ಕೊಪ್ಪಳ | ಕಾರ ಹುಣ್ಣಿಮೆ ಸಂಭ್ರಮ : ರೈತರ ಮೊಗದಲ್ಲಿ ಮಂದಹಾಸ

Date:

Advertisements

ಮುಂಗಾರು ಹಂಗಾಮು ಆರಂಭದ ಮೊದಲ ಹಬ್ಬ ಕಾರ ಹುಣ್ಣಿಮೆ. ರೈತರ ಕೃಷಿ ಕೆಲಸದ ಸ್ನೇಹಿತ ಎನಿಸಿಕೊಳ್ಳುವ ಎತ್ತುಗಳನ್ನು ಪೂಜಿಸುವ ವಿಶಿಷ್ಟ ಹಬ್ಬ ಇದಾಗಿದೆ.

ಅಂದು ಬೆಳಿಗ್ಗೆಯಿಂದಲೇ ಎತ್ತುಗಳಿಗೆ ಮೈತೊಳೆದು, ಬಣ್ಣಗಳಿಂದ ಶೃಂಗರಿಸುವ ಕಾರ್ಯ ಭರದಿಂದ ನಡೆಯುತ್ತದೆ. ಕೊಪ್ಪಳ ಜಿಲ್ಲೆಯ ಕುಕುನೂರು ಸೇರಿದಂತೆ ವಿವಿಧ ಹಳ್ಳಿಗಳಲ್ಲಿ ನಿನ್ನೆ ಮಂಗಳವಾರ ಕಾರ ಹುಣ್ಣಿಮೆ ಹಬ್ಬ ಸಡಗರ ಸಂಭ್ರಮದಿಂದ ಆಚರಿಸಿದರು.

ಭಾರತ ಹಬ್ಬಗಳ ದೇಶ. ಇಲ್ಲಿ ಧಾರ್ಮಿಕ, ವೈಜ್ಞಾನಿಕ ಹಿನ್ನೆಲೆಯಲ್ಲಿ ಬಹುತೇಕ ಹಬ್ಬಗಳನ್ನು ಆಚರಿಸಲಾಗುತ್ತದೆ. ಈ ಜೇಷ್ಟ ಮಾಸದಲ್ಲಿ ಬರುವ ಕಾರ ಹುಣ್ಣಿಮೆ ಮುಂಗಾರು ಮಳೆಯ ಆಗಮನದ ಮೊದಲ ಹಬ್ಬ ಎನ್ನಲಾಗುತ್ತದೆ.

Advertisements

ರಾಸುಗಳಿಗೆ ಕರಿ ಕಂಬಳಿ ಸುಟ್ಟ ಕರಕಲು ಪುಡಿ, ಒರಳಲ್ಲಿಯೋ, ದೊಡ್ಡ ದುಂಡಿಯಲ್ಲೊ, ಜಜ್ಜಿ ಕುಟ್ಟಿ ಪಡಿ ಮಾಡಿದ ಅರಿಷಣದಿಂದ ನಾಲಿಗೆ ತಿಕ್ಕಿ ತುಪ್ಪ,‌ ಮಜ್ಜಿಗೆ ಹಾಗೂ ‌ಲೋಳೆ ಸರ ಮಿಶ್ರಣ ಮಾಡಿ ಹಾಗೂ ಮೊಟ್ಟೆಗಳನ್ನು ಕುಡಿಸುತ್ತಾರೆ.

ಹಳ್ಳ, ಕೆರೆಗಳಲ್ಲಿ ಜಾನುವಾರುಗಳ ಮೈವುಜ್ಜಿ ತೊಳೆದು, ರಂಗೂಲ್‌ದಿಂದ ಕೋಡ ಸಿಂಗರಿಸಿ, ಕೊಂಬಿಗೆ ಬಣ್ಣ ಹಚ್ಚುತ್ತಾರೆ. ರಾಸುಗಳ ಮೇಲೆ ಜೂಲ್ ಹಾಕಿ ಅಲಂಕರಿಸುತ್ತಾರೆ. ಈ ಅಲಂಕಾರ ಮಾಡುವುದರಿಂದ ರೈತನ ಮುಖದಲ್ಲಿ ಮಂದಹಾಸ ಆ ಕಳೆ, ಹುಮ್ಮಸ್ಸು ಜಾನುವಾರುಗಳನ್ನು ಸಿಂಗರಿಸಲು ತೊಡಗಿರುವ ಏಕಾಂತತೆ ವರ್ಣಿಸಲು ಅಸಾಧ್ಯ.

ರೈತರೇ ಹೆಚ್ಚಾಗಿ ಆಚರಿಸುವ ಕೃಷಿ ಹಬ್ಬಗಳಲ್ಲಿ ಕಾರ‌‌ ಹುಣ್ಣಿಮೆ ಕೂಡ ಒಂದು. ಹೀಗಾಗಿ ಈ ಹಬ್ಬವನ್ನು ರೈತ ಅತ್ಯಂತ ಖುಷಿಯಿಂದ ಸಂಭ್ರಮಿಸುತ್ತಾನೆ. ರೈತರು ತಮ್ಮ ಎತ್ತು ಹಾಗೂ ಹೋರಿಗಳ ಮೈ ತೊಳೆದು, ಬಣ್ಣ ಹಚ್ಚಿ ಸಿಂಗಾರಗೊಳಿಸಿ ಕರಿ ಹರಿಯುವ ದೃಶ್ಯ ರೈತಾಪಿ ವರ್ಗದವರಿಗೆ ರೋಮಾಂಚನವಾಗುತ್ತದೆ.

ಸಂಜೆ 4 ಗಂಟೆಯ ಸುಮಾರಿಗೆ ರೈತ ತನ್ನ ಸಂಗಾತಿಗಳಾದ ಎತ್ತುಗಳಿಗೆ ಅಲಂಕೃತಗೊಳಿಸಿ ಹೋರಿ ಹಾಗೂ ಎತ್ತುಗಳಿದ್ದರೆ ಸುತ್ತೂರಿನಲ್ಲಿ ‘ತನ್ನಂತ ಎತ್ತು ಯಾರೂ ತಂದಿಲ್ಲ’ ಎಂಬ ಅಹಮಿಕೆಯಲ್ಲಿ ಎರಡೂ ಕಡೆ ಅವುಗಳ ಮೂಗುದಾರಕ್ಕೆ ಕಣ್ಣಿ ಹಚ್ಚಿ ದೇವರ ಗುಡಿ ಸುತ್ತಿಸುತ್ತಾರೆ. ಕರಿ ಹರಿಯಲು ಅವುಗಳನ್ನು ಓಡಿಸಲು ಕಾರ್ಯಕ್ರಮ ನಡೆಯುತ್ತದೆ.

ಕೊರಳಲ್ಲಿ ಅರ್ಧ ಒಣ ಅಥವಾ ಹಸಿ ಕೊಬ್ಬರಿ ಬೇವಿನ ತಪ್ಪಲ ಮರೆಯಲ್ಲಿ ಕಟ್ಟುತ್ತಾರೆ. ಕೆಲವರು ಹಾಗೂ ಕೆಲವು ಗ್ರಾಮಗಳಲ್ಲಿ ನೋಟುಗಳನ್ನು ಕಟ್ಟುತ್ತಾರೆ. ಬಂಗಾರದ ಉಂಗುರ ಕಟ್ಟಿರುವ ಉದಾಹರಣೆ ಕೂಡ ಇದೆ. ಗ್ರಾಮದ ಹಿರಿಯರು ಗುರುತಿಸಿದ ಜಾಗದಲ್ಲಿ ಎತ್ತುಗಳನ್ನು ಓಡಲು ಬಿಡುತ್ತಾರೆ. ಕೆಲವು ಕಡೆ ಬಿಳಿ ಹಾಗೂ ಕಂದು ಬಣ್ಣದ ಎತ್ತುಗಳನ್ನು ವಿಶೇಷವಾಗಿ ಕರಿ ಹರಿಯಲು ಬಿಡುತ್ತಾರೆ. ಜನರನ್ನು ಬೇಧಿಸಿ ಕರಿ ಕೊಡದೆ ತಪ್ಪಿಸಿಕೊಂಡು‌ ಓಡಿ ಕರಗಲ್ ಅಥವಾ ಬ್ರಹ್ಮಗಲ್ ದಾಟಿ ಬಂದರೆ ಅದು ವಿಜಯಶಾಲಿ ಎಂಬುದು ಪ್ರತೀತಿ.

ಯಾವ ಬಣ್ಣದ ಎತ್ತು ಮೊದಲು ಕರಗಲ್ ಮುಟ್ಟುತ್ತದೆಯೋ ಅದೇ ಬಣ್ಣದ ಬೆಳೆಗಳು ಚೆನ್ನಾಗಿ ಬೆಳೆಯುತ್ತದೆ ಎನ್ನುವುದು ರೈತರ ನಂಬಿಕೆ. ಬಿಳಿ ಮತ್ತು ಕಂದು ಬಣ್ಣದ ಎತ್ತುಗಳು ಮೊದಲು ಕರಗಲ್ ತಲುಪಿದ್ದರೆ ಜೋಳ ಹಾಗೂ ಗೋದಿ ಫಸಲು ಚೆನ್ನಾಗಿ ಬರುತ್ತದೆ ಎಂದು ರೈತರು ಅಭಿಪ್ರಾಯಪಡುತ್ತಾರೆ. ಕರಿ ಹರಿದ ತಂದ ಎತ್ತುಗಳನ್ನು ಸಂಜೆ ವೇಳೆ ಗ್ರಾಮದಲ್ಲಿ ಭರ್ಜರಿ ಮೆರವಣಿಗೆ ಮಾಡಿ ಮನೆ ಮಂದಿಯೆಲ್ಲ ಸಂಭ್ರಮ ಪಡುತ್ತಾರೆ.

ಹಳ್ಳಿಗಳಲ್ಲಿ ಕಳೆಗುಂದುತ್ತಿರುವ ಆಚರಣೆ :

ಎತ್ತುಗಳನ್ನು ಕರಿ ಹರಿಯಲು ಬಿಡುವ ಆಚರಣೆ ಇತ್ತೀಚೆಗೆ ಮಾಯವಾಗುತ್ತಿದೆ. ಇದಕ್ಕೆ ಮೂಲ ಕಾರಣ ರೈತರು ಇಂದಿನ ತಂತ್ರಜ್ಞಾನದ ಬಳಕೆಗೆ ಒಗ್ಗಿರುವುದು. ಇದೊಂದು ಪ್ರಾದೇಶಿಕ ಕ್ರೀಡೆಯಾಗಿ ಮನರಂಜನೆಗೆ ಹಿಂದಿನಿಂದಲೂ ಆಚರಿಸಿಕೊಂಡು ಬರಲಾಗುತ್ತಿದೆ. ಆಧುನಿಕ ತಂತ್ರಜ್ಞಾನ ಹೆಚ್ಚು ಬಳಸುತ್ತಿರುವುದರಿಂದ ಹಾಗೂ ಅನುಸರಿಸುತ್ತಿರುವುದರಿಂದ ಎತ್ತುಗಳ ಕೊರತೆ ಎದ್ದು ಕಾಣುತ್ತಿದೆ.

ಪ್ರತಿವರ್ಷ ಎತ್ತುಗಳ ಸಂಖ್ಯೆ ಇಳಿಮುಖವಾಗುತ್ತಿದ್ದು, ಈ ಮಧ್ಯೆ ಈ ಬಾರಿಯೂ ಕರಿಹಿರಯುವ ಸಂಪ್ರದಾಯಕ್ಕೆ ಬೇಕಾಗುವ ಎತ್ತುಗಳ ಕೊರತೆ ಕಂಡುಬರುತ್ತಿದೆ. ಬೇರೆ-ಬೇರೆ ಸ್ಥಳಗಳಲ್ಲಿರುವ ಎತ್ತುಗಳನ್ನು ತಂದು ಆಚರಣೆ ಮಾಡಲಾಗುತ್ತಿದೆ. ಹುಣ್ಣಿಮೆಯ ನಿಮಿತ್ತ ವಿವಿಧ ಗ್ರಾಮಗಳಲ್ಲಿ ದೈಹಿಕ ಕಸರತ್ತಿನ ಸ್ಪರ್ಧೆಗಳನ್ನು ಏರ್ಪಡಿಸಲಾಗುತ್ತದೆ. ಯುವಕರು ಭಾರಿ ತೂಕದ ಕಲ್ಲುಗಳನ್ನು ಒಂದೇ ಕೈಯಿಂದ ಎತ್ತುವ ಸಾಹಸ ಪ್ರದರ್ಶಿಸುವ ಮುಖಾಂತರ ಹಬ್ಬವನ್ನು ಸಡಗರದಿಂದ ಆಚರಿಸುತ್ತಾರೆ.

ʼಕಾರ ಹುಣ್ಣಿಮೆ ರೈತರ ಹಬ್ಬ. ಇತ್ತೀಚೆಗೆ ಕೃಷಿ ಚಟುವಟಿಕೆಗಳಿಗೆ ಯಂತ್ರಗಳ ಬಳಕೆ ಹೆಚ್ಚಾಗಿದ್ದರಿಂದ‌ ದನಗಳು ಮಾಯ ಆಗೈವರಿ. ಎಡಿ ಹೊಡಿಯಕ ಎತ್ತು ಸಿಗಲ್ಲ. ಮನಿಯಾಗಿನ ಗೊದ್ಲಿ ಮಾಯ ಆಗಕತ್ತೆವು. ಎಲ್ಲವೂ ಮಿಷನ್ನಿನದ್ಲೆ ಕೆಲಸ ಹಂಗಾಗಿ ಈಗೀಗ ಕರಿ ಬಿಡೊದು‌ ಸ್ವಲ್ಪ‌ ಕಡಿಮಿ ಆಗಕತ್ಯಾತಿ ಅನ್ಸತೈತ್ರಿʼ ಎಂದು ರೈತ ಗವಿಸಿದ್ದಪ್ಪ ಪುಟಗಿ ಹೇಳುತ್ತಾರೆ.

ಇದನ್ನೂ ಓದಿ : ಕಾರ ಹುಣ್ಣಿಮೆ‌ ಸಂಭ್ರಮ : ಎತ್ತಿನ ಮೈಮೇಲೆ ʼಜೈ ಆರ್‌ಸಿಬಿʼ ಬಣ್ಣ ಬರೆದು ಅಭಿಮಾನ ತೋರಿದ ರೈತ

ರೈತ ಯೋಗೇಶ ಅಳವಂಡಿ ಮಾತನಾಡಿ, ‘ಪ್ರತಿ ವರ್ಷವೂ ಕರಿ ಹರಿಯುವ ಈ ಕಾರ ಹುಣ್ಣಿಮೆ ಬಹಳ ಅದ್ಧೂರಿಯಾಗಿ ನಡೆಯುತ್ತದೆ. ಯಾವ ಹೋರಿ ಕರಿ ಹರಿದು ತರ‌್ತಾವೋ ಅವುಗಳನ್ನ ಊರ ತುಂಬ ಮೇರವಣಿಗೆ ಮಾಡುತ್ತೇವೆ. ಮನೆಗೆ ಬಂದ ನಂತರ ಕರಿ ಹರದ ತಂದ ಎತ್ತು ಹಾಗೂ ಹೋರಿಗಳನ್ನ ಆರತಿ ಬೆಳಗಿ ಪೂಜೆ ಮಾಡಿ ಒಳಗ ಕರಕೊಳ್ಳುತ್ತೇವೆ. ಆ ಸಂಭ್ರಮಕ್ಕ ಮನೆಯವರೆಲ್ಲ‌‌ ಸಿಹಿ ಮಾಡಿ ಊಟ ಮಾಡ್ತೇವೆ’ ಎಂದು ಖುಷಿ ಹಂಚಿಕೊಂಡರು.

WhatsApp Image 2025 02 05 at 18.09.20 2
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಕಲೇಶಪುರ | ವ್ಯಸನಮುಕ್ತ ರಾಜ್ಯ ಆಂದೋಲನಕ್ಕೆ ಸರ್ಕಾರ ಸಂಪೂರ್ಣ ಬೆಂಬಲ ನೀಡಬೇಕು: ಬಿ ಆರ್‌ ಪಾಟೀಲ್

ವ್ಯಸನಮುಕ್ತ ರಾಜ್ಯ ಆಂದೋಲನಕ್ಕೆ ಸರ್ಕಾರ ಸಂಪೂರ್ಣವಾಗಿ ಬೆಂಬಲ ನೀಡಿದಾಗ ಮಾತ್ರ ವ್ಯಸನವನ್ನು...

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

ಶಿವಮೊಗ್ಗ | ಮತ್ತೆ ಸದ್ದು ಮಾಡುತ್ತಿದೆ ವಾಹನಗಳ ಕರ್ಕಶ ಸೈಲೆಂಸರ್ ; ಕ್ರಮ ಕೈಗೊಳ್ಳುವರೆ ಟ್ರಾಫಿಕ್ ಪೊಲೀಸ್?

ಶಿವಮೊಗ್ಗ ನಗರದಲ್ಲಿ ಕೆಲವು ತಿಂಗಳು ಹಿಂದೆ ಸೈಲೆಂಟ್ ಆಗಿದ್ದ ಸೈಲೆಂಸರ್ ಕರ್ಕಶ...

ಕೋಲಾರ | ಎಫ್ಆರ್‌ಎಸ್ ನಿಲ್ಲಿಸುವಂತೆ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

ಅಂಗನವಾಡಿ ಕಾರ್ಯಕರ್ತೆಯರ ಮುಖಚರ್ಯೆ ಗುರುತಿಸುವ ಕ್ರಮಕ್ಕೆ (ಎಫ್ಆರ್‌ಎಸ್) ತಡೆ ಹಾಗೂ ಐಸಿಡಿಎಸ್...

Download Eedina App Android / iOS

X