ರೋಹಿಣಿ ನದಿಯ ನೀರಿಗಾಗಿ ನಡೆಯುತ್ತಿದ್ದ ಯುದ್ಧ ಹಾಗೂ ಅದರಿಂದ ಆಗುತ್ತಿದ್ದ ರಕ್ತಪಾತದ ಘೋರತೆಗೆ ಬೇಸತ್ತು ಶಾಂತಿಗಾಗಿ ಬುದ್ಧ ವೈರಾಗ್ಯದ ಕಡೆಗೆ ಮುಖ ಮಾಡಿದ ಎಂದು ಹಿರಿಯ ಹೋರಾಟಗಾರ ಎಚ್ ಎಸ್ ಪಾಟೀಲ್ ಹೇಳಿದರು.
ಕೊಪ್ಪಳ ವಿಶ್ವವಿದ್ಯಾಲಯ ಹಾಗೂ ಜ್ಞಾನಬಂಧು ಪದವಿ ಪೂರ್ವ ಕಾಲೇಜು ಸಹಯೋಗದಲ್ಲಿ ಬುದ್ಧ ಪೂರ್ಣಿಮದ ಅಂಗವಾಗಿ ಹಮ್ಮಿಕೊಂಡಿದ್ದ ʼಕಾವ್ಯ ಪೂರ್ಣಿಮಾ-2025ʼ ಕಾವ್ಯಗೋಷ್ಠಿಯಲ್ಲಿ ಅವರು ಮಾತನಾಡಿದರು.
“ಬುದ್ದ ಪೂರ್ಣಿಮೆಯನ್ನು ಕೊಪ್ಪಳದಲ್ಲಿ ಆಚರಿಸುತ್ತಿರುವುದು ಔಚಿತ್ಯಪೂರ್ಣವಾಗಿದೆ. ಕಳೆದ ಒಂದೂವರೆ ವರ್ಷದಿಂದ ನಾನೂ ಕೂಡ ಬುದ್ಧನ ಮಾರ್ಗದಲ್ಲಿ ನಡೆಯುತ್ತಿದ್ದೇನೆ. ನೂರಾರು ವರ್ಷಗಳಿಂದ ಬುದ್ಧನ ಸಮಾನತೆ ಸಹಜೀವನದ ತತ್ವಗಳನ್ನು ಕಲಿತಿದ್ದೇವೆ. ಕೊಪ್ಪಳದ ಪಾಲ್ಕಿಗುಂಡ ಶಾಸನ ಹಾಗೂ ಗವಿ ಮಠದ ಶಾಸನಗಳಲ್ಲಿ ಅಶೋಕ ಇತ್ಯರ್ಥಪಡಿಸಿದ್ದಾನೆ. ಮಸ್ಕಿಯ ಶಾಸನದಲ್ಲಿ ಅಶೋಕ ಬೇರೆ ಪ್ರಿಯದರ್ಶಿನಿ ಬೇರೆ ಎಂದು ಉಲ್ಲೇಖಿಸುತ್ತಾನೆ. ಬುದ್ಧ ವೈರಾಗ್ಯ ಜೀವನ ಸ್ವೀಕರಿಸಲು ಕಾರಣ ರೋಹಿಣಿ ನದಿಯ ನೀರಿನ ಹಂಚಿಕೆಯ ಕುರಿತು ಯುದ್ದ ಸಂಭವಿಸುವ ಪ್ರಸಂಗ ಬಂದಾಗ ಯುದ್ಧ ತ್ಯಜಿಸಿ ರಕ್ತಪಾತ ಬೇಡ ಎಂದು ರಾಜ್ಯ ತೊರೆದು ಸನ್ಯಾಸ ಸ್ವೀಕರಿಸುತ್ತಾನೆ. ‘ಬೌದ್ಧರನ್ನ ಕಡಿದು ತಂದವರಿಗೆ ಬಂಗಾರದ ನಾಣ್ಯ ಕೊಡುತ್ತೇವೆʼ ಎಂದು ಆಮಿಷವೊಡ್ಡಿದ್ದರಿಂದ ಬೌದ್ಧರು ಭಾರತ ಬಿಟ್ಟು ಹೋದರು. ಆದರೆ, ಜಗತ್ತು ಸ್ವೀಕರಿಸಿತು” ಎಂದರು.
ವಿವಿ ಕುಲಪತಿ ಬಿ ಕೆ ರವಿ ಮಾತನಾಡಿ, “ಕೊಪ್ಪಳದಲ್ಲಿ ಪ್ರಗತಿಪರರು ಹಾಗೂ ಕವಿ ಮನಸುಗಳು ಹೆಚ್ಚಾಗಿದ್ದಾರೆ. ಅವರ ಸಹಕಾರ, ಉತ್ಸಾಹ ಪ್ರೇರಣೆಯಿಂದ ಬುದ್ಧ ಪೂರ್ಣಿಮಾ ದಿನದಂದ ಕಾವ್ಯ ಪೂರ್ಣಿಮಾ ಕಾರ್ಯಕ್ರಮ ಹಮ್ಮಿಕೊಳ್ಳಲು ಸಾಧ್ಯವಾಯಿತು. ಬುದ್ದನನ್ನು ಇವತ್ತಿನ ಯುವ ಪೀಳಿಗೆ ಓದಲಿಲ್ಲ. ಜಗತ್ತಿನ ಹಲವು ರಾಷ್ಟ್ರಗಳು ಬುದ್ಧನ ಚಿಂತನೆಯನ್ನು ಅಪ್ಪುಕೊಂಡವು. ಭಾರತ ಬುದ್ಧನನ್ನು ಒಪ್ಪಿ, ಅಪ್ಪಿಕೊಂಡಿದ್ದರೆ, ಭಾರತ ಇಂದು ಮೌಢ್ಯ, ಅಂಧಕಾರ ಹಾಗೂ ಅಸಮಾನತೆಯಿಂದ ದೂರ ಇದ್ದು ಅಭಿವೃದ್ಧಿಯ ಪಥದಲ್ಲಿರುತ್ತಿತ್ತು” ಎಂದರು.
ಇದನ್ನೂ ಓದಿ: ಕೊಪ್ಪಳ | ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ; ಇಬ್ಬರ ಬಂಧನ
ಕಾರ್ಯಕ್ರಮದಲ್ಲಿ ಅಲ್ಲಮಪ್ರಭು ಬೆಟ್ಟದೂರು, ಡಿ ಎಮ್ ಬಡಿಗೇರ, ಪಾರ್ವತಿ ಕನಕಗಿರಿ, ಪ್ರವಿಣ ಪಾಟೀಲ್, ಸಂತೋಷ, ಸಾವಿತ್ರಿ ಮುಜುಮದಾರ್, ರವುಕಾಂತ್, ಸಿರಾಜ್ ಬೀಸರಳ್ಳಿ, ಮಾಲತಿ ಬಡಿಗೇರ, ಈಸ್ವರ ಹತ್ತಿ, ಮಹೇಶ ಬಳ್ಳಾರಿ, ಕೆ ಬಿ ಗೋನಾಳ ಮೂವತ್ತು ಕವಿಗಳು ಹಾಗೂ ಇತರರಿದ್ದರು.