ಕಾವೇರಿ ನದಿಯಲ್ಲಿ ಇಳಿದು, ನೀರಿನ ನಡುವೆ ಯೋಗ ಮಾಡುತ್ತಲೇ ಯೋಗಪಟು ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನಲ್ಲಿ ದಾಸನಪುರದಲ್ಲಿ ನಡೆದಿದೆ.
ಮೃತನನ್ನು ಕೊಳ್ಳೇಗಾಲದ ಯೋಗಪಟು ನಾಗರಾಜ್ (78) ಎಂದು ಗುರುತಿಸಲಾಗಿದೆ. ಅವರು ತೀರ್ಥ ಸ್ನಾನ ಮಾಡಲೆಂದು ಕಾವೇರಿ ನದಿಗೆ ಇಳಿದಿದ್ದರು. ನದಿ ನೀರಿನಲ್ಲಿ ತೇಲುತ್ತಲೇ ಯೋಗ ಮಾಡುತ್ತಿದ್ದರು ಎಂದು ಹೇಳಲಾಗಿದೆ.
ನೀರಿನಲ್ಲಿ ಯೋಗ ಮಾಡುತ್ತಿದ್ದ ನಾಜರಾಜ್ ಗಂಟೆಗಳು ಕಳೆದರೂ ನೀರಿನಲ್ಲಿ ತೇಲುತ್ತಿದ್ದರು. ಅವರ ದೇಹದಲ್ಲಿ ಯಾವುದೇ ಚಲನೆ ಇರಲಿಲ್ಲ. ಅನುಮಾನಗೊಂಡ ಸ್ನೇಹಿತರು ಸಮೀಪಕ್ಕೆ ಹೋಗಿ ನೋಡಿದಾಗ, ಅವರು ಮೃತಪಟ್ಟಿರುವುದು ಗೊತ್ತಾಗಿದೆ.
ಸ್ಥಳಕ್ಕೆ ಕೊಳ್ಳೇಗಾಲ ಪೊಲೀಸ್ ಠಾಣೆಯ ಪೊಲೀಸರು ಬಂದು, ಪರಿಶೀಲನೆ ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿದ್ದಾರೆ.
ನಾಗರಾಜ್ ಅವರು ಕಳೆದ 30 ವರ್ಷಗಳಿಂದ ಯೋಗಾಭ್ಯಾಸ ಮಾಡುತ್ತಿದ್ದರು. ಕೊಳ್ಳೇಗಾಲದ ಲಕ್ಷ್ಮಿ ನಾರಾಯಣ ದೇವಾಲಯ ಬೀದಿಯಲ್ಲಿ ವಾಸವಾಗಿದ್ದರು. ಯೋಗಗುರು ಎಂದೇ ಹೆಸರು ಗಳಿಸಿದ್ದರು ಎಂದು ಹೇಳಲಾಗಿದೆ.