ನಕಲಿ ದಾಖಲೆ ಮುಂದಿಟ್ಟುಕೊಂಡು ಕೋರ್ಟಿನಿಂದ ಆದೇಶ ತಂದು ಕೊಲ್ಲೂರಿನ ಕೊರಗ ವಿಧವಾ ಮಹಿಳೆ ಗಂಗೆ ಅವರ ಮನೆಯನ್ನು ಜೆಸಿಬಿ ಮೂಲಕ ನೆಲಸಮ ಮಾಡಿ ಧ್ವಂಸಗೊಳಿಸಿದ ಜಗದಾಂಭಾ ಟ್ರಸ್ಟ್ ವಿರುದ್ಧ ಸೂಕ್ತ ಕ್ರಮಕೊಳ್ಳು ವಂತೆ ಆಗ್ರಹಿಸಿ ಇಂದು ಕರ್ನಾಟಕ ಮತ್ತು ಕೇರಳ ಕೊರಗ ಒಕ್ಕೂಟ ಮತ್ತು ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಉಡುಪಿ ಜಿಲ್ಲಾ ಶಾಖೆ ವತಿಯಿಂದ ಮನವಿ ಸಲ್ಲಿಸಲಾಯಿತು.

ಸಂತ್ರಸ್ತೆ ಮಹಿಳೆ ಗಂಗೆ ಅವರಿಗೆ ಅದೇ ಜಾಗದಲ್ಲಿ ಹಕ್ಕು ಪತ್ರ ನೀಡಿ ಮನೆ ನಿರ್ಮಿಸಿಕೊಡಬೇಕು ಮತ್ತು ಸೂಕ್ತ ಪರಿಹಾರ ಒದಗಿಸಬೇಕು. ದಲಿತ ದೌರ್ಜನ್ಯ ನಿಷೇಧ ಕಾಯ್ದೆ ಅನ್ವಯ ಕೇಸು ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಲಾಯಿತು.
ಮನವಿಗೆ ಸ್ಪಂಧಿಸಿದ ಅಧಿಕಾರಿಯವರು ಇನ್ನೆರಡು ದಿನದೊಳಗೆ ಸೂಕ್ತ ಕ್ರಮಕೈಗೊಳ್ಳುವ ಭರವಸೆ ನೀಡಿದರು.
ನಿಯೋಗದಲ್ಲಿ ಸಂತ್ರಸ್ತೆ ಗಂಗೆ, ಕೊರಗ ಒಕ್ಕೂಟದ ಸುಶೀಲ ನಾಡ, ಪುತ್ರನ್, ಕುಮಾರದಾಸ್, ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕರಾದ ಸುಂದರ ಮಾಸ್ತರ್, ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕರಾದ ಶ್ಯಾಮರಾಜ್ ಬಿರ್ತಿ, ಜಿಲ್ಲಾ ಪ್ರಧಾನ ಸಂಚಾಲಕರಾದ ಮಂಜುನಾಥ ಗಿಳಿಯಾರು, ಸಂಘಟನಾ ಸಂಚಾಲಕರಾದ ಸುರೇಶ ಹಕ್ಲಾಡಿ, ಅಣ್ಣಪ್ಪ ನಕ್ರೆ, ಮಂಜುನಾಥ ನಾಗೂರು, ಗೀತಾ ಸುರೇಶ, ಚೈತ್ರ ಬೈಂದೂರು, ರಾಜು ಬೆಟ್ಟಿನಮನೆ, ಗೋಪಾಲಕೃಷ್ಣ ನಾಡ, ಸಂತ್ರಸ್ತೆಯ ಇಬ್ಬರು ಮಕ್ಕಳು ಉಪಸ್ಥಿತರಿದ್ದರು.