ಅಂಜನಾದ್ರಿ ಬೆಟ್ಟದಲ್ಲಿರುವ ಅಂಜನಾದ್ರಿ ದೇವಾಲಯದ ಕೆಲಸ ಹಾಗೂ ಕಾಮಗಾರಿಗಳು ನಿಗದಿಪಡಿಸಿದ ಸಮಯದಲ್ಲಿ ಮುಗಿಯಬೇಕು. ಯಾವುದೇ ಕಾರಣಕ್ಕೂ ವಿಳಂಬವಾಗಬಾರದು ಎಂದು ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್ ಕೆ ಪಾಟೀಲ್ ಹೇಳಿದರು.
ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಹಾಗೂ ಕೊಪ್ಪಳ ಜಿಲ್ಲಾಡಳಿತದ ಸಹಯೋಗದಲ್ಲಿ ಅಂಜನಾದ್ರಿ ಬೆಟ್ಟದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಂಜನಾದ್ರಿ ಹಾಗೂ ಕೊಪ್ಪಳ ಜಿಲ್ಲೆಯ ಪ್ರವಾಸೋದ್ಯಮ ಇಲಾಖೆಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ಕುರಿತು ನಡೆದ ಅಧಿಕಾರಿಗಳೊಂದಿಗಿನ ಸಭೆಯಲ್ಲಿ ಮಾತನಾಡಿದರು.
“ಅಂಜನಾದ್ರಿ ದೇವಸ್ಥಾನದ ವಸತಿ ಸಮುಚ್ಚಯದ ಕಾಮಗಾರಿಯನ್ನು ಈ ವರ್ಷದ ಡಿಸೆಂಬರ್ ತಿಂಗಳಲ್ಲಿ ಪೂರ್ಣಗೊಳಿಸಬೇಕು. ಶೌಚಾಲಯ ಮತ್ತು ಬಾತ್‌ರೂಂಗಳನ್ನು ಸೌದತ್ತಿ ಯಲ್ಲಮ್ಮನ ಗುಡ್ಡದಲ್ಲಿ ಬಹಳ ಒಳ್ಳೆಯ ರೀತಿಯಲ್ಲಿ ಮಾಡಿದ್ದಾರೆ. ಅದನ್ನು ಒಂದು ಸಲ ನೋಡಿಕೊಂಡುಬಂದು ಅದೇ ರೀತಿ ಇಲ್ಲಿಯೂ ಮಾಡಿ. ಬ್ಯಾಗ್ ಇಡಲು ಕ್ಲಾಕ್ ರೂಮ್‌ಗಳನ್ನೂ ಕೂಡಾ ನಿರ್ಮಿಸಿದ್ದಾರೆ. ಅಂಜನಾದ್ರಿ ಬೆಟ್ಟಕ್ಕೆ ರೋಪ್‌ವೇ, ಕೇಬಲ್ ಕಾರ್ ಮಾಡುವುದರಿಂದ ಇಲ್ಲಿಗೆ ಭೇಟಿ ನೀಡುವ ಜನರಿಗೆ ಅನುಕೂಲವಾಗಲಿದೆ. ಎಸ್ಕಲೇಟರ್ ಮಾಡುವ ಸಲುವಾಗಿ ಒಂದು ವಾರದ ಒಳಗಾಗಿ ಸಮೀಕ್ಷೆ ಎಸ್ಟಿಮೇಟ್ ರೂಪಿಸಲಾಗುತ್ತಿದೆ” ಎಂದರು.
“ಸುಮಾರು 15 ವರ್ಷಗಳಿಂದ ಅಂಜನಾದ್ರಿ ಅಭಿವೃದ್ಧಿ ಕುರಿತು ಚರ್ಚೆಗಳು ನಡೆಯುತ್ತಿದ್ದವು. ಈ ಭಾಗದ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಆಂಜನೇಯ ಸ್ವಾಮಿ ಭಕ್ತರು ಮುಖ್ಯಮಂತ್ರಿಗಳ ಗಮನ ಸೆಳೆದಿದ್ದರಿಂದ 2024-25ನೇ ಸಾಲಿನಲ್ಲಿ ನೂರು ಕೋಟಿ ರೂಪಾಯಿ ಅನುದಾನ ನೀಡಿದ್ದಾರೆ. ಇದರ ಕ್ರಿಯಾ ಯೋಜನೆ ತಯಾರಿಸಿ 600 ಕೊಠಡಿಗಳ ಪ್ರವಾಸಿ ಮಂದಿರ, ಸಮುದಾಯ ಭವನ, ನಿಲುಗಡೆ ಸ್ಥಳ, ಪ್ರದಕ್ಷಣಾ ಪಥ, ಸ್ನಾನ ಘಟ್ಟ, ವಿಐಪಿ ಅತಿಥಿಗೃಹ ಸೇರಿದಂತೆ ಇತರೆ ಕೆಲಸಗಳ ಪ್ರಾಸ್ತಾವಿತ ಯೋಜನೆಗಳನ್ನು ರೂಪಿಸಲಾಗಿದೆ. ಇವುಗಳನ್ನು ನಿಗದಿಪಡಿಸಿದ ಸಮಯದಲ್ಲಿ ಮುಗಿಸಬೇಕು” ಎಂದು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ಎಸ್ ತಂಗಡಗಿ ಮಾತನಾಡಿ, “ಹನುಮ ಮಾಲೆ ಕಾರ್ಯಕ್ರಮಕ್ಕೆ ಲಕ್ಷಾಂತರ ಜನರು ಅಂಜನಾದ್ರಿಗೆ ಬರುತ್ತಾರೆ. ಹಾಗಾಗಿ ಮಾರ್ಗ ಮಧ್ಯದ ಅಲ್ಲಲ್ಲಿ ಸ್ನಾನಗೃಹ ಹಾಗೂ ಶೌಚಾಲಯಗಳನ್ನು ನಿರ್ಮಿಸಬೇಕು. ಆನೆಗುಂದಿ ಹಾಗೂ ಕಡೆ ಬಾಗಿಲಿನಿಂದ ಇವುಗಳನ್ನು ಮಾಡಬೇಕು. ವಿಶೇಷವಾಗಿ ಅಂಜನಾದ್ರಿಗೆ ಭಕ್ತರು ಡಿಸೆಂಬರ್ ಮತ್ತು ಹನುಮ ಜಯಂತಿ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಪ್ರೊ.ಕೃಷ್ಣಪ್ಪನವರ ಸ್ಮಾರಕ ಸೇರಿ ಹಲವು ಬೇಡಿಕೆ ಈಡೇರಿಕೆಗೆ ಹರಿಹರ ದಲಿತ ಸಂಘರ್ಷ ಸಮಿತಿ ಸಿಎಂಗೆ ಮನವಿ
ಸಭೆಯ ನಂತರ ಕೊಪ್ಪಳ ಜಿಲ್ಲೆಯ ಪ್ರವಾಸಿ ತಾಣಗಳ ಕುರಿತ ಬ್ರ್ಯಾಂಡ್ ಕೊಪ್ಪಳ ವೆಬ್‌ಸೈಟ್ ಉದ್ಘಾಟಿಸಿದರು.
ಸಭೆಯಲ್ಲಿ ಕೊಪ್ಪಳ ಸಂಸದ ರಾಜಶೇಖರ ಬಸವರಾಜ ಹಿಟ್ನಾಳ, ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಸಲ್ಮಾ ಫಾಯಿಮಾ, ಆಯುಕ್ತ ರಾಜೇಂದ್ರ ಕೆ ವಿ, ರಾಜವಂಶಸ್ಥರಾದ ಲಲಿತಾ ರಾಣಿ, ಜಿಲ್ಲಾಧಿಕಾರಿ ನಲಿನ್ ಅತುಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್ ಅರಸಿದ್ದಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಕಾವ್ಯಾ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ರೆಡ್ಡಿ ಶ್ರೀನಿವಾಸ, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜ, ಆನೆಗುಂದಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹುಲಿಗೆಮ್ಮ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.