ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕಿನ ಹನ್ನೂರ ಗ್ರಾಮದ ನಿಂಗಪ್ಪ ಸವಣೂರ ಎನ್ನುವ 61 ವರ್ಷದ ವ್ಯಕ್ತಿಯೊಬ್ಬರು 102 ಕೆಜಿ ತೂಕದ ಜೋಳದ ಮೂಟೆ ಬೆನ್ನ ಮೇಲೆ ಹೊತ್ತು ಮಂಗಳವಾರ 575 ಮೆಟ್ಟಿಲುಗಳು ಇರುವ ತಾಲ್ಲೂಕಿನ ಅಂಜನಾದ್ರಿಯ ಬೆಟ್ಟ ಹತ್ತಿ ಗಮನ ಸೆಳೆದರು.
ಬೆಟ್ಟದ ಕೆಳಭಾಗದಲ್ಲಿರುವ ಪಾದಗಟ್ಟೆಗೆ ನಮಸ್ಕರಿಸಿ ಮೂಟೆ ಹೊತ್ತ ನಿಂಗಪ್ಪ ಎಲ್ಲಿಯೂ ನಿಲ್ಲದೇ ಒಂದು ತಾಸು ಎರಡು ನಿಮಿಷದಲ್ಲಿ ಶ್ರೀರಾಮ ಹಾಗೂ ಹನುಮನ ಸ್ಮರಣೆ ಮಾಡುತ್ತ ಬೆಟ್ಟ ಏರಿದರು. ನಂತರ ಜೋಳವನ್ನು ದೇವಸ್ಥಾನಕ್ಕೆ ಅರ್ಪಿಸಿ ದರ್ಶನ ಪಡೆದರು.
ಅತ್ಯಂತ ಸಂಕೀರ್ಣ ಮತ್ತು ಕಡಿದಾದ ದಾರಿ ಹೊಂದಿರುವ ಅಂಜನಾದ್ರಿ ಬೆಟ್ಟವು ನೆಲಮಟ್ಟದಿಂದ 550ಕ್ಕೂ ಹೆಚ್ಚು ಅಡಿ ಎತ್ತರದಲ್ಲಿದೆ. ಈ ಬೆಟ್ಟಕ್ಕೆ ಹತ್ತಲು 575 ಮೆಟ್ಟಿಲುಗಳಿದ್ದು, ಸಾಮಾನ್ಯ ಜನರೇ ಈ ಬೆಟ್ಟ ಹತ್ತಲು ಪ್ರಯಾಸ ಪಡುತ್ತಾರೆ. ಆದರೆ ಹರಕೆ ತೀರಿಸಲು ವ್ಯಕ್ತಿಯೊಬ್ಬರ ಹರಸಾಹಸ ಮಾಡಿದ್ದು ಹುಬ್ಬೇರಿಸುವಂತೆ ಮಾಡಿತು.
ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ನಿಂಗಪ್ಪ ʼಈ ಹಿಂದೆ ಶ್ರೀಶೈಲದಿಂದ ಆಂಜನಾದ್ರಿಗೆ ಬಂದಾಗ ಜೋಳದ ಮೂಟೆ ಹೊತ್ತು ಮುಂದೊಂದು ದಿನ ಬೆಟ್ಟ ಏರುವುದಾಗಿ ಹರಕೆ ಕಟ್ಟಿಕೊಂಡಿದ್ದೆ. ಈಗ ಆ ಬೇಡಿಕೆ ಈಡೇರಿದೆ. ದೇವರು ಆರೋಗ್ಯ ಚೆನ್ನಾಗಿ ಇಟ್ಟಿರುವುದರಿಂದಲೇ ಬೆಟ್ಟ ಏರಲು ಸಾಧ್ಯವಾಗಿದೆʼ ಎಂದು ಹರ್ಷ ವ್ಯಕ್ತಪಡಿಸಿದರು.