್ತಿರುವ ಇಂಥದ್ದೇ ಘಟನೆಗಳು ನಮ್ಮ ವ್ಯವಸ್ಥೆಯ ವೈಫಲ್ಯಗಳನ್ನು ಎತ್ತಿ ತೋರಿಸುತ್ತಿವೆ” ಎಂದು ಕಿಡಿಕಾರಿದ್ದಾರೆ.

“ಮಹಿಳೆಯರ ರಕ್ಷಣೆಗಾಗಿ ಜಸ್ಟೀಸ್ ವರ್ಮಾ ಆಯೋಗದ ಶಿಫಾರಸುಗಳನ್ನು ಯಥಾವತ್ತಾಗಿ ಜಾರಿಗೆ ತರುವಲ್ಲಿ ಆಳುವ ಸರ್ಕಾರಗಳು ವಿಫಲವಾಗಿವೆ. ಆಸಾರಾಮ್ ಬಾಪು, ರಾಮ್ ರಹೀಮ್ ರಂಥಹ ಸ್ವಯಂ ಘೋಷಿತ ದೇವಮಾನವರು ಎಸಗಿದ ಕುಕೃತ್ಯಗಳು ಸಾಬೀತಾಗಿವೆ. ಆದರೆ, ಅವರನ್ನು ಸನ್ನಡತೆಯ ಹೆಸರಿನಲ್ಲಿ ಪೆರೋಲ್ ಮೇಲೆ ಬಿಡುಗಡೆ ಮಾಡಿದ ಸಂಗತಿ, ಬಿಲ್ಕಿಸ್ ಬಾನೂ ಪ್ರಕರಣದಲ್ಲಿ ನಡೆದ ಬೆಳವಣಿಗೆಗಳು ಆಳುವ ಸರ್ಕಾರಗಳು ಮನುವ್ಯಾದಿಯನ್ನು ತಲೆಗೇರಿಸಿಕೊಂಡು, ಮಹಿಳಾ ವಿರೋಧಿಗಳಾಗಿರುವುದಕ್ಕೆ ಸಾಕ್ಷಿಯಾಗಿವೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿಭಟನಾಕಾರರ ಹಕ್ಕೊತ್ತಾಯಗಳು;
- ಮಹಿಳೆಯರ ಮೇಲಿನ ಅಪರಾಧಗಳ ತಡೆಗೆ ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಬೇಕು.
- ಕೋಲ್ಕತ್ತಾ ಪ್ರಕರಣ ಮತ್ತು ಇತರ ಎಲ್ಲ ಪ್ರಕರಣಗಳಲ್ಲಿ ಕಾಲಮಿತಿಯೊಳಗೆ ವಿಚಾರಣೆ ನಡೆಸಿ ಸೂಕ್ತ ಶಿಕ್ಷೆಯಾಗುವಂತೆ ಕ್ರಮ ವಹಿಸಬೇಕು.
- ಉದ್ದೇಶಪೂರ್ವಕವಾಗಿ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನದ ಭಾಗವಾಗಿ ಆತ್ಮಹತ್ಯೆಯ ಬಣ್ಣ ಬಳಿದಿರುವುದು. ಘಟನೆ ನಡೆದ ಸ್ಥಳವನ್ನು ನವೀಕರಣದ ಹೆಸರಿನಲ್ಲಿ ಒಡೆದು ಹಾಕಿರುವುದು – ಸಾಕ್ಷ್ಯ ನಾಶದ ಪ್ರಯತ್ನವೆಂಬ ಅನುಮಾನ ಮೂಡಿಸಿವೆ. ಹೀಗಾಗಿ, ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸಬೇಕು.
- ಸಾಕ್ಷ್ಯ ನಾಶದಂತಹ ಕೃತ್ಯಗಳನ್ನು ಯಾರೇ ಮಾಡಿದ್ದರೂ, ಅವರ ಮೇಲೆ ಕಠಿಣಕ್ರಮ ಕೈಗೊಳ್ಳಬೇಕು. ಪ್ರತಿಭಟನೆಯ ಸ್ಥಳಕ್ಕೆ ಏಕಾಏಕಿ ನುಗ್ಗಿದ ದಾಂಧಲೆಕೋರರು ಯಾರೆಂದು ಪತ್ತೆ ಮಾಡಿ ಶಿಕ್ಷೆ ವಿಧಿಸಬೇಕು.
- ಸಂತ್ಸಸ್ತರನ್ನ ದೂಷಿಸುವುದನ್ನು ಶಿಕ್ಷಾರ್ಹ ಅಪರಾದವೆಂದು ಪರಿಗಣಿಸಬೇಕು. ಜಸ್ಟೀಸ್ ವರ್ಮಾ ಆಯೋಗದ ಶಿಫಾರಸುಗಳನ್ನು ಜಾರಿಗೆ ತರಬೇಕು. ನಿರ್ಭಯಾ ನಿಧಿಯ ಸದ್ಬಳಕೆಯಾಗಬೇಕು.
ಈ ಬಗ್ಗೆ ಈ ದಿನ.ಕಾಮ್ ಜತೆಗೆ ಮಾತನಾಡಿದ ಮಹಾಲಕ್ಷ್ಮೀ, “ಈಗ ಪ್ರತಿಭಟನೆ ಮಾಡುವುದಕ್ಕೆ ಮನಸ್ಸಿಗೆ ತುಂಬಾ ನೋವಾಗತಾ ಇದೆ. ಈ ಹಿಂದೆ ನಿರ್ಭಯಾ ವಿಚಾರದಲ್ಲಿಯೂ ಕೂಡ ವ್ಆಪಕ ಪ್ರತಿಭಟನೆ ಮಾಡಿದ್ದೇವು. ದೇಶದಲ್ಲಿ ಇನ್ನೇನು ರೇಪ್ ನಡೆಯೋದೇ ಇಲ್ವೋ ಏನು ಎಂಬಂತೆ ಪ್ರತಿಭಟನೆಗಳು ನಡೆದವು. ಪ್ರತಿ 20 ನಿಮಿಷಕ್ಕೆ ಒಂದು ಹೆಣ್ಣಿನ ಮೇಲೆ ರೇಪ್ ನಡಿತಾ ಇವೆ. ಗಂಡಸರು ರೇಪ್ ಮಾಡೋಕೆ ನಾವು ಇದೀವಿ ಎಂಬುದನ್ನು ತೋರಿಸ್ತಾ ಇದಾರೆ. ಇದು ಎಷ್ಟರ ಮಟ್ಟಿಗೆ ಸರಿ. ಗಾಂಧಿಜಿ ಅವರು ಈ ಹಿಂದೆ ಹೇಳಿದ್ದ ಮಾತು 78 ವರ್ಷ ಕಳೆದರೂ ಇನ್ನೂ ಕೂಡ ನಡಿದಿಲ್ಲ. ನಮಗೆ ಸ್ವಾತಂತ್ರ್ಯ ಬಂದಿಲ್ಲ. ಹೆಣ್ಣುಮಕ್ಕಳು ಎಂದರೆ ಕೀಳಾಗಿ ನೋಡತಾ ಇದಾರೆ. ಹೆಣ್ಣು ಮಕ್ಕಳು ಹಾಕಿಕೊಳ್ಳುವ ಬಟ್ಟೆ ಬಗ್ಗೆ, ಹೆಣ್ಣು ಮಕ್ಕಳು ಎಷ್ಟು ಸಮಯದಲ್ಲಿ ಓಡಾಡಬೇಕು ಎಂಬುದನ್ನು ಹೇಳತಾರೆ. ಆದರೆ, ಸರ್ಕಾರ ಮಹಿಳೆಗೆ ಯಾವ ರೀತಿ ರಕ್ಷಣೆ ಕೊಡಬೇಕು ಎಂಬುದನ್ನು ಯೋಚಿಸುತ್ತಿಲ್ಲ. ದೇಶದಲ್ಲಿ ಇದೇ ಕೊನೆಯ ರೇಪ್ ಆಗಿರಬೇಕು ಇನ್ನುಮುಂದೆ ಈ ರೀತಿಯ ಘಟನೆಗಳ ನಡಿಯಬಾರದು ಪ್ರಧಾನಿ ಮೋದಿ ಅವರು ಬೇಟಿ ಬಜಾವೋ, ಬೇಟಿ ಪಡಾವೋ ಎಂದೆನ್ನುತ್ತಾರೆ. ಆದರೆ, ಹೆಣ್ಣುಮಕ್ಕಳು ಎಷ್ಟರಮಟ್ಟಿಗೆ ಬಜಾವ್ ಮಾಡತಾ ಇದಾರೆ. ಸದ್ಯ ಆರೋಪಿಯನ್ನು ಕೂಡಲೇ ಬಂಧನ ಮಾಡಿ ಆತನಿಗೆ ಗಲ್ಲು ಶಿಕ್ಷೆ ವಿಧಿಸಬೇಕು” ಎಂದು ಆಕ್ರೋಶ ಹೊರಹಾಕಿದ್ದಾರೆ.
ಸಿಡಬ್ಲುಎಫ್ಐನ ಬೆಂಗಳೂರು ದಕ್ಷಿಣ ಜಿಲ್ಲಾ ಸಮಿತಿಯ ಅಧ್ಯಕ್ಷೆ ಲಕ್ಷ್ಮೀ ಈ ದಿನ.ಕಾಮ್ ಜತೆಗೆ ಮಾತನಾಡಿ, “ಕೋಲ್ಕತ್ತಾದಲ್ಲಿ ನಡೆದ ಘಟನೆ ಅತ್ಯಂತ ದಾರುಣ. ಮಹಿಳೆಯರ ಸುರಕ್ಷತೆ ಇಲ್ಲದೇ, ಮಹಿಳೆಯರಿಗೆ ರಕ್ಷಣೆ ಕೊಡದೆ ಇರುವುದು ರಾಜಕೀಯ ಇಚ್ಛಾಶಕ್ತಿಯ ಕೊರತೆ ಇದೆ. ದಿನಬೆಳಗಾದರೇ, ಈ ಅತ್ಯಾಚಾರ ಘಟನೆಗಳು ಕೇಳಿಬರುತ್ತಲೇ ಇವೆ. ಮಹಿಳೆಯರನ್ನ ಮತದ ಬ್ಯಾಂಕಿಗೆ ಮಾತ್ರ ಬಳಕೆ ಮಾಡವುದನ್ನು ಬಿಡಬೇಕು. ನಿಷ್ಪಕ್ಷಪಾತವಾಗಿ ಈಗ ತನಿಖೆ ನಡೆಯಬೇಕು. ಇದು ಸರ್ಕಾರದ ಜವಾಬ್ದಾರಿ. ಈ ಘಟನೆ ದೇಶದ ಮಹಿಳೆಯರಿಗೆ ಅಸುರಕ್ಷತೆಗೆ ಹಿಡಿದ ಕನ್ನಡಿ. ಭಾಷಣ, ಲೇಖನದ ಮೂಲಕ ರಕ್ಷಣೆ ಕೊಡೋಕೆ ಆಗೋದಿಲ್ಲ. ಸರ್ಕಾರ ಕೂಡಲೇ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು” ಎಂದಿದ್ದಾರೆ.
ಸಿಐಟಿಯು ಕಾರ್ಯದರ್ಶಿ ಮಾಲೀನಿ ಮೆಸ್ತಾ ಈ ದಿನ.ಕಾಮ್ ಜತೆಗೆ ಮಾತನಾಡಿ, “ಕೋಲ್ಕತ್ತಾದಲ್ಲಿ ಕಿರಿಯ ವೈದ್ಯೆ ಮೇಲೆ ನಡೆದ ಘಟನೆ ಉದ್ಯೋಗಸ್ಥ ಮಹಿಳೆಯರು ಉದ್ಯೋಗ ಮಾಡದೇ ಇರುವ ಮಹಿಳೆಯರು ಒಟ್ಟಾರೆಯಾಗಿ ಈ ದೇಶದಲ್ಲಿ ಮಹಿಳೆಯರಿಗೆ ರಕ್ಷಣೆ ಎಲ್ಲಿದೆ. ಭಾಷಣದಲ್ಲಿ ಮಾತ್ರ ಮಹಿಳೆಯರ ಬಗ್ಗೆ ಮಾತಾಡತಾರೆ, ಆದರೆ, ಮಹಿಳೆಗೆ ರಕ್ಷಣೆನೆ ಇಲ್ಲ. ಯಾವುದೇ ಸರ್ಕಾರ ಕೂಡ ಅದನ್ನ ಗಣನೆಗೆ ತೆಗೆದುಕೊಳ್ಳತಾ ಇಲ್ಲ. ಮಹಿಳೆಯರಿಗೆ ಸುರಕ್ಷತೆಯನ್ನು ಕಡ್ಡಾಯವಾಗಿ ತೆಗೆದುಕೊಳ್ಳಬೇಕು” ಎಂದು ಹೇಳಿದ್ದಾರೆ.