ಹದಿಹರೆಯದ ಅಪ್ರಾಪ್ತ ಬಾಲಕಿಗೆ ಗ್ರಾಮ ಪಂಚಾಯತಿ ಸದಸ್ಯರೇ ಮುಂದೆ ನಿಂತು ಮದುವೆ (ಬಾಲ್ಯ ವಿವಾಹ) ಮಾಡಿಸಿರುವ ಘಟನೆ ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನಲ್ಲಿ ನಡೆದಿದೆ. ಈ ಬಾಲ್ಯ ವಿವಾಹದಲ್ಲಿ ಕಂಪ್ಲಿ ಶಾಸಕ ಜಿ.ಎನ್ ಗಣೇಶ್ ಮತ್ತು ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ ಭಾಗಿಯಾಗಿದ್ದು, ಅವರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಕನಕಗಿರಿ ತಾಲೂಕಿನ ಸಿರವಾರ ಗ್ರಾಮದಲ್ಲಿ ಬಾಲ್ಯ ವಿವಾಹ ನಡೆದಿದೆ. ಗ್ರಾಮದ ಗ್ರಾಮ ಪಂಚಾಯತಿ ಸದಸ್ಯೆಯೊಬ್ಬರು ತಮ್ಮ ಮಗಳಿಗೆ ಬಾಲ್ಯ ವಿವಾಹ ನಡೆಸಿದ್ದಾರೆ. ಬಾಲ್ಯ ವಿವಾಹದ ವಿರುದ್ಧ ಜನರಲ್ಲಿ ಅರಿವು ಮೂಡಿಸಬೇಕಾದ, ಕ್ರಮ ಕೈಗೊಳ್ಳಬೇಕಾದ ಶಾಸಕ, ಮಾಜಿ ಸಚಿವ ಹಾಗೂ ಗ್ರಾಮ ಪಂಚಾಯತಿ ಅಧಿಕಾರಿಗಳೇ ಬಾಲ್ಯ ವಿವಾಹ ಸಮಾರಂಭದಲ್ಲಿ ಭಾಗಿಯಾಗಿರುವುದು ಆಕ್ರೋಶಕ್ಕೆ ಕಾರಣವಾಗಿದೆ.

ಬಾಲಕಿಯ ಬಾಲ್ಯ ವಿವಾಹಕ್ಕೆ ಸಂಬಂಧಿಸಿದಂತೆ ಕನಕಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಾಲಕಿಯನ್ನು ರಕ್ಷಿಸಲಾಗಿದೆ.
ಈ ವರದಿ ಓದಿದ್ದೀರಾ?: ‘ಒಂದೊಂದ್ಸಲ ಅಂಗಾಯ್ತದೆ, ತಡಕಬೇಕು’ ಎಂದ ಚೆಂಡು ಹೂವು ಬೆಳೆದು ಬಾಡಿದ ರೈತ ಅಶ್ವತ್ಥರೆಡ್ಡಿ
ಬಾಲ್ಯ ವಿವಾಹದ ವಿರುದ್ಧ ದೇಶದಲ್ಲಿ ‘ಬಾಲ್ಯ ವಿವಾಹ ನಿಷೇಧ ಕಾಯಿದೆ-2006’ ಜಾರಿಯಲ್ಲಿದೆ. ಬಾಲ್ಯ ವಿವಾಹವನ್ನು ನಿಷೇಧಿಸಲಾಗಿದೆ. ಭಾರತದಲ್ಲಿ ಮದುವೆ ವಯಸ್ಸು ಹೆಣ್ಣು ಮಕ್ಕಳಿಗೆ 18 ವರ್ಷ ಮತ್ತು ಗಂಡು ಮಕ್ಕಳಿಗೆ 21 ವರ್ಷ ಎಂದು ನಿಗದಿ ಮಾಡಲಾಗಿದೆ. ಆದಾಗ್ಯೂ, ದೇಶದಲ್ಲಿ ಬಾಲ್ಯ ವಿವಾಹಗಳು ಹೆಗ್ಗಿಲ್ಲದೆ ನಡೆಯುತ್ತಿವೆ. ಕರ್ನಾಟಕದಲ್ಲಿ 2021-22ರ ಅವಧಿಯಲ್ಲಿ 2,819 ಬಾಲ್ಯ ವಿವಾಹ ಪ್ರಕರಣಗಳ ದೂರು ದಾಖಲಾಗಿವೆ. ಈ ಪೈಕಿ 2,401 ವಿವಾಹಗಳನ್ನು ತಡೆಯಲಾಗಿದೆ.