ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ ಎಸಗಿರುವ ಕಿಡಿಗೇಡಿಗಳಿಗೆ ಗಲ್ಲುಶಿಕ್ಷೆ ವಿಧಿಸಬೇಕು. ಇಲ್ಲವೇ ಅವರನ್ನು ಗಡಿಪಾರು ಮಾಡಬೇಕು ಎಂದು ಬಿಜೆಪಿ ವಕ್ತಾರ ವೀರಣ್ಣ ಹುಬ್ಬಳ್ಳಿ ಆಕ್ರೋಶ ವ್ಯಕ್ತಪಡಿಸಿದರು.
ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಕವಳಕೇರಿ ಗ್ರಾಮದಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಅಪಮಾನ ಎಸಗಿರುವ ಘಟನೆ ಕುರಿತು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾರತೀಯ ಜನತಾ ಪಕ್ಷದಿಂದ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು.
“ದಾನಗಳಲ್ಲಿ ಶ್ರೇಷ್ಠವಾದ ದಾನವಾಗಿರುವ ಸಂವಿಧಾನವನ್ನು ರಚನೆ ಮಾಡಿ, ದೇಶದ ಭಾರತ ಮಾತೆಯ ಮಡಿಲಿಗೆ ಸಮರ್ಪಿಸಿದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಅನರ್ಘ್ಯ ರತ್ನ. ಅಂತಹ ಮಾನವತಾವಾದಿ ಬೀದಿ ದೀಪದ ಬೆಳಕಿನಲ್ಲಿ ಕೂತು ಓದಿ ದೇಶಕ್ಕೆ ಸಂವಿಧಾನವನ್ನು ನೀಡಿದಂತಹ ಮಹಾನ್ ವ್ಯಕ್ತಿಯನ್ನು ನಾವು ಎಂದೂ ಮರೆಯುವಂತಿಲ್ಲ. ಯಾವ ಕಾಲಕ್ಕೂ ಮರೆಯುವಂತಿಲ್ಲ. ಮರೆತರೆ ಯೋಗ್ಯವೂ ಅಲ್ಲ” ಎಂದು ಹೇಳಿದರು.
“ಇತಿಹಾಸದ ಮೆಲಕು ಹಾಕುವಾಗ ಹಿಂದಿನ ದಿನಮಾನಗಳಲ್ಲಿ ಬಸವಣ್ಣನವರ ಕಾಲದಲ್ಲಿಯೂ ಕೂಡ ಇಂಥ ಘಟನೆಗಳನ್ನು ಮಾಡಿದಂತಹ ಚಂಡಾಳ, ಚೋರರು ಇದ್ದಾರೆಯೇ ಎನಿಸುತ್ತದೆ. ಹಿಂದೆ ಬಸವಣ್ಣನವರನ್ನೂ ಕೂಡ ಆನೆಯ ಕಾಲಿಗೆ ಕಟ್ಟಿ ತುಳಿಸಬೇಕೆಂಬ ಹುನ್ನಾರ ನಡೆಸುತ್ತಿದ್ದರು. ಆದರೆ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಕಲ್ಲೂರು ಗ್ರಾಮದ ಮಲ್ಲ ಬೊಮ್ಮರು ಎನ್ನುವಂತಹವರು ಬಿಜ್ಜಳ ರಾಜನನ್ನು ಸಂಹಾರ ಮಾಡಿದರು. ಕ್ರಾಂತಿಗೆ ಮತ್ತು ಶಾಂತಿಗೆ ರಾಜ್ಯದಲ್ಲಿಯೇ, ಜಿಲ್ಲೆಯಲ್ಲಿ ಯಾವುದಾದರೂ ತಾಲೂಕು ಇದೆ ಎಂದರೆ ಅದು ಯಲಬುರ್ಗಾ ತಾಲೂಕು ಶಾಂತಿಯ ತವರೂರಿನ ತೋಟವೆಂದು ಕಂಗೊಳಿಸುತ್ತಿದೆ. ಇಂತಹ ತೋಟದ ಮನೆಯಲ್ಲಿಯೇ ಕೆಲವೊಂದಿಷ್ಟು ಕಿಡಿಗೇಡಿಗಳು ಇಂತಹ ಕೃತ್ಯವನ್ನು ಎಸಗಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇಲಾಖೆಯ ಅಧಿಕಾರಿಗಳು ಇಂತಹವರನ್ನು ಗಲ್ಲುಶಿಕ್ಷೆಗೆ ಒಳಪಡಿಸಬೇಕು ಅಥವಾ ಗಡಿಪಾರು ಮಾಡಬೇಕು ಎಂಬುದು ಭಾರತೀಯ ಜನತಾ ಪಕ್ಷದ ಆಶಯವಾಗಿದೆ. ಒಟ್ಟಾರೆಯಾಗಿ ಸರಿ ಸಮಾನವಾಗಿ ಜೀವಿಸಲು ದಾರಿದೀಪವಾದ ಡಾ. ಬಿ ಆರ್ ಅಂಬೇಡ್ಕರ್ ಅವರಿಗೆ ಆದ ಅಪಮಾನ ನಮ್ಮ ತಾಯಿಯವರಿಗೆ ಆದರೆ ಸುಮ್ಮನೆ ಇರುತ್ತಿದ್ದೇವೆನು?. ಯಾವುದೇ ರಾಜಕೀಯ ಪಕ್ಷಗಳು ಇಂತಹ ನೀಚ ಕೃತ್ಯ ಎಸಗಿದ ಚಂಡಾಳರಿಗೆ ರಾಜಕೀಯ ಬೇಳೆಯನ್ನು ಬೇಯಿಸಿಕೊಳ್ಳದೆ ಬೆಂಬಲಿಸದೆ ಚಂಡಾಳರಿಗೆ ತಕ್ಕ ಶಿಕ್ಷೆ ನೀಡುವಲ್ಲಿ ಸಹಕರಿಸಬೇಕು” ಎಂದು ಹೇಳಿದರು.
ಮಾರುತಿ ಗವರಾಳ ಕುಕುನೂರು ತಾಲೂಕು ಭಾರತೀಯ ಜನತಾ ಪಕ್ಷದ ವಕ್ತಾರರು ಮಾತನಾಡಿ, “ಕವಳಕೇರಿ ಗ್ರಾಮದಲ್ಲಿ ದುಷ್ಕರ್ಮಿಗಳಿಂದ ಡಾ. ಅಂಬೇಡ್ಕರ್ ಅವರ ನಾಮಫಲಕಕ್ಕೆ ಚಪ್ಪಲಿ ಹಾರ ಹಾಕಿ ಅವಮಾನಗೊಳಿಸಿದ ಘಟನೆಯಿಂದಾಗಿ 140 ಕೋಟಿ ಮಂದಿ ತಲೆ ತಗ್ಗಿಸುವಂತಹ, ತಲೆಬಾಗಿಸುವಂತಹ ಕೆಲಸ ನಡೆದಿದೆ. ನಮ್ಮ ತಾಲೂಕಿನಲ್ಲಿ ಈವರೆಗೂ ನಡೆದಿಲ್ಲ. ಅಂತಹದರಲ್ಲಿ ಇವತ್ತಿನ ದಿನಮಾನದಲ್ಲಿ ಅವಮಾನ ಮಾಡಿರುವುದನ್ನು ನೋಡಿದರೆ ಬಹಳ ನೋವುಂಟಾಗುತ್ತದೆ. ಇಲ್ಲಿ ದಲಿತರು ಜಾತಿ ಮತ ಪಂಥ ಎನ್ನದೆ ಇಡೀ ಮಾನವ ಕುಲಕ್ಕೆ ಸಂವಿಧಾನವನ್ನು ನೀಡಿದ ಮಹಾನ್ ವ್ಯಕ್ತಿಗೆ ಅವಮಾನಿಸುತ್ತಾರೆ ಎಂದರೆ ಅಂತಹ ವ್ಯಕ್ತಿಗಳಿಗೆ ಯಾವ ರೀತಿಯಾದ ಶಿಕ್ಷೆಯನ್ನು ನೀಡಬೇಕು ಇಂಥವರಿಗೆ ಉಗ್ರ ಕಠಿಣ ಶಿಕ್ಷೆ ಅಥವಾ ಗಡಿಪಾರು ಮಾಡಬೇಕು. ಮುಂದಿನ ಜನಾಂಗಕ್ಕೆ ಶಿಕ್ಷೆ ವಿಧಿಸುವುದರಿಂದ ಇಂತಹ ದುರ್ಘಟನೆಗಳು ನಡೆಯದ ಹಾಗೆ ಮಾದರಿಯಾಗಬೇಕಾಗಿದೆ. ನಾವು ಎಲ್ಲರೂ ತಾಲೂಕಿನಲ್ಲಿ ಸಹೋದರತ್ವ ಮನೋಭಾವನೆಯಿಂದ ಹೊಂದಿಕೊಂಡು ನಡೆಯುತ್ತಿದ್ದು, ಪೊಲೀಸ್ ಸುವ್ಯವಸ್ಥೆಯಲ್ಲಿ ನ್ಯಾಯ ದೊರಕಿಸಿ ಕೊಡಬೇಕು. ಇಲ್ಲವಾದಲ್ಲಿ ಮುಂದಿನ ದಿನಮಾನಗಳಲ್ಲಿ ತೀವ್ರ ಹೋರಾಟ ಮಾಡಲಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ವಿವಿಧ ಬೇಡಿಕೆಗೆ ಅಗ್ರಹಿಸಿ ಆಟೋ ಚಾಲಕ ಒಕ್ಕೂಟದ ಅಧ್ಯಕ್ಷ ಕಿರಣ್ ನೇತೃತ್ವದಲ್ಲಿ ಜಂಟಿ ಸಾರಿಗೆ ಆಯುಕ್ತರ ಭೇಟಿ
ಭಾರತೀಯ ಜನತಾ ಪಕ್ಷದ ಎಸ್ ಸಿ ಘಟಕದ ಸಿದ್ದು ಮಣ್ಣಿನವರ್ ಮಾತನಾಡಿ, “ಕವಳಕೇರಿಯಲ್ಲಿ ನಡೆದ ಘಟನೆಯಿಂದ ಸಮಾಜವೇ ತಲೆತಗ್ಗಿಸುವಂತಹ ದುರ್ಘಟನೆಯಾಗಿದೆ. ಕೊಪ್ಪಳ ಇತಿಹಾಸದಲ್ಲಿ ಇಂತಹ ಘಟನೆ ತುಂಬಾ ನೋವುಂಟಾಗುತ್ತದೆ. ಭಾರತದಲ್ಲಿ ನಾವು ಸ್ವಾತಂತ್ರ್ಯದಿಂದ ಖುಷಿಯಿಂದ ಬದುಕಲು ಅಂಬೇಡ್ಕರ್ ಅವರೇ ಕೊಟ್ಟ ಸಂವಿಧಾನ ಅಂತಹ ಮಹಾನ್ ನಾಯಕರಿಗೆ ಕಿಡಿಗೇಡಿಗಳು ಅಗೌರವ ತೋರಿಸಿರುವುದನ್ನು ನೋಡಿದರೆ ತುಂಬಾ ನೋವು ಎನಿಸುತ್ತದೆ. ಅಂತಹ ಅಗೌರವ ತೋರಿದಂತಹ ವ್ಯಕ್ತಿಗಳಿಗೆ ಕಾನೂನಿನ ಚೌಕಟ್ಟಿನಲ್ಲಿ ಯಾವುದೇ ಮುಲಾಜಿಲ್ಲದೆ ಕಠಿಣ ಶಿಕ್ಷೆ ನೀಡಬೇಕು” ಎಂದರು.
ಅಯ್ಯನಗೌಡ್ರ್ ಕೆಂಚಮ್ಮನವರ್, ಶಿವಕುಮಾರ ನಾಗಲಾಪುರಮಠ, ಜಗದೀಶ್ ಸೋಡಿ, ಬಾಲರಾಜ ಗಾಳಿ, ಸಿದ್ದು ಉಳ್ಳಾಗಡ್ಡಿ, ಜಗನ್ನಾಥ ಬೋವಿ, ಮಹಾಂತೇಶ ಹೂಗಾರ, ಮಂಜುನಾಥ ಮಾಲಗಿತ್ತಿ, ಮಹೇಶ ಕಲ್ಮಠ, ಬಸವನಗೌಡ್ರು ತೊಂಡೆಹಾಳ, ಸಾಧಿಕ ಪಾಷ ಕಾಜಿ, ಭಾರತೀಯ ಜನತಾ ಪಕ್ಷದ ಇತರರು ಇದ್ದರು.