ಅಪರಾಧಿಗಳನ್ನು ದಂಡಿಸುವಾಗ ಜಾತಿ, ಧರ್ಮಗಳನ್ನು ಮಧ್ಯದಲ್ಲಿ ತರಬಾರದು ಎಂದು ಕೊಪ್ಪಳ ಡಿವೈಎಸ್ಪಿ ಸಿದ್ದಲಿಂಗಪ್ಪಗೌಡ ಪಾಟೀಲ ಹೇಳಿದರು.
ನಗರ ಠಾಣೆ ಹಾಲ್‌ನಲ್ಲಿ ರಂಜಾನ್ ಹಾಗೂ ಯುಗಾದಿ ಹಬ್ಬದ ಪ್ರಯುಕ್ತ ನಡೆದ ಶಾಂತಿ ಸೌಹಾರ್ದ ಸಭೆಯಲ್ಲಿ ಮಾತನಾಡಿದ ಅವರು, “ಸಾಮಾಜಿಕ ಸುವ್ಯವಸ್ಥೆ ಕದಲುವಂತಹ ಕೃತ್ಯ ಎಸಗಿದವರ ವಿರುದ್ಧ ಪೊಲೀಸ್ ಇಲಾಖೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತದೆ. ರಂಜಾನ್ ಮತ್ತು ಯುಗಾದಿ ಹಬ್ಬದ ಪ್ರಯುಕ್ತ ಎಲ್ಲ ಸಮುದಾಯದ ಜನರು ಸೌಹಾರ್ದಯುತವಾಗಿ ಹಬ್ಬ ಆಚರಿಸಬೇಕು. ಯಾವುದೇ ಗಲಾಟೆಯಾಗದಂತೆ, ಜನರಿಗೆ ತೊಂದರೆಯಾಗದ ರೀತಿಯಲ್ಲಿ ಸಮಾಜದ ಮುಖಂಡರು ಎಚ್ಚರಿಕೆ ವಹಿಸಬೇಕು” ಎಂದು ಸಲಹೆ ನೀಡಿದರು.
ಪಿ.ಎಸ್.ಐ ಪ್ರಕಾಶ ಮಾಳಿ ಮಾತನಾಡಿ, “ರಂಜಾನ್ ಹಬ್ಬದ ಪ್ರಯುಕ್ತ ಮಸೀದಿ ಮತ್ತು ನಾನಾ ವೃತ್ತಗಳಲ್ಲಿ ಹೆಚ್ಚುವರಿಯಾಗಿ ಪೊಲೀಸ್ ಸಿಬ್ಬಂದಿಗಳನ್ನು ನೇಮಕ ಮಾಡಲಾಗುವುದು. ಯಾವುದೇ ರೀತಿಯ ಘರ್ಷಣೆಯಾಗದ ರೀತಿ ಎಚ್ಚರ ವಹಿಸಲಾಗುವುದು ಅದಕ್ಕೆ ಸೂಕ್ತ ಸಿಬ್ಬಂದಿಗಳನ್ನು ನೇಮಕ ಮಾಡಲಾಗುವುದು” ಎಂದರು.
ಇದನ್ನೂ ಓದಿ: ಕೊಪ್ಪಳ | ಕರ್ತವ್ಯ ಲೋಪ ಆರೋಪ : ಆನೆಗೊಂದಿ ಗ್ರಾ.ಪಂ. ಪಿಡಿಒ ಅಮಾನತು
ಸಭೆಯಲ್ಲಿ ಪೊಲೀಸ್ ಇಲಾಖೆ ಸಿಬ್ಬಂದಿ, ಹಿಂದೂ-ಮುಸ್ಲಿಂ ಸಮುದಾಯದ ಮುಖಂಡರು ಹಾಗೂ ಇತರರು ಇದ್ದರು.