ಕೊಪ್ಪಳ ಜಿಲ್ಲಾ ಪೊಲೀಸ್ ವತಿಯಿಂದ ಜಿಲ್ಲೆಯ ನಾಗರಿಕರಿಗೆ ಪ್ರಸಕ್ತ 2025ನೇ ಸಾಲಿನ ಅವಧಿಗಾಗಿ ನಾಗರಿಕ ಬಂದೂಕು ತರಬೇತಿಯನ್ನು ಹಮ್ಮಿಕೊಳ್ಳಲಾಗಿದ್ದು, ಆಸಕ್ತ ನಾಗರಿಕರಿಂದ ಅರ್ಜಿ ಆಹ್ವಾನಿಸಲಾಗಿದೆ.
ಜಿಲ್ಲಾ ಪೊಲೀಸ್ ಪರೇಡ್ ಮೈದಾನದಲ್ಲಿ ಜೂನ್ 26 ರಿಂದ 29 ರವರೆಗೆ ನಾಲ್ಕು ದಿನಗಳ ಕಾಲ ಬೆಳಗ್ಗೆ 7 ಗಂಟೆಯಿಂದ 9 ಗಂಟೆಯವರೆಗೆ ನಾಗರಿಕ ಬಂದೂಕು ತರಬೇತಿಯನ್ನು ನೀಡಲಾಗುತ್ತದೆ. ಜೂನ್ 26 ರಿಂದ 28 ರವರೆಗೆ 3 ದಿನಗಳು ಬಂದೂಕು ತರಬೇತಿಯನ್ನು ನೀಡಿ, ಜೂನ್ 29 ರಂದು ಗುರಿ ಅಭ್ಯಾಸ ಮಾಡಿಸಲಾಗುವುದು.
ನಾಗರಿಕ ಬಂದೂಕು ತರಬೇತಿಯನ್ನು ಪಡೆಯಲು ಇಚ್ಛಿಸುವ ಜಿಲ್ಲೆಯ ಆಸಕ್ತ ನಾಗರಿಕರು ಜೂನ್ 12 ರಿಂದ 22 ರವರೆಗೆ ತಮ್ಮ ವ್ಯಾಪ್ತಿಯ ಪೊಲೀಸ್ ಠಾಣೆಗಳಲ್ಲಿ ಅರ್ಜಿಗಳನ್ನು ಪಡೆದು, ಭರ್ತಿ ಮಾಡಿ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ವಿದ್ಯಾರ್ಹತೆಯ ಪ್ರಮಾಣ ಪತ್ರಗಳ ಜೆರಾಕ್ಸ್ ಪ್ರತಿಗಳು, ವೈದ್ಯಕೀಯ ಸದೃಢ ಪ್ರಮಾಣ ಪತ್ರ, ವಾಸಸ್ಥಳ ಪ್ರಮಾಣ ಪತ್ರ ಹಾಗೂ 3 ಭಾವಚಿತ್ರಗಳೊಂದಿಗೆ ಸಲ್ಲಿಸಬೇಕು.
21 ವರ್ಷ ಮೇಲ್ಪಟ್ಟ ನಾಗರಿಕರಿಗೆ ಮಾತ್ರ ತರಬೇತಿ ನೀಡಲಾಗುವುದು. ತರಬೇತಿಯಲ್ಲಿ ಭಾಗವಹಿಸುವ ನಾಗರಿಕರು ನಿಯಮಿತವಾಗಿ ತರಬೇತಿಗೆ ಹಾಜರಾಗಬೇಕು ಹಾಗೂ ಶಿಸ್ತು ಪಾಲನೆ ಮಾಡಬೇಕು. ತರಬೇತಿಯಲ್ಲಿ ಅಶಿಸ್ತು ಕಂಡುಬಂದಲ್ಲಿ ಅಂತವರನ್ನು ತರಬೇತಿಯಿಂದ ವಜಾ ಮಾಡಲಾಗುವುದು.
ಇದನ್ನೂ ಓದಿ: ಕೊಪ್ಪಳ | ಸಾವಯವ ಕೃಷಿ ಪದ್ಧತಿ ಲಾಭದಾಯಕ: ಜಿಲ್ಲಾಧಿಕಾರಿ ನಳಿನ್ ಅತುಲ್
ತರಬೇತಿಗೆ ಹಾಜರಾಗುವ ಮಹಿಳಾ ಅಭ್ಯರ್ಥಿಗಳು ಕಡ್ಡಾಯವಾಗಿ ಬಿಳಿ ಚೂಡಿದಾರ/ಪ್ಯಾಂಟ್ ಹಾಗೂ ಪುರುಷ ಅಭ್ಯರ್ಥಿಗಳು ಬಿಳಿ ಟೀ ಶರ್ಟ್, ಬಿಳಿ ಟ್ರ್ಯಾಕ್‌ಪ್ಯಾಂಟ್, ಶೂ ಧರಿಸತಕ್ಕದ್ದು. ತರಬೇತಿಯ ಅಭ್ಯರ್ಥಿಗಳು ನಿಗದಿತ ಅರ್ಜಿ ಶುಲ್ಕ ಮತ್ತು ಮದ್ದು ಗುಂಡುಗಳ ಶುಲ್ಕವನ್ನು ಭರಿಸಬೇಕು. ತರಬೇತಿ ಅಭ್ಯರ್ಥಿಗಳು ದೃಷ್ಟಿದೋಷ ಹೊಂದಿರಬಾರದು ಹಾಗೂ ಮಾನಸಿಕ ಮತ್ತು ದೈಹಿಕವಾಗಿ ಸದೃಢವಾಗಿರುವ ಬಗ್ಗೆ ವೈದ್ಯಕೀಯ ಪ್ರಮಾಣ ಪತ್ರ ಸಲ್ಲಿಸಬೇಕು.
ಅಭ್ಯರ್ಥಿಗಳು ತರಬೇತಿ ವೇಳೆ ನೋಟ್‌ಬುಕ್ ಮತ್ತು ಪೆನ್ ತರತಕ್ಕದ್ದು. ಯಶಸ್ವಿಯಾಗಿ ತರಬೇತಿಯನ್ನು ಪೂರ್ಣಗೊಳಿಸಿದ ಹಾಗೂ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಮಾತ್ರ ಪ್ರಮಾಣ ಪತ್ರ ನೀಡಲಾಗುವುದು. ತರಬೇತಿಯ ಅವಧಿಯಲ್ಲಿ ಏನಾದರೂ ಅಹಿತಕರ ಘಟನೆ ಸಂಭವಿಸಿದಲ್ಲಿ ಅದಕ್ಕೆ ಅಭ್ಯರ್ಥಿಯೇ ಸಂಪೂರ್ಣ ಜವಾಬ್ದಾರರಾಗಿರುತ್ತಾರೆ. ಅರ್ಜಿ ಸಲ್ಲಿಸುವ ನಾಗರಿಕರು ಯಾವುದೇ ಅಪರಾಧಿಕ ಹಿನ್ನೆಲೆಯನ್ನು ಹೊಂದಿರದೇ ಇರುವ ಕುರಿತು ತಮ್ಮ ವ್ಯಾಪ್ತಿಯ ಪೊಲೀಸ್ ಠಾಣೆಯಿಂದ ನಿರಾಕ್ಷೇಪಣಾ ಪ್ರಮಾಣ ಪತ್ರ ಸಲ್ಲಿಸಬೇಕು ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.