ಬೆಂಗಳೂರಿನ ಅತ್ತಿಬೆಲೆ ಪಟಾಕಿ ದುರಂತದ ಬೆನ್ನಲ್ಲೇ ಕೊಪ್ಪಳ ನಗರ ಹಾಗೂ ಗಂಗಾವತಿಯಲ್ಲಿ ಪೊಲೀಸರು ದಾಳಿ ನಡೆಸಿದ್ದು, ನಿಯಮಬಾಹಿರವಾಗಿ ದಾಸ್ತಾನು ಮಾಡಿದ್ದ ಲಕ್ಷಾಂತರ ರೂ. ಮೌಲ್ಯದ ಪಟಾಕಿಗಳನ್ನು ವಶಪಡಿಸಿಕೊಂಡಿದ್ದಾರೆ.
ಗಂಗಾವತಿ ನಗರದ ಜಾಮಿಯಾ ಮಸೀದಿ ಸಮೀಪದ ಏಳು ಪಟಾಕಿ ಅಂಗಡಿ, ಮಳಿಗೆ, ಗೋದಾಮಿನ ಮೇಲೆ ಗುರುವಾರ ಪೊಲೀಸರು, ನಗರಸಭೆ, ತಾಲೂಕು ಪಂಚಾಯಿತಿ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಏಕಕಾಲಕ್ಕೆ ಜಂಟಿಯಾಗಿ ದಾಳಿ ನಡೆಸಿದರು.
ಅತ್ತಿಬೆಲೆಯಲ್ಲಿ ನಡೆದ ಪ್ರಕರಣ ಮರುಕಳಿಸಬಾರದೆಂದು ಮುಖ್ಯಮಂತ್ರಿ ಕಠಿಣ ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ಅಧಿಕಾರಿಗಳ ತಂಡ ದಾಳಿ ನಡೆಸಿದ್ದು, ಕೊಪ್ಪಳ ಜಿಲ್ಲಾಧಿಕಾರಿ ನಲಿನ್ ಅತುಲ್ ಜಿಲ್ಲೆಯ ಎಲ್ಲ ತಾಲೂಕಿನಲ್ಲಿ ಅನಧಿಕೃತ ಮತ್ತು ಜನವಸತಿ ಪ್ರದೇಶಗಳಲ್ಲಿ ಪಟಾಕಿ ಮಾರಾಟ ಅಥವಾ ಸಂಗ್ರಹ ಮಾಡಿದ್ದರೆ ಪರಿಶೀಲಿಸಿ ದಾಳಿ ನಡೆಸಿ ವರದಿ ಸಲ್ಲಿಸಬೇಕು ಎಂದು ತಾಲೂಕು ಮಟ್ಟದ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಹೀಗಾಗಿ ಗುರುವಾರ ಅಧಿಕಾರಿಗಳು ಗಂಗಾವತಿಯ ಬಳ್ಳಾರಿ ಚನ್ನಬಸಪ್ಪ, ಅಶೋಕ ಅಡಿವೆಪ್ಪ ಹೂಗಾರ, ಪಾಂಡುರಂಗ ನಾಗಪ್ಪ, ಮಹಾಬಲೇಶ್ವರ ಶಿವಶಂಕರಪ್ಪ ಅವರ ಅಂಗಡಿ ಸೇರಿದಂತೆ 7 ಮಳಿಗೆಗಳ ಮೇಲೆ ದಾಳಿ ನಡೆಸಿದರು.
ವಶಪಡಿಸಿಕೊಂಡ ಪಟಾಕಿಗಳನ್ನು ಎರಡು ಟ್ರ್ಯಾಕ್ಟರ್ ಮತ್ತು ಎರಡು ಕಸ ಸಂಗ್ರಹ ವಾಹನಗಳಲ್ಲಿ ತೆಗೆದುಕೊಂಡು ಹೋಗಿದ್ದು, ಸದ್ಯ ತಾಲೂಕು ಆಡಳಿತದ ಗೋದಾಮಿನಲ್ಲಿ ಸಂಗ್ರಹಿಸಿಟ್ಟಿದ್ದಾರೆ ಎನ್ನಲಾಗಿದೆ.
ದಾಳಿ ಬಳಿಕ ಗಂಗಾವತಿ ಡಿವೈಎಸ್‌ಪಿ ಸಿದ್ದಲಿಂಗಪ್ಪಗೌಡ ಪಾಟೀಲ ಮಾಧ್ಯಮಗಳೊಂದಿಗೆ ಮಾತನಾಡಿ, “ಜನವಸತಿ ಪ್ರದೇಶಗಳಲ್ಲಿ ಪಟಾಕಿ ಸಂಗ್ರಹಕ್ಕೆ ಅವಕಾಶವಿಲ್ಲ. ಆದರೆ, ಇಲ್ಲಿನ ಬಹುತೇಕ ಮಾಲೀಕರು ಪಟಾಕಿಗಳನ್ನು ಜನವಸತಿ ಪ್ರದೇಶಗಳಲ್ಲಿನ ಅಂಗಡಿಗಳಲ್ಲಿಟ್ಟು ಮಾರಾಟ ಮಾಡುತ್ತಿದ್ದಾರೆ. ಇದು ಕಾನೂನು ಬಾಹಿರ. ಜಪ್ತಿ ಮಾಡಿದ ಎಲ್ಲ ಪಟಾಕಿಗಳನ್ನು ಒಂದೆಡೆ ಸಂಗ್ರಹಿಸಿ, ಪಟಾಕಿ ಮಾರಾಟದ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತದೆ. ದಾಳಿ ಮುಂದುವರಿಯಲಿದೆ” ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮೈಸೂರು | ದಸರಾದಲ್ಲಿ ಕರೋಕೆ ಹಾಡು ನಿಷೇಧಿಸಲು ಆರ್ಟಿಸ್ಟ್ ಅಸೋಸಿಯೇಷನ್ ಆಗ್ರಹ
ದಾಳಿಯಲ್ಲಿ ವಶಕ್ಕೆ ಪಡೆದ ಪಟಾಕಿಗಳ ಮೊತ್ತ ₹40 ಲಕ್ಷಕ್ಕೂ ಹೆಚ್ಚು ಇರಬಹುದೆಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ಕೊಪ್ಪಳ ಗ್ರಾಮೀಣ ಠಾಣೆ ವ್ಯಾಪ್ತಿಯ ಎರಡು ಕಡೆ ಮತ್ತು ನಗರ ಠಾಣೆ ವ್ಯಾಪ್ತಿಯಲ್ಲಿ ಒಂದು ಕಡೆ ಸಂಜೆ ಪೊಲೀಸರು ದಾಳಿ ನಡೆಸಿದ್ದು, ಪರಿಶೀಲನಾ ಕಾರ್ಯ ಜರುಗುತ್ತಿದೆ.
ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಪೊಲೀಸ್ ಇನ್ಸ್‌ಪೆಕ್ಟರ್ ಮಂಜುನಾಥ, ಪುಂಡಲಿಕಪ್ಪ, ತಾಲೂಕು ಪಂಚಾಯಿತಿ ಇಒ ಲಕ್ಷ್ಮೀದೇವಿ, ನಗರಸಭೆ ಪೌರಾಯುಕ್ತ ಆರ್ ವಿರೂಪಾಕ್ಷಮೂರ್ತಿ, ನಗರಸಭೆ ಆರೋಗ್ಯ ನಿರೀಕ್ಷಕ ನಾಗರಾಜ, ಚೇತನ್ ಕುಮಾರ್ ಸೇರಿದಂತೆ ಇತರರು ಇದ್ದರು.