ಮೇ 25, 26ರಂದು ಕೊಪ್ಪಳ ನಗರದ ಹೊಸಪೇಟೆ ರಸ್ತೆಯ ಶಿವಶಾಂತವೀರ ಮಂಗಲ ಭವನದಲ್ಲಿ 10ನೇ ಮೇ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ಪ್ರಗತಿಪರ ಚಿಂತಕ ಹಾಗೂ ಲಡಾಯಿ ಪ್ರಕಾಶನದ ಬಸವರಾಜ್ ಸೂಳಿಬಾವಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರದಂದು ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿ, “ಮೇ ಸಾಹಿತ್ಯ ಮೇಳ ಬಳಗದ 10ನೇ ಸಾಹಿತ್ಯ ಸಮ್ಮೇಳನವು ಈ ಬಾರಿ ಹೈದರಾಬಾದ್ ಕರ್ನಾಟಕದ ವಿಶಿಷ್ಟ ಪರಂಪರೆಗಳ ನೆಲೆವೀಡಾದ ಕೊಪ್ಪಳದಲ್ಲಿ ನಡೆಯಲಿದ್ದು, ಎರಡು ದಿನಗಳ ಕಾಲ ಕಾರ್ಯಕ್ರಮದಲ್ಲಿ ಸಂವಿಧಾನ ಭಾರತ, ಧರ್ಮ ರಾಜಕಾರಣ ಎಂಬ ಮಹತ್ವದ ವಿಷಯದ ಸೂಕ್ತ ಚರ್ಚೆ, ಸಂವಾದ ನಡೆಯಲಿದೆ” ಎಂದು ಹೇಳಿದರು.
“ನಾಡಿನ ಹಲವು ಭಾಗಗಳಿಂದ ಬರುವ ಸಾಹಿತ್ಯಾಸಕ್ತರು, ಸಂವಿಧಾನ ಪ್ರೇಮಿಗಳು, ಸಮಾಜ ಸೌಹಾರ್ಧಕ್ಕೆ ದುಡಿಯುತ್ತಿರುವ ಚೇತನಗಳು, ಜನಪರ ಹೋರಾಟಗಳಲ್ಲಿ ತೊಡಗಿರುವ ಸಂಗಾತಿಗಳು, ಯುವಜನರು ಪಾಲ್ಗೊಳ್ಳಲಿದ್ದಾರೆ. ರಾಜ್ಯ ಮತ್ತು ಹೊರರಾಜ್ಯಗಳ ಸಂಪನ್ಮೂಲ ವ್ಯಕ್ತಿಗಳು ಪಾಲ್ಗೊಳ್ಳುವರು. ಎರಡು ದಿನಗಳ ಮೇಳವನ್ನು ಅರ್ಥಪೂರ್ಣವಾಗಿ ನಡೆಸಲು ನಿಮ್ಮೆಲ್ಲರ ಭಾಗವಹಿಸಿಕೆ ಅತ್ಯಗತ್ಯವಾಗಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಡೊನೇಷನ್ ಹಾವಳಿ ತಡೆಗೆ ದಲಿತ ವಿದ್ಯಾರ್ಥಿ ಪರಿಷತ್ ಆಗ್ರಹ
ಬಂಡಾಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ, “ಮೇ ಸಾಹಿತ್ಯ ಮೇಳದಲ್ಲಿ 25ರಂದು ಬೆಳಿಗ್ಗೆ 10ಕ್ಕೆ ಬಿ ಆರ್ ತುಬಾಕಿ ಮತ್ತು ದೇವಿಂದ್ರಪ್ಪ ಡೊಳ್ಳಿನ ಪುಸ್ತಕ ಮಳಿಗೆ ಉದ್ಘಾಟನೆಯನ್ನು ಬಳ್ಳಾರಿಯ ಸಿ ಚನ್ನಬಸವಣ್ಣ ನೆರವೇರಿಸುವರು, ಮುಖ್ಯ ಅತಿಥಿಗಳಾಗಿ ಹಿರಿಯ ಸಾಹಿತಿಗಳಾದ ಈರಪ್ಪ ಕಂಬಳಿ ರವಿತೇಜ ಅಬ್ಬಿಗೇರಿ ಪಾಲ್ಗೊಳ್ಳುವರು, ನಂತರ ವಿವಿಧ ಗೋಷ್ಠಿಗಳು ಜರುಗುವವು. 26 ರಂದು ಚಳವಳಿ ಮತ್ತು ಧರ್ಮ ರಾಜಕಾರಣ, ವಿವಿಧ ಗೋಷ್ಠಿಗಳ ನಂತರ ಸಮಾರೋಪ, ಪ್ರಶಸ್ತಿ ಪ್ರದಾನ ಜರುಗುತ್ತದೆ” ಎಂದರು.
ಸುದ್ದಿಗೋಷ್ಟಿಯಲ್ಲಿ ಟಿ ರತ್ನಾಕರ್, ಬಸವರಾಜ್ ಶೀಲವಂತರ್, ಡಿ ಎಂ ಬಡಿಗೇರ್, ಶರಣು ಶೆಟ್ಟರ್ ಇದ್ದರು.
