ಬಾಡಿಗೆ ಕಟ್ಟಲಾಗದೆ ಇರುವ ಮನೆಯನ್ನೂ ಬಿಟ್ಟು ಭಾಗ್ಯನಗರದ ತಾಯಮ್ಮ-ಸಾಯಿಬಾಬಾ ದೇವಸ್ಥಾನಗಳ ಆವರಣದಲ್ಲಿ ವಾಸವಿದ್ದ ರತ್ನಾ ದೊಡ್ಡಮನಿ ಎಂಬ ಅಸಹಾಯಕ ಮಹಿಳೆಗೆ ತ್ವರಿತವಾಗಿ ಸೂರು ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿಗಳ ಕಚೇರಿ ಸ್ಥಳೀಯ ಆಡಳಿತ ಸಂಸ್ಥೆಗೆ ಸೂಚಿಸಿದ ಹಿನ್ನೆಲೆಯಲ್ಲಿ ಕೊಪ್ಪಳದ ತೆಗ್ಗಿನಕೇರಿ ನಗರ ವಸತಿ ನಿರಾಶ್ರಿತರ ಕೇಂದ್ರದಲ್ಲಿ ಉಳಿಯಲು ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಕೊಪ್ಪಳ ನಗರಸಭೆಯ ಪೌರಾಯುಕ್ತರು ತಿಳಿಸಿದ್ದಾರೆ.
ರತ್ನಾ ಪಿ ದೊಡ್ಡಮನಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ನಂತರದ ದಿನಗಳಲ್ಲಿ ಬಾಡಿಗೆ ಕಟ್ಟಲು ಸಾಧ್ಯವಾಗದೆ, ತಾವಿದ್ದ ಮನೆಯನ್ನು ಬಿಟ್ಟು, ತಾಲೂಕಿನ ಭಾಗ್ಯನಗರದ ತಾಯಮ್ಮ-ಸಾಯಿಬಾಬಾ ದೇವಸ್ಥಾನದ ಆವರಣದಲ್ಲಿ ಆಶ್ರಯ ಪಡೆದಿದ್ದರು. ಸಂತ್ರಸ್ತೆಗೆ ಕೂಡಲೇ ನಿವೇಶನ ಒದಗಿಸಿಕೊಡುವಂತೆ ಮಾಧ್ಯಮಗಳು ವರದಿ ಮಾಡಿ ಆಗ್ರಹಿಸಿದ್ದವು. ಇದನ್ನು ಗಮನಿಸಿದ ಮುಖ್ಯಮಂತ್ರಿಗಳ ಕಚೇರಿಯ ಕುಂದು ಕೊರತೆ ವಿಭಾಗದ ವಿಶೇಷ ಕರ್ತವ್ಯಾಧಿಕಾರಿಗಳು, ಪರಿಶೀಲಿಸಿ, ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದರು.
ಸೂಚನೆ ಅನ್ವಯ 2024ರ ಆಗಸ್ಟ್ 10ರಂದು ಆಶ್ರಯ ಸಮಿತಿ ಸಭೆಯಲ್ಲಿ ನಿವೇಶನ ರಹಿತರಿಗೆ ನಿವೇಶನ ಹಂಚಿಕೆ ಮಾಡಲು ಆಯ್ಕೆ ಪ್ರಕ್ರಿಯೆಯಲ್ಲಿ ರತ್ನಾ ಪಿ ದೊಡ್ಡಮನಿ ಅವರ ಹೆಸರನ್ನು ಸೇರಿಸಲಾಗಿತ್ತು. ಇದಕ್ಕೆ ಸಂಬಂಧಪಟ್ಟಂತೆ ರಾಜೀವ ಗಾಂಧಿ ವಸತಿ ನಿಗಮದ ವೆಬ್‌ಸೈಟ್‌ನಲ್ಲಿ ಮಾಹಿತಿಗಳನ್ನು ಈಗಾಗಲೇ ನೋಂದಣಿ ಮಾಡಲಾಗಿದ್ದು, ಸರ್ವೇ ನಂ.32/1,2,3,4,5 ಹಾಗೂ 41/11ರ ಕೆಜಿಪಿ ವಿನ್ಯಾಸ ನಕ್ಷೆಯನ್ನು ತಯಾರಿಸಲು ಭೂ ದಾಖಲೆಗಳ ಕಾರ್ಯಾಲಯಕ್ಕೆ ಸಲ್ಲಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಪೂರ್ಣಚಂದ್ರ ಕನ್ನಡ ಸಾಂಸ್ಕೃತಿಕ ಅಧ್ಯಯನ ಕೇಂದ್ರ ಸ್ಥಾಪನೆ; ಏ.27ರಂದು ಉದ್ಘಾಟನೆ
“ಸದರಿ ಕೆಜಿಪಿ ವಿನ್ಯಾಸ ನಕ್ಷೆ ಅನುಮೋದನೆಗೊಂಡ ನಂತರ ಜಿಲ್ಲಾಧಿಕಾರಿಗಳ ಮುಖಾಂತರ ರಾಜೀವ್ ಗಾಂಧಿ ವಸತಿ ನಿಗಮಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು” ಎಂದು ನಗರಸಭೆಯ ಪೌರಾಯುಕ್ತರು ತಿಳಿಸಿದ್ದಾರೆ.